ಕನ್ನಡಪ್ರಭ ವಾರ್ತೆ ಮಂಡ್ಯ

ಕರ್ನಾಟಕದಿಂದ ತಮಿಳುನಾಡಿಗೆ ನೀರು ಬಿಡಬೇಕೆಂಬ ಕಾವೇರಿ ನದಿ ನಿಯಂತ್ರಣ ಸಮಿತಿ, ಕಾವೇರಿ ನದಿ ನಿರ್ವಹಣಾ ಪ್ರಾಧಿಕಾರದ ಆದೇಶ ವಿರೋಧಿಸಿ ಕುಂಬಾರರ ಜಾಗೃತಿ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಹಾಗೂ ಕರುನಾಡ ಸೇವಕರು ಸಂಘಟನೆ ಕಾರ್ಯಕರ್ತರು ಒಗ್ಗೂಡಿ ಖಾಲಿ ಮಡಿಕೆ ಪ್ರದರ್ಶಿಸಿ ಪ್ರತಿಭಟಿಸಿದರು.

ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರು, ಪ್ರಾಧಿಕಾರದ ವಿರುದ್ದ ಘೋಷಣೆ ಕೂಗಿ ಕೆಲ ಕಾಲ ರಸ್ತೆ ಸಂಚಾರಕ್ಕೆ ಅಡ್ಡಿಪಡಿಸಿದರು. ಇದೇ ವೇಳೆ ಖಾಲಿ ಮಡಿಕೆಗಳನ್ನು ಪ್ರದರ್ಶಿಸಿದ ಪ್ರತಿಭಟನಾಕಾರರು, ರಾಜ್ಯದ ಜಲಾಶಯಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾವೇರಿ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಬರದ ಛಾಯೆ ಎದುರಾಗಿದೆ. ಕೆರೆ ಕಟ್ಟೆಗಳು ಒಣಗುತ್ತಿವೆ. ಜನ-ಜಾನುವಾರುಗಳು ನೀರಿನ ಭವಣೆ ಎದುರಿಸುತ್ತಿದ್ದರೂ, ಕಾವೇರಿ ಪ್ರಾಧಿಕಾರ ನೀರು ಬಿಡಬೇಕೆಂಬ ಆದೇಶ ಮಾಡಿರುವುದು ಕಣ್ಣಿದ್ದು, ಕುರುಡಾ ನಡೆಯಂತಾಗಿದೆ ಎಂದು ಕಿಡಿಕಾರಿದರು.

ಕುಂಬಾರರ ಜಾಗೃತಿ ವೇದಿಕೆ ಅಧ್ಯಕ್ಷ ಎಂ.ಕೃಷ್ಣ ಮಾತನಾಡಿ, ಕಾವೇರಿ ವಿಚಾರದಲ್ಲಿ ರೈತರು ಮತ್ತು ಜನಸಾಮಾನ್ಯರ ಹಿತವನ್ನು ಕಾಪಾಡಬೇಕಾಗಿದೆ. ಆದ್ದರಿಂದ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಕಾವೇರಿ ವಿವಾದವನ್ನು ಇತ್ಯರ್ಥಗೊಳಿಸಿ ಕರ್ನಾಟಕಕ್ಕೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದರು.


ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್. ಸಂದೇಶ್ ಮಾತನಾಡಿ, ಶತಮಾನದ ಸವಾಲಾಗಿ ಪರಿಣಮಿಸಿರುವ ಕಾವೇರಿ ವಿವಾದ ನಾಲ್ಕು ರಾಜ್ಯಗಳ ನಡುವಿನ ಸಾಮರಸ್ಯಕ್ಕೆ ಹಾನಿಯುಂಟುಮಾಡುತ್ತಿದ್ದು, ಈಗ ಪರಿಹರಿಸದಿದ್ದರೆ ಮುಂದಿನ ತಲೆಮಾರಿಗೂ ಕಾವೇರಿ ವಿವಾದ ಸಂಘರ್ಷಕ್ಕೆ ಕಾರಣವಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಕರವೇ ಅಧ್ಯಕ್ಷ ಎಚ್.ಡಿ.ಜಯರಾಂ, ಕರುನಾಡ ಸೇವಕರು ಸಂಘಟನೆಯ ಎಂ.ಬಿ.ನಾಗಣ್ಣ, ಕುಂಬಾರರ ಜಾಗೃತಿ ವೇದಿಕೆ ಪದಾಧಿಕಾರಿಗಳಾದ ಅರಕೆರೆ ದಾಸಪ್ಪ, ಪ್ರದೀಪ್, ಕೆರಗೋಡು ವೆಂಕೇಶ್, ಶಿವಕುಮಾರ್, ಪುಟ್ಟಸ್ವಾಮಿ ಸೇರಿದಂತೆ ಇತರರು ಇದ್ದರು.

