ನ್ಯಾ.ನಾಗಮೋಹನ್ ದಾಸ್ ವರದಿ ತಿರಸ್ಕಾರಕ್ಕೆ ಮುಂದುವರೆದ ಪ್ರತಿಭಟನೆ

| Published : Aug 15 2025, 01:00 AM IST

ನ್ಯಾ.ನಾಗಮೋಹನ್ ದಾಸ್ ವರದಿ ತಿರಸ್ಕಾರಕ್ಕೆ ಮುಂದುವರೆದ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಒಳ ಮೀಸಲಾತಿಯಿಂದ ಬಲಗೈ ಸಮುದಾಯಕ್ಕೆ ಅನ್ಯಾಯವಾಗಿದೆ. ಆದಿದ್ರಾವಿಡ, ಆದಿ ಕರ್ನಾಟಕ, ಆದಿ ಆಂಧ್ರ, ಎಂಬ ಜಾತಿಗಳನ್ನು ಉಪಜಾತಿಗಳು ಎಂದು ಗುರುತಿಸಿ ಶೇ. ಒಂದರಷ್ಟು ಮೀಸಲಾತಿ ನೀಡಿರುವುದನ್ನು ಖಂಡಿಸಿ, ಛಲವಾದಿಗಳನ್ನು ಪ್ರತ್ಯೇಕ ಮಾಡಿರುವ ವರದಿ ಅವೈಜ್ಞಾನಿಕ ಮತ್ತು ದುರುದ್ದೇಶ ಪೂರಕವಾಗಿದೆ. ಸರ್ಕಾರ ಈ ವರದಿಯನ್ನು ತಿರಸ್ಕರಿಸಬೇಕು.

ಕನ್ನಡಪ್ರಭ ವಾರ್ತೆ ಮದ್ದೂರು

ನ್ಯಾಯಮೂರ್ತಿ ನಾಗ ಮೋಹನದಾಸ್ ಅವರ ಒಳ ಮೀಸಲಾತಿ ಏಕ ಸದಸ್ಯ ವಿಚಾರಣಾ ಆಯೋಗವು ಸರ್ಕಾರಕ್ಕೆ ಸಲ್ಲಿಸಿರುವ ವರದಿ ತಿರಸ್ಕರಿಸುವಂತೆ ಒತ್ತಾಯಿಸಿ ಪರಿಶಿಷ್ಟ ಜಾತಿ, ಬಲಗೈ ಸಮುದಾಯದ ಒಳ ಮೀಸಲಾತಿ ರಕ್ಷಣಾ ಸಮಿತಿ ಕಾರ್ಯಕರ್ತರು ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಪ್ರವಾಸಿ ಮಂದಿರದ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತದಿಂದ ಜಿಪಂ ಮಾಜಿ ಅಧ್ಯಕ್ಷ ಸುರೇಶ್ ಕಂಠಿ ನೇತೃತ್ವದಲ್ಲಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಅಸಂಖ್ಯಾತ ರಕ್ಷಣಾ ಸಮಿತಿ ಕಾರ್ಯಕರ್ತರು ನ್ಯಾ.ನಾಗಮೋಹನ ದಾಸ್ ವರದಿ ತಿರಸ್ಕರಿಸುವಂತೆ ಒತ್ತಾಯಿಸಿ ಘೋಷಣೆ ಕೂಗಿದರು.

ನಂತರ ಪುರಸಭೆ ಮುಂಭಾಗದಲ್ಲಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಕೆಲಕಾಲ ಧರಣಿ ನಡೆಸಿದರು. ಬೆಂಗಳೂರು, ಮೈಸೂರು ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಪ್ರತಿಭಟನಾಕಾರರು ಮಾನವ ಸರಪಳಿ ರಚಿಸುವ ಮೂಲಕ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿದರು.

