ಮೈಲಾರ ಸಕ್ಕರೆ ಕಾರ್ಖಾನೆ ಬಂದ್‌ ಮಾಡಿದ ಪ್ರತಿಭಟನಾಕಾರರು

| Published : Nov 08 2025, 02:30 AM IST

ಸಾರಾಂಶ

ಕಾರ್ಖಾನೆ ಬಾಗಿಲು ಬಂದ್‌ ಮಾಡಿ ಕಬ್ಬು ತುಂಬಿರುವ ಟ್ರ್ಯಾಕ್ಟರ್‌ ಮತ್ತು ಲಾರಿಗಳನ್ನು ತಡೆದರು.

ಹೂವಿನಹಡಗಲಿ: ಕಬ್ಬಿನ ದರ ₹3500ಗೆ ನಿಗದಿ ಮಾಡಬೇಕೆಂದು ಒತ್ತಾಯಿಸಿ ಕಬ್ಬು ಬೆಳೆಗಾರರ ಸಂಘ ಮತ್ತು ರೈತರು ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಹೋರಾಟ ಸಂಜೆವರೆಗೂ ನಡೆಯಿತು.

ಹೋರಾಟ ಆರಂಭಕ್ಕೂ ಮುನ್ನ ಮೈಲಾರ ಸಕ್ಕರೆ ಕಾರ್ಖಾನೆ ಮುಂದೆ ನೆರೆದಿದ್ದ ರೈತರು ಕಾರ್ಖಾನೆ ಬಾಗಿಲು ಬಂದ್‌ ಮಾಡಿ ಕಬ್ಬು ತುಂಬಿರುವ ಟ್ರ್ಯಾಕ್ಟರ್‌ ಮತ್ತು ಲಾರಿಗಳನ್ನು ತಡೆದರು. ಕಾರ್ಖಾನೆಯನ್ನು ಕೂಡಲೇ ಬಂದ್‌ ಮಾಡಲು ಒತ್ತಾಯಿಸಿದಾಗ, ಇದಕ್ಕೆ ಅಧಿಕಾರಿಗಳು ಸ್ಪಂದಿಸಿ, ಸ್ಥಳದಲ್ಲೇ ಇದ್ದ ತಹಸೀಲ್ದಾರ್‌ ಜಿ.ಸಂತೋಷಕುಮಾರ ಹಾಗೂ ಡಿವೈಎಸ್ಪಿ ಸಂತೋಷ ಚವ್ಹಾಣ್‌, ಸಿಪಿಐ ದೀಪಕ್‌ ಬೋಸರಡ್ಡಿ, ಕಾರ್ಖಾನೆ ಮಾಲಕರೊಂದಿಗೆ ಚರ್ಚಿಸಿ ಅರ್ಧ ಗಂಟೆಯಲ್ಲಿ ಕಾರ್ಖಾನೆ ಕಬ್ಬು ಅರೆಯುವುದನ್ನು ನಿಲ್ಲಿಸಿದರು.

ಕಾರ್ಖಾನೆ ಬಾಗಿಲಿಗೆ ಟೆಂಟ್‌ ಹಾಕಲು ರೈತರು ಪಟ್ಟು ಹಿಡಿದರು. ಆದರೆ ಪೊಲೀಸರು ಇದಕ್ಕೆ ಅವಕಾಶ ನೀಡಲಿಲ್ಲ. ಕಾರ್ಖಾನೆ ಪಕ್ಕದ ಜಾಗದಲ್ಲಿ ರೈತರಿಗೆ ವೇದಿಕೆ ಹಾಕಲಾಗಿತ್ತು. ಮೈಲಾರ ಕ್ರಾಸ್‌, ಕುರುವತ್ತಿ ಪ್ಲಾಟ್‌ ಮತ್ತು ಮೈಲಾರ ಸಕ್ಕರೆ ಕಾರ್ಖಾನೆ ಸೇರಿದಂತೆ ಮೂರು ಕಡೆ ಪ್ರತಿಭಟನೆ ನಡೆದಿದ್ದು, ಆ ಎಲ್ಲ ಜಾಗಗಲ್ಲಿ ಪೊಲೀಸರ ನಿಯೋಜಿಸಲಾಗಿತ್ತು.

