ಸಾರಾಂಶ
ಕಾರಟಗಿ: ಹುಬ್ಬಳ್ಳಿಯ ವೀರಾಪುರ ಓಣಿಯ ಅಂಜಲಿ ಅಂಬಿಗೇರ (೨೦) ಹತ್ಯೆ ಖಂಡಿಸಿ ಪಟ್ಟಣದಲ್ಲಿ ಶುಕ್ರವಾರ ಕಾರಟಗಿ ನಾಗರಿಕರ ವೇದಿಕೆ, ತಾಲೂಕು ಗಂಗಾಮತ ಸಮಾಜ ಹಾಗೂ ಅಂಬಿಗರ ಚೌಡಯ್ಯ ಯುವಕ ಸಂಘ ಸೇರಿದಂತೆ ವಿವಿಧ ಸಂಘಟನೆ ಮತ್ತು ಸಮಾಜಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಆರೋಪಿಯನ್ನು ಗಲ್ಲಿಗೇರಿಸುವಂತೆ ಒತ್ತಾಯಿಸಲಾಯಿತು. ಇಲ್ಲಿನ ಕೋಟೆಯಲ್ಲಿನ ಗ್ರಾಮದೇವತೆ ದ್ಯಾವಮ್ಮ ದೇವಿ ದೇವಸ್ಥಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ರಾಜ್ಯ ಹೆದ್ದಾರಿ ಮೂಲಕ ತಹಸೀಲ್ದಾರ್ ಕಚೇರಿ ತಲುಪಿತು. ರಾಜ್ಯ ಸರ್ಕಾರಕ್ಕೆ ಬರೆದ ಮನವಿಯನ್ನು ಪ್ರತಿಭಟನಾಕಾರರು ಸಲ್ಲಿಸಿದರು.
ಈ ಸಂದರ್ಭದಲ್ಲಿ ವಿಶೇಷ ಎಪಿಎಂಸಿ ಮಾಜಿ ಅಧ್ಯಕ್ಷ ಶಿವರೆಡ್ಡಿ ನಾಯಕ್ ಮಾತನಾಡಿ, ರಾಜ್ಯದಲ್ಲಿ ನಿರಂತರ ಯುವತಿಯರ ಮೇಲೆ ಹಲ್ಲೆ, ಕೊಲೆಯಂಥ ಘಟನೆಗಳು ನಡೆಯುತ್ತಿರುವುದು ಆತಂಕಕಾರಿ ಮತ್ತು ಪ್ರಜ್ಞಾವಂತ ಸಮಾಜ ತಲೆತಗ್ಗಿಸುವಂಥದ್ದು. ನೇಹಾ ಹಿರೇಮಠ, ಕೊಡಗಿನ ಬಾಲಕಿ ಹತ್ಯೆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಕೊಲೆ ನಡೆದಿರುವುದು ರಾಜ್ಯದ ಜನತೆಯನ್ನು ಬೆಚ್ಚಿಬೀಳಿಸಿದೆ. ಈ ಮಾನಸಿಕ ಅಸ್ವಸ್ಥ ಕೊಲೆಗಡುಕರನ್ನು ಎನ್‌ಕೌಂಟರ್ ಮಾಡಬೇಕು ಅಥವಾ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.ಆನಂತರ ಯುವ ಮುಖಂಡರಾದ ಚನ್ನಬಸಪ್ಪ ಸುಂಕದ, ಶರಣಪ್ಪ ಪರಕಿ, ಖಾಜಾ ಹುಸೇನ್ ಮುಲ್ಲಾ ಮಾತನಾಡಿ, ಅಂಜಲಿ ಅಂಬಿಗೇರ್ ಎಂಬ ಯುವತಿಯನ್ನು ಗಿರೀಶ್ ಸಾವಂತ ಎನ್ನುವ ಯುವಕ ಹತ್ಯೆ ಮಾಡಿದ್ದಾನೆ. ಕೊಲೆ ಬೆದರಿಕೆ ಒಡ್ಡಿದಾಗ ಆಕೆಯ ಮನೆಯವರು ಈ ಬಗ್ಗೆ ಹುಬ್ಬಳ್ಳಿ ಪೊಲೀಸರಿಗೂ ದೂರು ಕೊಟ್ಟಿದ್ದರು. ಪೊಲೀಸರು ಘಟನೆಯನ್ನು ನಿರ್ಲಕ್ಷಿಸಿದ್ದರು. ಅಂದೇ ಆರೋಪಿಯ ಮೇಲೆ ಕಠಿಣ ಕ್ರಮ ತೆಗೆದುಕೊಂಡು ಪ್ರಕರಣ ದಾಖಲಿಸಿದ್ದರೆ ಹತ್ಯೆ ತಪ್ಪಿಸಬಹುದಿತ್ತು ಎಂದರು.