ಅಲ್ಲಿಂದ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಧರಣಿ ನಡೆಸಿದ ರಕ್ಷಣಾ ಸಮಿತಿ ಕಾರ್ಯಕರ್ತರು ತಹಸೀಲ್ದಾರ್ ಪರಶುರಾಮ ಸತ್ತಿ ಗೇರಿ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಜಿಪಂ ಮಾಜಿ ಅಧ್ಯಕ್ಷ ಸುರೇಶ್ ಕಂಠಿ, ಒಳ ಮೀಸಲಾತಿಯಿಂದ ಬಲಗೈ ಸಮುದಾಯಕ್ಕೆ ಅನ್ಯಾಯವಾಗಿದೆ. ಆದಿದ್ರಾವಿಡ, ಆದಿ ಕರ್ನಾಟಕ, ಆದಿ ಆಂಧ್ರ, ಎಂಬ ಜಾತಿಗಳನ್ನು ಉಪಜಾತಿಗಳು ಎಂದು ಗುರುತಿಸಿ ಶೇ. ಒಂದರಷ್ಟು ಮೀಸಲಾತಿ ನೀಡಿರುವುದನ್ನು ಖಂಡಿಸಿ, ಛಲವಾದಿಗಳನ್ನು ಪ್ರತ್ಯೇಕ ಮಾಡಿರುವ ವರದಿ ಅವೈಜ್ಞಾನಿಕ ಮತ್ತು ದುರುದ್ದೇಶ ಪೂರಕವಾಗಿದೆ. ಸರ್ಕಾರ ಈ ವರದಿಯನ್ನು ತಿರಸ್ಕರಿಸಬೇಕು ಎಂದು ಮನವಿ ಮಾಡಿದರು.

ದಲಿತ ಮುಖಂಡ ಕುಮಾರ್ ಕೊಪ್ಪ ಮಾತನಾಡಿ, ನಾಗಮೋಹನ ದಾಸ್ ವರದಿಯಿಂದ ರಾಜ್ಯದ 4.70 ಲಕ್ಷ ಜನರನ್ನು ಬಲಗೈ ಸಮುದಾಯಕ್ಕೆ ಸೇರಿಸಿ ಪ್ರತ್ಯೇಕ ಮೀಸಲಾತಿ ನೀಡಿರುವುದರಿಂದ ಬಲಗೈ ಸಮುದಾಯದ ಜನಸಂಖ್ಯೆಯನ್ನು ಕುಗ್ಗಿಸುವ ದುರುದ್ದೇಶದಿಂದ ಮೀಸಲಾತಿ ನಿಗದಿಪಡಿಸಲಾಗಿದೆ ಎಂದು ಗಂಭೀರ ಆರೋಪ ಮಾಡಿದರು.

ಪ್ರತಿಭಟನೆಯಲ್ಲಿ ಪುರಸಭಾ ಸದಸ್ಯರಾದ ವನಿತಾ, ಪ್ರಮೀಳಾ, ಸುರೇಶ್ ಕುಮಾರ್, ಮುಖಂಡರಾದ ಸುಮಾವತಿ, ಕಬ್ಬಾಳಯ್ಯ, ಮರಿದೇವರು, ಮಹದೇವಯ್ಯ, ಶಿವಲಿಂಗಯ್ಯ, ಮಡೇನಹಳ್ಳಿ ತಿಮ್ಮಯ್ಯ, ಮಹೇಂದ್ರ, ಅಮೀನ್ ಶಿವಲಿಂಗಯ್ಯ, ಸೋಮನಹಳ್ಳಿ ರಾಜೇಂದ್ರ, ಅರವನಹಳ್ಳಿ ಸಿದ್ದರಾಜು , ಕರಡಗೆರೆ ಯೋಗೇಶ್, ನಿತ್ಯಾನಂದ,ಕಾಳಯ್ಯ, ಬೋರಯ್ಯ, ಛಲವಾದಿ ಶಂಕರ್, ಕೆಂಪ ಬೋರಯ್ಯ, ಮರಿಸ್ವಾಮಿ, ಚೌಡಯ್ಯ ಸೇರಿದಂತೆ ಅನೇಕ ಮುಖಂಡರು ಪಾಲ್ಗೊಂಡಿದ್ದರು.