ಪ್ರತಿಭಟನೆಯಲ್ಲಿ ಕಬ್ಬು ಬೆಳೆಗಾರರ ಸಂಘದ ರಾಜ್ಯ ಕಾರ್ಯದರ್ಶಿ ವೀರನಗೌಡ ಪಾಟೀಲ್‌ ಮಾತನಾಡಿ, ಕಬ್ಬು ಬೆಳೆಯುವ ರೈತರ ಜಮೀನಿನಲ್ಲೇ ರಿಕವರಿ ಕಂಡು ಹಿಡಿಯುವ ಯಂತ್ರವಿದೆ. ಕಾರ್ಖಾನೆ ಮಾಲಕರು ಜಮೀನುಗಳಿಗೆ ಹೋಗಿ ರಿಕವರಿ ಪರೀಕ್ಷೆ ಮಾಡಬೇಕು. ಇದರಲ್ಲಿ ದೊಡ್ಡ ಮೋಸದ ದಂಧೆ ಇದೆ. ಇದನ್ನು ತಡೆದರೇ ಶೇ.90ರಷ್ಟು ಮೋಸ ತಡೆದಂತೆ ಆಗುತ್ತದೆ. ಜತೆಗೆ ಕಬ್ಬಿನ ಉಪ ಉತ್ಪನ್ನದಿಂದ ಬರುವ ಆದಾಯದಲ್ಲಿ ಶೇ.30 ರಷ್ಟು ರೈತರಿಗೆ, ಶೇ.70 ರಷ್ಟು ಕಾರ್ಖಾನೆಯವರಿಗೆ ನೀಡಬೇಕೆಂಬ ನಿಯಮವಿದೆ. ಆದರೆ ಈ ಕಾರ್ಖಾನೆ ಮಾಲಕರು ರೈತರಿಗೆ ನಯಾಪೈಸೆ ಲಾಭಾಂಶ ನೀಡುತ್ತಿಲ್ಲ. ಇದು ದೊಡ್ಡ ಮೋಸವಾಗುತ್ತಿದೆ ಎಂದು ಆರೋಪಿಸಿದರು.

ಪ್ರತಿ ಟನ್‌ ಕಬ್ಬು ಬೆಳೆಯಲು ₹4370 ವೆಚ್ಚವಾಗುತ್ತದೆ ಎಂದು ಅಧಿಕಾರಿಗಳ ಸಮಿತಿಯೇ ಸರ್ಕಾರಕ್ಕೆ ವರದಿ ನೀಡಿದೆ. ಆದರೆ ಅತಿ ಕಡಿಮೆ ದರದಲ್ಲಿ ರೈತರಿಂದ ಕಬ್ಬು ಖರೀದಿಸುತ್ತಿದ್ದಾರೆ. ಇದರಿಂದ ರೈತರಿಗೆ ದೊಡ್ಡ ನಷ್ಟ ಅನುಭವಿಸುತ್ತಿದ್ದಾರೆಂದು ಹೇಳಿದರು.

ಸಿಎಂ ಸಿದ್ದರಾಮಯ್ಯ ಕಬ್ಬು ಎಫ್‌ಆರ್‌ಪಿ ದರ ನಿಗದಿಗೆ ಪ್ರಧಾನಿಗೆ ಪತ್ರ ಬರೆದು ನಿಯೋಗ ತೆಗೆದುಕೊಂಡು ಹೋಗುತ್ತೇವೆ ಎಂದು ಹೇಳುತ್ತಾರೆ. ಆದರೆ ಇದು ರೈತರನ್ನು ಹಾದಿ ತಪ್ಪಿಸುವ ಹುನ್ನಾರ. ಕೂಡಲೇ ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದರು.

ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಾಲೇಶ ಬೆನ್ನೂರು ಮಾತನಾಡಿ, ನಮ್ಮ ಹೋರಾಟದ ದಿಕ್ಕು ತಪ್ಪಿಸುವ ಜನ ಹೆಚ್ಚಾಗಿದ್ದಾರೆ. ಅವರಿಂದ ಬಹಳ ಎಚ್ಚರಿಕೆಯ ಹೆಜ್ಜೆ ಇಡಬೇಕು. ರೈತರ ಬೇಡಿಕೆಯಂತೆ ಪ್ರತಿ ಟನ್‌ ಕಬ್ಬಿಗೆ ₹3500 ದರ ನೀಡಬೇಕೆಂದು ಒತ್ತಾಯಿಸಿದರು.