ಗಂಗಾಮತ ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶರಣಪ್ಪ ಕಾಯಿಗಡ್ಡಿ, ರಾಜ್ಯ ನಿರ್ದೇಶಕ ಧನಂಜಯ್ ಎಲಿಗಾರ್ ಮಾತನಾಡಿ, ಗಿರೀಶ ಸಾವಂತ ಹಾಡುಹಗಲೇ ಅಂಜಲಿ ಮನೆಗೆ ನುಗ್ಗಿ ಕೊಲೆ ಮಾಡಿದ್ದಾನೆ. ಈ ಬಗ್ಗೆ ಪೊಲೀಸರ ಗಮನಕ್ಕೆ ತಂದರೂ ಕ್ರಮಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ ಪೊಲೀಸರ ಮೇಲೂ ಕಠಿಣ ಕ್ರಮಕ್ಕೆ ಮುಂದಾಗಬೇಕು. ಆರೋಪಿಯನ್ನು ಕೂಡಲೇ ಗಲ್ಲಿಗೆ ಏರಿಸಬೇಕು. ಜತೆಗೆ ಮೃತ ಅಂಜಲಿ ಕುಟುಂಬದ ಸದಸ್ಯನಿಗೆ ಸರ್ಕಾರಿ ನೌಕರಿ ನೀಡಬೇಕು. ಐವತ್ತು ಲಕ್ಷ ರು. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಉಪ ತಹಸೀಲ್ದಾರ್ ವಿಶ್ವೇಶ್ವರಯ್ಯ ಸಾಲಿಮಠ ಸ್ವೀಕರಿಸಿದರು.
ಪ್ರತಿಭಟನೆಯಲ್ಲಿ ಗಂಗಾಮತಸ್ಥರ ಸಂಘದ ಅಧ್ಯಕ್ಷ ಚಿಕ್ಕಅಯ್ಯಪ್ಪ ಸಂಗಟಿ, ತಿಪ್ಪಣ್ಣ ಮೂಲಿಮನಿ, ಹನುಮಂತಪ್ಪ ಸಿಂಗಾಪುರ, ರಮೇಶ ಕಾಟಾಪುರ, ಅಂಬಿಗರ ಚೌಡಯ್ಯ ಗುರುಪೀಠದ ನಿರ್ದೇಶಕ ತಾಯಪ್ಪ ಕೋಟ್ಯಾಳ, ಕಾಶೀನಾಥ ಕಂಪ್ಲಿ, ನರಸಪ್ಪ ಸಿಂಗಾಪುರ, ಶರಣಪ್ಪ ಸಂಗಟಿ ಸೇರಿ ವಿವಿಧ ಸಮಾಜಗಳ ಪ್ರಮುಖರಾದ ಸಿ. ಗದ್ದೆಪ್ಪ ನಾಯಕ್, ಅಯ್ಯಪ್ಪ ಬಂಡಿ, ಅಯ್ಯಪ್ಪ ಉಪ್ಪಾರ, ನಾಗರಾಜ ಈಡಿಗೇರ್, ಜಗದೀಶ್ ಭಜಂತ್ರಿ, ಯೂಸೂಫ್, ಶಂಕರಸಿಂಗ್, ವೆಂಕೋಜಿ ಮರಾಠ, ನಾಗರಾಜ ಅರಳಿ, ಹನುಮಂತಪ್ಪ ವಾಲೀಕಾರ, ಯಮನಪ್ಪ ಮೂಲಿಮನಿ, ವೀರೇಶ ಮೂಲಿಮನಿ, ರವಿ ತಿಮ್ಮಾಪುರ, ರಮೇಶ ಜನೌಷಧ, ಶ್ರೀನಿವಾಸ ಗೋಮರ್ಸಿ, ರಮೇಶ್ ಕೋಟ್ಯಾಳ, ವೀರೇಶ ಕೋಟ್ಯಾಳ, ಶ್ಯಾಮಸಿಂಗ್, ಮೃತ್ಯುಂಜಯ ಸಂಗಟಿ, ಆಂಜನೇಯ ಬೇವಿನಾಳ, ವೀರೇಶ ಸಿರುಗುಂಪಿ, ಬೂದಗುಂಪಾ ಗ್ರಾಮಸ್ಥರಾದ ಭೀಮಣ್ಣ, ಹುಸೇನಸಾಬ್ ಹಿರೇಮನಿ, ವೆಂಕಟೇಶ್, ಭೀಮೇಶ್ ಇನ್ನಿತರರು ಇದ್ದರು.