ಸಾರಾಂಶ
ಕನ್ನಡಪ್ರಭ ವಾರ್ತೆ ಅರಕಲಗೂಡು
ಸರ್ಕಾರದ ಜನ ವಿರೋಧಿ ಬೆಲೆ ಏರಿಕೆ ವಿರೋಧಿಸಿ ಸುವರ್ಣ ಕರ್ನಾಟಕ ರಕ್ಷಣಾ ಸೇನೆ ಕಾರ್ಯಕರ್ತರು ಬುಧವಾರ ಕೊಣನೂರಿನ ಸಿದ್ದಾಪುರ ಗೇಟ್‌ನಲ್ಲಿ ರಸ್ತೆ ಮಧ್ಯೆ ನಿಂತು ಪ್ರತಿಭಟನೆ ನಡೆಸಿದರು.ಬಳಿಕ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಡಾ. ಎಸ್ ರಾಘವೇಂದ್ರ ಗೌಡ್ರು ಮಾತನಾಡಿ, ರಾಜ್ಯ ಸರ್ಕಾರ ಜನ ವಿರೋಧಿ ಬೆಲೆ ಏರಿಕೆಯನ್ನು ಕೂಡಲೇ ಹಿಂಪಡೆಯಬೇಕು. ಪ್ರತಿ ತಿಂಗಳು ಒಂದಲ್ಲ ಒಂದು ರೀತಿ ಬೆಲೆ ಹೆಚ್ಚಿಸುತ್ತಿದ್ದಾರೆ. ಪೆಟ್ರೋಲ್, ಡೀಸೆಲ್, ಬಸ್ ಪ್ರಯಾಣದರ ಹೆಚ್ಚಿಸಿ ಸಾಮಾನ್ಯ ಜನ ಬಳಸುವ ಹಾಲಿನ ದರವನ್ನೂ ಇನ್ನೆಂದೂ ಇಲ್ಲದ ರೀತಿಯಲ್ಲಿ ಒಂದೇ ಬಾರಿಗೆ ಒಂದು ಲೀಟರ್‌ಗೆ ನಾಲ್ಕು ರು. ಹೆಚ್ಚಿಸಿದ್ದಾರೆ. ಒಟ್ಟಾರೆ ಒಂದೇ ವರ್ಷದಲ್ಲಿ ಹಾಲಿಗೆ ಒಂದು ಲೀಟರ್‌ಗೆ 9 ರು. ಹೆಚ್ಚಿಸಿದ್ದಾರೆ. ವಿದ್ಯುತ್ ದರವನ್ನು ಪ್ರತಿ ಯೂನಿಟ್ ಗೆ 36 ಪೈಸೆ ಹೆಚ್ಚಿಸಿದ್ದಾರೆ. ಇದರಿಂದ ಸಣ್ಣ, ಮಧ್ಯಮ ವರ್ಗದ ಜನ ಜೀವನ ಮಾಡಲು ಸಾಧ್ಯವಿಲ್ಲದೆ ಉಸಿರುಗಟ್ಟುವ ಸ್ಥಿತಿ ಬಂದಿದೆ. ನೋವು ಅನುಭವಿಸುತ್ತಿರುವ ಜನಪರ ನಿಲ್ಲುವ ಪರಿಸ್ಥಿತಿ ಉದ್ಭವವಾಗಿದೆ ಎಂದರು.