ತಮಿಳುನಾಡಿಗೆ ನೀರು ಬಿಡುಗಡೆ ಖಂಡಿಸಿ ಸರ್ಕಾರ, ಸಿಎಂ ವಿರುದ್ಧ ಕಾವೇರಿ ಹಿತರಕ್ಷಣಾ ವೇದಿಕೆ ಪ್ರತಿಭಟನೆಮಂಡ್ಯ: ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುತ್ತಿರುವ ಸರ್ಕಾರ ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಕಾವೇರಿ ಹಿತರಕ್ಷಣಾ ವೇದಿಕೆ ಪದಾಧಿಕಾರಿಗಳು ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಜಯಚಾಮರಾಜ ಒಡೆಯರ್ ವೃತ್ತದಲ್ಲಿ ಸೇರಿದ ಪ್ರತಿಭಟನಕಾರರು, ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು, ಪ್ರಗತಿಪರರು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ, ಒಣಗಿದ ಕಬ್ಬು ಹಿಡಿದು ರಸ್ತೆಗಿಳಿದು ಹೋರಾಟ ನಡೆಸಿದರು.

ಈ ವೇಳೆ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ನಮ್ಮ ರೈತರಿಗೆ ನೀರು ಕೊಡದೆ ತಮಿಳುನಾಡಿಗೆ ನೀರು ಬಿಡುತ್ತಿರುವ ರಾಜ್ಯ ಸರ್ಕಾರ ರೈತರ ವಿರೋಧಿಯಾಗಿದೆ. 3ನೇ ಬೆಳೆ ಬೆಳೆಯುತ್ತಿರುವ ತಮಿಳು ರೈತರ ಕುರುವೆ ಬೆಳೆ ರಕ್ಷಣೆಗೆ ರಾಜ್ಯ ಸರ್ಕಾರ ಸಹಕಾರಿ ನೀಡಿ ಮಂಡ್ಯ ರೈತರ ಜೀವ ಬಲಿಪಡೆಯುತ್ತಿದೆ ಎಂದು ಎಚ್ಚರಿಸಿದರು.

ಈ ಸರ್ಕಾರ ನಮ್ಮ ಕರ್ನಾಟಕದ ರೈತರಿಗೆ ಅನ್ಯಾಯ ಮಾಡುತ್ತಿದೆ. ಪ್ರಾಧಿಕಾರದ ಆದೇಶ ಧಿಕ್ಕರಿಸಿ ತಮಿಳುನಾಡಿಗೆ ನೀರು ಬಿಡಲ್ಲ ಎಂದಿದ್ದ ಡಿಕೆಶಿ ಸರ್ಕಾರ ಇಂದು 20 ಸಾವಿರ ಕ್ಯುಸೆಕ್ ನೀರು ಹರಿಸುತ್ತಿದೆ ಎಂದು ಕಿಡಿಕಾರಿದರು.

ಕೋರ್ಟ್ ಗೆ ಮೇಲ್ಮನವಿ ಸಲ್ಲಿಸದೆ ನಮ್ಮ ರೈತರ ಬೆಳೆಗೆ ನೀರು ಕೊಡದೆ ಅನ್ಯಾಯ ಮಾಡಿದ್ದಾರೆ. ರೈತರ ಒಣಗಿದ ಬೆಳೆಗೆ ಕೂಡಲೇ ಪರಿಹಾರ ನೀಡಬೇಕು ಸಿಎಂ ಡಿಕೆಶಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ನಗರಸಭಾ ಮಾಜಿ ಅಧ್ಯಕ್ಷೆ ಕೆ.ಸಿ.ನಾಗಮ್ಮ, ಮಾಜಿ ಸದಸ್ಯೆ ಪದ್ಮಾವತಿ ರವಿ, ಎಚ್.ಎಂ.ಬಸವರಾಜು, ತುಳಸೀಧರ್, ವೇಣುಗೋಪಾಲ್ ಮತ್ತಿತರರಿದ್ದರು.