ಲಾಠಿ ಚಾರ್ಜ್ ಖಂಡಿಸಿ ಹೆದ್ದಾರಿ ತಡೆ

| Published : Dec 13 2024, 12:49 AM IST

ಸಾರಾಂಶ

2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ಶಾಂತಿಯುತ ಪ್ರತಿಭಟನೆ ಮಾಡುತ್ತಿದ್ದವರ ಮೇಲೆ ಲಾಠಿಜಾರ್ಚ್ ಮಾಡಿರುವುದನ್ನು ವಿರೋಧಿಸಿ ಕೊಪ್ಪಳ ಬಳಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು.

೨ಎ ಮೀಸಲಾತಿಗೆ ಒತ್ತಾಯಿಸಿ ಜಿಲ್ಲಾದ್ಯಂತ ಪಂಚಮಸಾಲಿ ಸಮಾಜದವರಿಂದ ಪ್ರತಿಭಟನೆ । ಸರ್ಕಾರದ ವಿರುದ್ಧ ಆಕ್ರೋಶಕನ್ನಡಪ್ರಭ ವಾರ್ತೆ ಕೊಪ್ಪಳ

2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ಶಾಂತಿಯುತ ಪ್ರತಿಭಟನೆ ಮಾಡುತ್ತಿದ್ದವರ ಮೇಲೆ ಲಾಠಿಜಾರ್ಚ್ ಮಾಡಿರುವುದನ್ನು ವಿರೋಧಿಸಿ ಕೊಪ್ಪಳ ಬಳಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು.

ಪಂಚಮಸಾಲಿ ಸಮಾಜದ ಸ್ವಾಮೀಜಿ ಕರೆಯ ಮೇಲೆ ಕೊಪ್ಪಳ ಬಳಿ ಹೆದ್ದಾರಿಯಲ್ಲಿ ಸೇರಿದಂತೆ ಜಿಲ್ಲಾದ್ಯಂತ ತಾಲೂಕು ಕೇಂದ್ರಗಳಲ್ಲಿಯೂ ಪಂಚಮಸಾಲಿ ಸಮಾಜದ ವತಿಯಿಂದ ಪ್ರತಿಭಟನೆ ನಡೆಯಿತು.

ಕೊಪ್ಪಳ ನಗರದ ಹೊಸಪೇಟೆ ರಸ್ತೆಯ ಬೈಪಾಸ್ ಬಳಿ ಹೆದ್ದಾರಿ ತಡೆದು, ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಲಾಯಿತು. ಏಕಾಏಕಿ ಹಲ್ಲೆ ಮಾಡಿರುವ ಪೊಲೀಸರ ವಿರುದ್ಧ ಕ್ರಮವಹಿಸಬೇಕು ಮತ್ತು ಪಂಚಮ ಸಾಲಿ ಸಮುದಾಯದ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಲಾಯಿತು.

ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ನೀಡಬೇಕು ಎಂದು ನಿರಂತರ ಹೋರಾಟ ನಡೆದಿದೆ. ನಮ್ಮ ಸಮಾಜದ ಮಕ್ಕಳ ಭವಿಷ್ಯದ ಬದುಕಿಗಾಗಿ ನಮ್ಮ ಹೋರಾಟ ನಡೆದಿದೆ. ಆದರೆ ಅಧಿಕಾರಕ್ಕೆ ಬಂದ ಯಾವುದೇ ಸರ್ಕಾರಗಳು ನಮ್ಮ ಮೀಸಲಾತಿ ಬಗ್ಗೆ ಸ್ಪಂದಿಸುತ್ತಿಲ್ಲ. ಬೆಳಗಾವಿಯ ಸುವರ್ಣಸೌಧದಲ್ಲಿ ಅಧಿವೇಶನ ನಡೆಯುವ ವೇಳೆ ಕೂಡಲಸಂಗಮ ಪೀಠದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ಸಾವಿರಾರು ಪಂಚಮಸಾಲಿಗರು ಬೃಹತ್ ಹೋರಾಟ ನಡೆಸಿದ ವೇಳೆ ಸರ್ಕಾರವು ಅಮಾನವೀಯವಾಗಿ ವರ್ತಿಸಿದೆ. ಪೊಲೀಸ್ ಪಡೆ ಮುಂದೆ ಬಿಟ್ಟು ಪಂಚಮಸಾಲಿಗರ ಮೇಲೆ ಲಾಠಿ ಜಾರ್ಚ್ ಮಾಡಿಸಿದ್ದಾರೆ ಎಂದು ಸಮಾಜದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡುವುದು ಪ್ರತಿಯೊಬ್ಬರ ಹಕ್ಕಾಗಿದೆ. ಆದರೆ ಸಿಎಂ ಸಿದ್ದರಾಮಯ್ಯ ಸರ್ಕಾರವು ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ಸಂವಿಧಾನದ ಬಗ್ಗೆ ಹೆಚ್ಚು ತಿಳಿದಿರುವ ಹಾಗೂ ಬಡವರ ಬಗ್ಗೆ ಕಾಳಜಿ ಹೊಂದಿರುವ ಸಿಎಂ ಸಿದ್ದರಾಮಯ್ಯ ಅವರು ಮೀಸಲಾತಿ ಕೊಡಲು ನಿರ್ಲಕ್ಷ್ಯ ಧೋರಣೆ ತಾಳುತ್ತಿರುವುದು ಸರಿಯಲ್ಲ. ಕೂಡಲೇ ಸಮಾಜಕ್ಕೆ ೨ಎ ಮೀಸಲಾತಿ ಕೊಡಬೇಕು. ಅಲ್ಲದೆ ಅಖಂಡ ವೀರಶೈವ ಲಿಂಗಾಯತ ಸಮುದಾಯಕ್ಕೆ ಓಬಿಸಿ ಪಟ್ಟಿಗೆ ಸೇರ್ಪಡೆಗಾಗಿ ರಾಜ್ಯ ಸರ್ಕಾರದ ಸಚಿವ ಸಂಪುಟದಲ್ಲಿ ಶಿಫಾರಸ್ಸು ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರವು ಅದನ್ನೂ ಮಾಡುತ್ತಿಲ್ಲ. ಸಿದ್ದರಾಮಯ್ಯ ಸರ್ಕಾರ ಇದೇ ರೀತಿ ನಿರ್ಲಕ್ಷ್ಯ ವಹಿಸಿದರೆ ಮುಂದಿನ ದಿನಗಳಲ್ಲಿ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಟ್ರಾಫಿಕ್ ಜಾಮ್:ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದ್ದರಿಂದ ಸಂಚಾರ ಸಮಸ್ಯೆಯಾಗಿ ಟ್ರಾಫಿಕ್ ಸಮಸ್ಯೆಯಾಯಿತು. ಸುಮಾರು ಅರ್ಧಗಂಟೆಗೂ ಅಧಿಕ ಕಾಲ ವಾಹನಗಳು ಸಾಲುಗಟ್ಟಿ ನಿಂತಿದ್ದು ಕಂಡುಬಂದಿತು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಉಪವಿಭಾಗಾಧಿಕಾರಿ ಕ್ಯಾ. ಮಹೇಶ ಮಾಲಗಿತ್ತಿ ಮನವಿ ಸ್ವೀಕರಿಸಿದರು.

ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ್, ತಾಲೂಕು ಅಧ್ಯಕ್ಷ ಕರಿಯಪ್ಪ ಮೇಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವರಾಜ್ ಹಾಲ ಸಮುದ್ರ ಸೇರಿದಂತೆ ಹಲವರು ಭಾಗಿಯಾಗಿದ್ದರು.