ಡೀಸೆಲ್ ಬೆಲೆ ಏರಿಕೆಯಿಂದಾಗಿ ವಿವಿಧ ಅಗತ್ಯ ವಸ್ತು ಸೇವೆಗಳ ಬೆಲೆ ಏರಿಕೆ ಆಗುತ್ತದೆ. ಆದ್ದರಿಂದ ಬೆಲೆ ಏರಿಕೆಯನ್ನು ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಸುವರ್ಣ ಕರ್ನಾಟಕ ರಕ್ಷಣಾ ಸೇನೆ ಇನ್ನು ಹೆಚ್ಚಿನ ರೀತಿಯಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ. ಬಡ ಜನರಿಗೆ ಆರೋಗ್ಯದಲ್ಲಿ ಏರುಪೇರಾದಾಗ ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ, ಮಾತ್ರೆ ಸೌಲಭ್ಯಗಳು ಸಿಗಬೇಕು. ಮಕ್ಕಳಿಗೆ ಶಾಲೆಯಲ್ಲಿ ಮೂಲಭೂತ ಸೌಕರ್ಯದೊಂದಿಗೆ ಉತ್ತಮ ವಿದ್ಯಾಭ್ಯಾಸ ದೊರಕಬೇಕು. ಹಾಗೂ ಸರ್ಕಾರಿ ಶಾಲೆಯಲ್ಲಿ ಓದಿರುವಂತ ಮಕ್ಕಳಿಗೆ ಸರ್ಕಾರಿ ಕೆಲಸ ಸಿಗುವಂತಾಗಬೇಕು. ಆ ಭಾಗ್ಯ ಈ ಭಾಗ್ಯ ಗ್ಯಾರೆಂಟಿ ಭಾಗ್ಯ ಅಂತ ಹೇಳಿ ರಾಜ್ಯವನ್ನ ದಿವಾಳಿ ಮಾಡಬೇಡಿ. ನಿಮ್ಮ ಉಚಿತ ಭಾಗ್ಯಗಳಿಂದಾಗಿ ರಾಜ್ಯದ ಜನರ ತಮ್ಮ ತಮ್ಮ ಕೆಲಸಗಳನ್ನು ಮಾಡದೆ ಸೋಂಬೇರಿಗಳಾಗುತ್ತಿದ್ದಾರೆ. ಹಾಗೂ ಜನರಿಗೆ ನಿಮ್ಮಿಂದ ಹೆಚ್ಚಿನ ತೊಂದರೆ ಆಗುತ್ತಿದ್ದು, ಎಲ್ಲಾ ರೀತಿಯ ವಸ್ತುಗಳು ಬೆಲೆ ಏರಿಕೆಯಿಂದ ಜನರ ತತ್ತರಿಸಿ ಹೋಗಿದ್ದಾರೆ ಬೆಲೆ ಏರಿಕೆ ಮಾಡೋದು ಗೊತ್ತೇ ಹೊರತು ಬೆಲೆ ಕಡಿಮೆ ಮಾಡೋದು ಗೊತ್ತಿಲ್ಲ. ಇದರಿಂದ ಸಾಮಾನ್ಯ ವರ್ಗದ ಜನರಿಗೆ ಪ್ರಾಣ ಕಳೆದುಕೊಳ್ಳುವ ಸ್ಥಿತಿ ಉದ್ಭವವಾಗಿದೆ. ರಾಜ್ಯ ಸರ್ಕಾರ ಕೂಡಲೇ ಬೆಲೆ ಏರಿಕೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಸೇನೆಯ ರಾಜ್ಯ ಮಹಿಳಾ ಅಧ್ಯಕ್ಷರಾದ ಮಧುಶ್ರೀ, ಹಾಸನ ರೈತರ ಘಟಕ ಜಿಲ್ಲಾ ಅಧ್ಯಕ್ಷ ಸುದೀಪ್ ಗೌಡ, ಉದ್ಯಮ ಘಟಕ ಜಿಲ್ಲಾ ಅಧ್ಯಕ್ಷರಾದ ಮಣಿ ಮಲ್ಲೇಶ್, ತಾಲೂಕು ಅಧ್ಯಕ್ಷರಾದ ಗಿರೀಶ್ ಗೌಡ, ಮೆಕಾನಿಕ್ ರಮೇಶ್, ಸಿವಿತೋಟ ಪ್ರಕಾಶ್ ಗೌಡ, ಆನಂದ್ ಆಚಾರ್, ಅನಿತಾಚಾರ್, ನಿತೇಶ್ ಗೌಡ, ಹೋಟೆಲ್ ರೇವಣ್ಣ, ಸಿಗೋಡು ವಾಸು, ನಂಜೇಗೌಡ, ಗೋಪಾಲ್ ಆಚಾರ್, ಕರಿಯಪ್ಪ, ಪಾಪಾಚಾರಿ, ಸ್ವಾಮಿಗೌಡ್ರು, ದರ್ಶನ್, ಶಶಾಂಕ್, ಸುದರ್ಶನ್, ಫಯಾಜ್, ನಾಗೇಶ್, ನಾಗಣ್ಣ, ಪ್ರದೀಪ್ ಬೇಕರಿ, ಯೋಗೇಶ್, ಸಿಮೆಂಟ್ ಚಿದಾನಂದ, ರವಿ ಆಚಾರ್, ಕೃಷ್ಣೇಗೌಡ, ಸುನಿಲ್ ಮತ್ತಿತರಿದ್ದರು.