ವಿವಿಧ ಪಿಂಚಣಿ ಯೋಜನೆ ವಿಳಂಬ ಆಗಿರುವುದನ್ನು ಖಂಡಿಸಿ ಫಲಾನುಭವಿಗಳು ತಾಲೂಕಿನ ಅರಸೀಕೆರೆ ನಾಡ ಕಚೇರಿ ಬಳಿ ಬುಧವಾರ ಪ್ರತಿಭಟನೆ ನಡೆಸಿದರು.
ಹರಪನಹಳ್ಳಿ: ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ, ವಿಧವಾ, ಅಂಗವಿಕಲರು, ಅಸಹಾಯಕರು ಸೇರಿದಂತೆ ವಿವಿಧ ಪಿಂಚಣಿ ಯೋಜನೆ ವಿಳಂಬ ಆಗಿರುವುದನ್ನು ಖಂಡಿಸಿ ಫಲಾನುಭವಿಗಳು ತಾಲೂಕಿನ ಅರಸೀಕೆರೆ ನಾಡ ಕಚೇರಿ ಬಳಿ ಬುಧವಾರ ಪ್ರತಿಭಟನೆ ನಡೆಸಿದರು.ಅಖಿಲ ಭಾರತ ಕಿಸಾನ್ ಸಭಾ, ರೈತ ಸಂಘ, ದಲಿತ ಸಂಘಗಳ ನೇತೃತ್ವದಲ್ಲಿ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅಖಿಲ ಭಾರತ ಕಿಸಾನ್ ಸಭಾದ ಜಿಲ್ಲಾಧ್ಯಕ್ಷ ಕೆರೆಗುಡಿಹಳ್ಳಿ ಹಾಲೇಶ ಮಾತನಾಡಿ, ಹಲವಾರು ಪಿಂಚಣಿ ಯೋಜನೆಗಳಾದ ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲರ ವೇತನ, ಸಾಮಾಜಿಕ ಭದ್ರತೆ ಯೋಜನೆ ಅಡಿಯಲ್ಲಿ ಮುಂಜೂರಾದ ಪಿಂಚಣಿ ಯೋಜನೆಗಳನ್ನು ವಿಳಂಬ ಮಾಡಿ ಆರು ತಿಂಗಳಾದರೂ ಫಲಾನುಭವಿಗಳಿಗೆ ಪಿಂಚಣಿ ಹಣ ನೀಡಿಲ್ಲ ಎಂದು ದೂರಿದರು.
ಪರಿಶೀಲನೆಯ ಹೆಸರಿನಲ್ಲಿ ನೈಜ ಫಲಾನುಭವಿಗಳಿಗೂ ರದ್ದುಗೊಳಿಸಿದ್ದಾರೆ. ಪರಿಶೀಲನೆಯ ನೆಪದಲ್ಲಿ ರೈತರಿಗೆ, ಬಡವರಿಗೆ, ಕೂಲಿ ಕಾರ್ಮಿಕರಿಗೆ ವಿಳಂಬ ಮಾಡುತ್ತಿದ್ದಾರೆ. ಪಿಂಚಣಿಯನ್ನು ನಂಬಿಕೊಂಡು ಬದುಕುತ್ತಿರುವ ಫಲಾನುಭವಿಗಳ ಸ್ಥಿತಿ ಗಂಭೀರವಾಗಿದೆ. ಇದಕ್ಕೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು, ತಾಲೂಕು ಅಧಿಕಾರಿಗಳು, ಸ್ಥಳೀಯ ಅಧಿಕಾರಿಗಳು, ಹರಪನಹಳ್ಳಿ ಹಾಗೂ ಜಗಳೂರು ಶಾಸಕರು ಇದರ ಬಗ್ಗೆ ಕಿಂಚಿತ್ತು ಗಮನ ಹರಿಸಿಲ್ಲ.ಅರಸೀಕೆರೆ ಹೋಬಳಿಗೆ ಮಲತಾಯಿ ಧೋರಣೆ ತೋರುತ್ತಿದ್ದಾರೆ, ಮೂಲಭೂತ ಸೌಕರ್ಯಕ್ಕಾಗಿ ಸಾಕಷ್ಟು ಹೋರಾಟಗಳನ್ನು ಮಾಡಿದರೂ ಸ್ಪಂದಿಸುತ್ತಿಲ್ಲ. ಕೂಡಲೇ ಈ ಸಮಸ್ಯೆ ಬಗೆಹರಿಯದಿದ್ದರೆ ಮುಂದಿನ ದಿನಗಳಲ್ಲಿ ನಾಡಕಚೇರಿಗೆ ಬೀಗ ಹಾಕಿ ನಿರಂತರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಉಪ ತಹಸೀಲ್ದಾರ್ ಜೆ. ಚಂದ್ರಮೋಹನ್ ಮನವಿ ಸ್ವೀಕರಿಸಿ ಮಾತನಾಡಿ, ಫಲಾನುಭವಿಗಳ ಸರ್ವೆ ಕಾರ್ಯ ನಡೆಯುತ್ತಿದೆ. ಸರ್ವರ್ ಸಮಸ್ಯೆಯಿಂದ ವಿಳಂಬವಾಗಿದೆ. ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಹೇಳಿದರು. ಕಂದಾಯ ನಿರೀಕ್ಷಕ ನನ್ನೆ ಸಾಹೇಬ್ ಮಾತನಾಡಿ, ಕೂಡಲೇ ಮೇಲಧಿಕಾರಿಗಳ ಗಮನಕ್ಕೆ ತಂದು ಈ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದರು.ಇದೇ ಸಂದರ್ಭದಲ್ಲಿ ಕಿಸಾನ್ ಸಭಾ ಜಿಲ್ಲಾಧ್ಯಕ್ಷ ಕೆರೆಗುಡಿಹಳ್ಳಿ ಹಾಲೇಶ್, ರೈತ ಮುಖಂಡರಾದ ಎಚ್. ಹಾಲಪ್ಪ ಎ.ಬಿ. ನಾಗರಾಜ್ ಗೌಡ, ಎನ್. ಮಲ್ಲೇಶಪ್ಪ, ಎಸ್. ಬಸವರಾಜಪ್ಪ, ಗುಂಡಗತ್ತಿ ರಾಮಚಂದ್ರಪ್ಪ, ಯು.ಎಂ. ಬಸಯ್ಯ, ರಾಮಘಟ್ಟ ಎಸ್. ಚಿಕ್ಕಪ್ಪ, ಹಮಾಲರ ಸಂಘದ ನಾಗರಾಜ್, ಅರಸೀಕೆರೆ ಗೌರಮ್ಮ, ರತ್ನಮ್ಮ, ಪಂಚಪ್ಪ, ಮಹಿಳೆಯರು, ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.