ಹನುಮಂತಪ್ಪ ಕೋಡಬಾಳ ಮಾತನಾಡಿ, ಕಳೆದ 3 ತಿಂಗಳಿನಿಂದ ಕಬ್ಬಿನ ದರ ನಿಗದಿ ಮಾಡಿ ಎಂದು ಕಚೇರಿಗೆ ಅಲೆದಾಡಿದರೂ ಅಧಿಕಾರಿಗಳು ಮತ್ತು ಕಾರ್ಖಾನೆಯವರು ಕಾಲಹರಣ ಮಾಡಿದ್ದಾರೆ. ಅದಕ್ಕೆ ಇವತ್ತು ರೈತರು ಬೀದಿಗೆ ಬಂದು ಹೋರಾಟ ಮಾಡುವ ಪರಿಸ್ಥಿತಿ ಬಂದಿದೆ. ರೈತರು ಒಗ್ಗಟ್ಟಿನಿಂದ ಹೋರಾಟ ಮಾಡಿದರೆ ಮಾತ್ರ ದರ ಹೆಚ್ಚು ಪಡೆಯಲು ಸಾಧ್ಯ ಎಂದರು.

ಪ್ರತಿಭಟನೆಯಲ್ಲಿ ಈರುಳ್ಳಿ ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಎನ್‌.ಎಂ. ಸಿದ್ದೇಶ, ಅಖಂಡ ಕರ್ನಾಟಕ ರೈತ ಸಂಘದ ಅಧ್ಯಕ್ಷ ಎಚ್‌.ಸಿದ್ದಪ್ಪ, ರೈತ ಮುಖಂಡ ಪುನೀತ್‌, ಎಚ್‌.ಡಿ.ಜಗ್ಗಿನ್‌, ಚಂದ್ರಶೇಖರ ದೊಡ್ಮನಿ ಸೇರಿದಂತೆ ಇತರರು ಮಾತನಾಡಿದರು.

ಪೊಲೀಸ್‌ ಬಿಗಿ ಬಂದೋಬಸ್ತ್:

ಕಬ್ಬು ಬೆಳೆಗಾರರ ಪ್ರತಿಭಟನೆಗೆ 1 ಡಿವೈಎಸ್ಪಿ, 3 ಸಿಪಿಐ, 6 ಪಿಎಸ್‌ಐ, 160 ಪೊಲೀಸರು, 1 ಡಿಆರ್‌, 2 ಐಆರ್‌ಬಿ ನಿಯೋಜನೆ ಮಾಡಲಾಗಿತ್ತು. ನಂತರದಲ್ಲಿ ಸ್ಥಳಕ್ಕೆ ಎಎಸ್‌ಎಸ್ಪಿ ಮಂಜುನಾಥ ಭೇಟಿ ನೀಡಿದ್ದರು.

ಬೆಳಗಿನಿಂದ ಕಬ್ಬು ತುಂಬಿರುವ ಲಾರಿ ಮತ್ತು ಟ್ರ್ಯಾಕ್ಟರ್‌ ಕಾರ್ಖಾನೆ ಆವರಣಕ್ಕೆ ಹೋಗದಂತೆ ಗೇಟ್‌ಗೆ ರೈತರು ಬೀಗ ಹಾಕಿಸಿದ್ದರು. ಆದರೆ ನ.7ರಂದು ಕಬ್ಬು ಬೆಳೆಗಾರರ ಪ್ರತಿಭಟನೆ ಇದೆ. ಸಮಸ್ಯೆ ಆಗಬಾರದೆಂಬ ಕಾರಣಕ್ಕಾಗಿ ಕಾರ್ಖಾನೆಯವರು ರಾತ್ರಿಯೇ ಕಬ್ಬು ತುಂಬಿಕೊಂಡು ಬಂದ ವಾಹನಗಳನ್ನು ಕಾರ್ಖಾನೆಯ ಆವರಣದಲ್ಲಿ ನಿಲ್ಲಿಸಿದ್ದರು. ಇನ್ನು ನೂರಾರು ವಾಹನಗಳು ಕಾರ್ಖಾನೆಯ ಪಕ್ಕದ ಜಾಗದಲ್ಲಿ ನಿಲ್ಲಿಸಿದರು. ಪ್ರತಿಭಟನೆಯಲ್ಲಿ ತಾಲೂಕಿನ ವಿವಿಧ ಗ್ರಾಮಗಳಿಂದ 200ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.

ಪ್ರತಿಭಟನೆಗೂ ಮುನ್ನ ರೈತರ ಗೀತೆ ಹಾಡಿ ಆರಂಭಿಸಿದರು. ರೈತರು ರಸ್ತೆ ಬಂದ್‌ ಮಾಡಲು ಪೊಲೀಸರು ಅವಕಾಶ ನೀಡಿಲ್ಲ. ಕೇವಲ ಕಾರ್ಖಾನೆಯನ್ನು ಮಾತ್ರ ಬಂದ್‌ ಮಾಡಿದ್ದರು.