ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ, ಕಾರ್ಮಿಕ ಹಾಗೂ ಜನವಿರೋಧಿ ನೀತಿಗಳ ಖಂಡಿಸಿ ರಾಷ್ಟ್ರದ ಸಂಘಟನೆಗಳು ಕರೆ ನೀಡಿದ್ದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಬೆಂಬಲಿಸಿ ಪಟ್ಟಣದಲ್ಲಿ ರೈತಸಂಘ, ಸಿಐಟಿಯು ಸೇರಿದಂತೆ ವಿವಿಧ ಸಂಘಟನೆಗಳ ಕಾರ್‍ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.ಪಟ್ಟಣದ ಪಾಂಡವ ಕ್ರೀಡಾಂಗಣದ ಬಳಿ ಹೊರಟ ಪ್ರತಿಭಟನಾ ರ್‍ಯಾಲಿ ಪಟ್ಟಣದ ವಿವಿಧ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಂಡ್ಯ ಸರ್ಕಲ್, ಐದು ದೀಪ ವೃತ್ತದಲ್ಲಿ ಶ್ರೀರಂಗಪಟ್ಟಣ- ಜೇವರ್ಗಿ ಹೆದ್ದಾರಿ ತಡೆದು ಮಾನವ ಸರಪಳಿ ನಿರ್ಮಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಬಳಿಕ ಐದು ದೀಪ ವೃತ್ತದಲ್ಲಿಯೇ ಪೊಲೀಸರು ಪ್ರತಿಭಟನಕಾರರನ್ನು ಬಂಧಿಸಿ ಕರೆದೊಯ್ಯುದ್ದು ನಂತರ ಬಿಡುಗಡೆ ಮಾಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಕಾರ್ಮಿಕ ಹಾಗೂ ರೈತ ವಿರೋಧಿ ಕಾನೂನುಗಳನ್ನು ವಾಪಸ್ ಪಡೆಯಬೇಕು. ಸಮಾಜ ಕೆಲಸಕ್ಕೆ ಸಮಾನ ವೇತನ ಜಾರಿಗೊಳಿಸಬೇಕು. ಹೊರಗುತ್ತಿಗೆ ನೌಕರರ ಉದ್ಯೋಗವನ್ನು ಕಾಯಂಗೊಳಿಸಬೇಕು ಎಂದು ಆಗ್ರಹಿಸಿದರು.ಎಲ್ಲಾ ಸಂಘಟಿತ, ಅಸಂಘಟಿತ, ಗುತ್ತಿಗೆ ಕಾರ್ಮಿಕರು, ಸ್ಕೀಂ ನೌಕರರಿಗೆ ರಾಷ್ಟ್ರ, ರಾಜ್ಯ ವ್ಯಾಪಿ ನೌಕರರಿಗೂ ಕನಿಷ್ಠ 36 ಸಾವಿರ ವೇತನ ನಿಗಧಿಪಡಿಸಬೇಕು, ಪೆಟ್ರೂಲ್, ಡೀಸೆಲ್, ದಿನಬಳಿಕೆ ವಸ್ತುಗಳ ಸೇರಿದಂತೆ ಎಲ್ಲಾ ವಸ್ತುಗಳ ಬೆಲೆ ಇಳಿಸಿ ಹಳೇ ಪಿಂಚಣಿ ಪದ್ಧತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಉದ್ಯೋಗದ ಹಕ್ಕನ್ನು ಮೂಲ ಹಕ್ಕನ್ನಾಗಿಸಿ, ವಿದ್ಯುತ್ ತಿದ್ದುಪಡಿ ಮಸೂದೆ-2022 ವಾಪಸ್ ಪಡೆಯಬೇಕು. ವಿದ್ಯುತ್ ಖಾಸಗೀಕರಣ ಮತ್ತು ಸ್ಮಾರ್ಟ್ ಮೀಟರ್ ಅಳವಡಿಕೆ ನಿಲ್ಲಿಸಬೇಕು, ರೈತರಿಗೆ ರಸಗೊಬ್ಬರ, ಬಿತ್ತನೆಬೀಜ, ವಿದ್ಯುತ್ ಬಿಲ್ ಮೇಲಿನ ಸಬ್ಸಡಿ ಹೆಚ್ಚಳ ಮಾಡಬೇಕು, ಸಮಗ್ರ ಬೆಳೆ ಸಾಲ, ಬೆಳೆ ವಿಮೆ ಯೋಜನೆ ಜಾರಿಗೊಳಿಸಬೇಕು ಸೇರಿದಂತೆ ಸುಮಾರು 29 ಬೇಡಿಕೆಗಳ ಜಾರಿಗೆ ಆಗ್ರಹಿಸಿದರು.ಪ್ರತಿಭಟನೆಯಲ್ಲಿ ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲೂಕು ಅಧ್ಯಕ್ಷ ವಿಜಯ್‌ಕುಮಾರ್, ಕೆ.ಟಿ.ಗೋವಿಂದೇಗೌಡ, ಸಿಐಟಿಯು ಸಂಘಟನೆ ಶಿವಕುಮಾರ್, ಡಿ.ಕೆ.ಅಂಕಯ್ಯ, ರೈತ ಮುಖಂಡರಾದ ಚಿಕ್ಕಾಡೆ ರಘು, ಎಣ್ಣೆಹೊಳೆಕೊಪ್ಪಲು ಮಂಜುನಾಥ್, ರಘು ಸೇರಿದಂತೆ ಅನೇಕ ಸಂಘಟನೆಗಳ ಕಾರ್‍ಯಕರ್ತರು ಭಾಗವಹಿಸಿದ್ದರು.