ಸಾರಾಂಶ
ಗದಗ: ಕೋಲ್ಕತ್ತಾದ ಆರ್.ಜಿ. ಕರ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಬರ್ಬರ ಕೊಲೆ ಖಂಡಿಸಿ, ವೈದ್ಯರಿಗೆ ಸುರಕ್ಷತೆ ಒದಗಿಸಲು ಮತ್ತು ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿ ಕೋಲ್ಕತ್ತಾದ ವೈದ್ಯರು ಹಾಗೂ ವೈದ್ಯ ವಿದ್ಯಾರ್ಥಿಗಳು ಕೈಗೊಂಡಿರುವ ಅಮರಣ ಉಪವಾಸ ಸತ್ಯಾಗ್ರಹ ಬೆಂಬಲಿಸಿ ಗದಗ ಐಎಂಎ ಜೆಡಿಎನ್ ಹಾಗೂ ಐಎಂಎ ಎಂಎಸ್‌ಎನ್ ಸಂಘಟನೆಗಳು ಪ್ರತಿಭಟನೆ ನಡೆಸಿದವು.ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ವೈದ್ಯರು, ಕೊಲೆಯಾದ ವಿದ್ಯಾರ್ಥಿನಿಯ ಕುಟುಂಬಕ್ಕೆ ನ್ಯಾಯ ಮತ್ತು ಪರಿಹಾರ ಒದಗಿಸಬೇಕು, ವೈದ್ಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಲ್ಲೆ-ಕೊಲೆ ನಡೆಸುವ ದುಷ್ಠ ಶಕ್ತಿಗಳ ವಿರುದ್ಧ ಕೇಂದ್ರ ಸರಕಾರ ಕಠಿಣ ಕಾನೂನು ರಚಿಸಿ ತಕ್ಷಣದಿಂದ ಜಾರಿಗೊಳಿಸಬೇಕು. ಆಸ್ಪತ್ರೆಗಳನ್ನು ಸುರಕ್ಷಿತ ಪ್ರದೇಶವೆಂದು ಘೋಷಿಸಿ ಅಗತ್ಯ ಕ್ರಮ ಜರುಗಿಸಬೇಕು. ವೈದ್ಯರಿಗೆ ಅದರಲ್ಲೂ ವಿಶೇಷವಾಗಿ ಮಹಿಳಾ ವೈದ್ಯರಿಗೆ ಸಂಪೂರ್ಣ ಸುರಕ್ಷತೆ-ಭದ್ರತೆ ಒದಗಿಸಬೇಕು, ಪಶ್ಚಿಮ ಬಂಗಾಲ ರಾಜ್ಯದ ಆರೋಗ್ಯ ಕಾರ್ಯದರ್ಶಿ ಹಾಗೂ ಉನ್ನತ ಪೊಲೀಸ್ ಅಧಿಕಾರಿಗಳನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಜಿಮ್ಸ್‌ನಲ್ಲಿ ವೈದ್ಯರು, ವೈದ್ಯ ವಿದ್ಯಾರ್ಥಿಗಳು ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ಉಪವಾಸದೊಂದಿಗೆ ಸಭೆ, ಪ್ರತಿಭಟನೆ, ಮುಷ್ಕರ ನಡೆಸುವ ಮೂಲಕ ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಎಚ್ಚರಿಕೆ ರವಾನಿಸಿದರು. ಗದಗ ಐಎಂಎ ಅಧ್ಯಕ್ಷ ಡಾ. ಪವನ್ ಪಾಟೀಲ, ಕಾರ್ಯದರ್ಶಿ ತುಕಾರಾಮ ಸೂರಿ, ರಾಷ್ಟ್ರೀಯ ಐಎಂಎ ಉಪಾಧ್ಯಕ್ಷ ಡಾ. ಜಿ.ಬಿ. ಬಿಡಿನಹಾಳ, ರಾಜ್ಯ ಐಎಂಎ ನಿಕಟಪೂರ್ವ ಅಧ್ಯಕ್ಷ ಡಾ. ರಾಜಶೇಖರ ಬಳ್ಳಾರಿ, ಐಎಂಎ ಜೆಡಿಎನ್ ಅಧ್ಯಕ್ಷ ಡಾ. ಅಬ್ದುಲ್, ಡಾ. ಶರಣು ಆಲೂರ ಸೇರಿದಂತೆ ಎಲ್ಲ ವೈದ್ಯರು, ವಿದ್ಯಾರ್ಥಿಗಳು, ವೈದ್ಯಕೀಯ ಸಿಬ್ಬಂದಿಯಿದ್ದರು.