ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳತ್ತ ಪಾದರಕ್ಷೆ ಎಸೆಯಲು ಮುಂದಾದ ವಕೀಲರೊಬ್ಬರ ವರ್ತನೆ ಖಂಡಿಸಿ ಮೈಸೂರು ವಿವಿ ಮಾನಸ ಗಂಗೋತ್ರಿ ವಿದ್ಯಾರ್ಥಿಗಳು ಅಂಬೇಡ್ಕರ್ ಪ್ರತಿಮೆ ಬಳಿಯಿಂದ ಮುಖ್ಯ ದ್ವಾರದ ಕುವೆಂಪು ಪ್ರತಿಮೆವರೆಗೆ ಪಂಜಿನ ಮೆರವಣಿಗೆ ನಡೆಸಿ ಪ್ರತಿಭಟಿಸಿದರು.ದೇಶದ ಪ್ರತಿಷ್ಠಿತ ಸಂವಿಧಾನಿಕ ಹುದ್ದೆಗಳಲ್ಲಿ ಒಂದಾದ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳಿಗೆ ವಕೀಲರೊಬ್ಬರು ಕೋರ್ಟಿನ ಆವರಣದೊಳಗೆ ತಮ್ಮ ಪಾದರಕ್ಷೆಯನ್ನು ಎಸೆಯಲು ಮುಂದಾಗಿದ್ದು, ಇದೊಂದು ದೇಶ ವಿರೋಧಿ ಕೃತ್ಯ. ಇದು ಮನುವಾದಿಗಳ ಮನಸ್ಥಿತಿಯನ್ನು ಜಗತ್ತಿನ ಮುಂದೆ ಬಿತ್ತರಿಸುವಂಥದ್ದು. ಭಾರತದ ಪ್ರಜಾಪ್ರಭುತ್ವದೊಳಗೆ ಸಂವಿಧಾನದ ತಳಹದಿಯಲ್ಲಿ ಜೀವಿಸುತ್ತಿರುವ ಪ್ರತಿಯೊಬ್ಬ ನಾಗರಿಕನು ಗೌರವಿಸಬೇಕಾದ ಹುದ್ದೆಯನ್ನು ಅತ್ಯಂತ ಅನಾಗರಿಕವಾಗಿ ಅಗೌರವ ತೋರಿಸಿರುವುದು ದೇಶವೇ ತಲೆತಗ್ಗಿಸುವ ವಿಷಯವಾಗಿದೆ. ಇಂತಹ ಸಮಾಜಬಾಹಿರ ಕೃತ್ಯವನ್ನು ಪ್ರತಿಯೊಬ್ಬರು ಖಂಡಿಸಬೇಕು ಎಂದು ಪ್ರತಿಭಟನಾಕಾರರು ತಿಳಿಸಿದರು. ಈ ವೇಳೆ ಸಂಶೋಧಕ ಸಂಘದ ಮಾಜಿ ಅಧ್ಯಕ್ಷ ಶಿವಶಂಕರ್ ಕನ್ನೇನಹಳ್ಳಿ, ದಲಿತ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಪುನೀತ್ ಆಲನಹಳ್ಳಿ, ಮಹೇಶ್ ಪಿ. ಮರಳ್ಳಿ, ರಾಜೇಶ್ ಚಾಕನಹಳ್ಳಿ, ರವಿಕುಮಾರ್, ಸಂಜಯ್ ಸಿಂಗಮಾರನಹಳ್ಳಿ, ನವೀನ್ ಕುಕ್ಕರಹಳ್ಳಿ, ಕಿರಣ್, ಪಾರ್ಥ, ಗೌತಮ್ ಮೊದಲಾದವರು ಇದ್ದರು.