ಕನ್ನಡಪ್ರಭ ವಾರ್ತೆ ಸಿರಿಗೆರೆ
ಗಣಿಗಾರಿಕೆಯ ಅದಿರು ತುಂಬಿದ ಲಾರಿಗಳ ಓಡಾಟದಿಂದ ತೀವ್ರವಾಗಿ ಹಾಳಾಗಿ ಹೋಗಿರುವ ವಿ.ಪಾಳ್ಯ, ಭೀಮಸಮುದ್ರ, ಮೇಗಳಹಳ್ಳಿ, ಕಡ್ಲೇಗುದ್ದು ಗ್ರಾಮಗಳ ರಸ್ತೆಗಳನ್ನು ಹೊಸದಾಗಿ ನಿರ್ಮಾಣ ಮಾಡಬೇಕು ಹಾಗೂ ಈ ಭಾಗದಲ್ಲಿ ಅದಿರು ಲಾರಿಗಳ ಸಂಚಾರವನ್ನು ನಿರ್ಬಂಧಿಸಬೇಕು ಎಂದು ನಡೆಯುತ್ತಿರುವ ಹೋರಾಟ ಈಗ ಕಾವೇರಿದೆ.ರೈತ ಸಂಘ ಹಾಗೂ ಗಣಿಬಾಧಿತ ಪರಿಸರ ಮತ್ತು ಜನ ಬದುಕಿನ ಪುನಶ್ಚೇತನ ಹೋರಾಟ ಸಮಿತಿ ಜಂಟಿಯಾಗಿ ನಡೆಸುತ್ತಿರುವ ಧರಣಿ ಭಾನುವಾರ ೪ನೇ ದಿನಕ್ಕೆ ಕಾಲಿಟ್ಟಿದೆ. ಧರಣಿ ತೀವ್ರ ಸ್ವರೂಪಕ್ಕೆ ತಿರುಗಿದ್ದರೂ ಜಿಲ್ಲಾಡಳಿತ ಇತ್ತ ಕಡೆಗೆ ಯಾವುದೇ ಭರವಸೆ ನೀಡದೇ ಇರುವುದರಿಂದ ಧರಣಿ ನಿರತರು ಆಕ್ರೋಶಗೊಂಡಿದ್ದಾರೆ.
ಪ್ರತಿಭಟನಕಾರರ ಮನವಿಗೆ ಸ್ಪಂದಿಸದೇ ಇದ್ದುದರಿಂದ ಶನಿವಾರ ರಾತ್ರಿ ಭೀಮಸಮುದ್ರ ಪ್ರವೇಶಿಸುವ ಅದಿರು ಲಾರಿಗಳನ್ನು ರೈತ ಸಂಘದ ಕಾರ್ಯಕರ್ತರು ತಡೆದು ನಿಲ್ಲಿಸಿದ್ದರು. ರಾತ್ರೋರಾತ್ರಿ ೧೬ ಜನರನ್ನು ಕರೆದುಕೊಂಡು ಹೋಗಿದ್ದ ಪೊಲೀಸರು ರಾತ್ರಿ ೧ ಗಂಟೆಯ ನಂತರ ಬಿಡುಗಡೆಗೊಳಿಸಿದ್ದರು. ಇದು ರೈತರ ಸಿಟ್ಟನ್ನು ಮತ್ತಷ್ಟು ಜಟಿಲಗೊಳಿಸಿದೆ.ಭೀಮಸಮುದ್ರ, ಮೇಗಳಹಳ್ಳಿ, ಬೊಮ್ಮೇನಹಳ್ಳಿ, ಕಡ್ಲೇಗುದ್ದು, ವಡ್ಡರಪಾಳ್ಯ, ಬೊಮ್ಮೇನಹಳ್ಳಿ, ಹಿರೇಗುಂಟನೂರು, ಹಳಿಯೂರು, ಮಾನಂಗಿ, ಸಿದ್ದಾಪುರ ಭಾಗದಲ್ಲಿ ಸಂಚರಿಸುವ ಲಾರಿಗಳಿಂದ ಬರುವ ಧೂಳಿನಿಂದ ಸುತ್ತಲ ಹಳ್ಳಿಗರ ಬದುಕು ವಿನಾಶದ ಕಡೆಗೆ ಸಾಗಿದೆ. ಬೆಳೆಗಳ ಮೇಲೆ ಅದಿರಿನ ಧೂಳು ಕುಳಿತು ಬೆಳೆಗಳಿಗೆ ತೀರ್ವ ಹಾನಿ ಉಂಟಾಗುತ್ತಿದೆ. ಗಾಳಿ, ಕುಡಿಯುವ ನೀರು ಕಲುಷಿತಗೊಂಡಿದೆ. ರಸ್ತೆಗಳಲ್ಲಿ ಸಾಮಾನ್ಯ ಜನರು ಓಡಾಡದ ರೀತಿ ಹಾಳಾಗಿದೆ. ಶಾಲಾ ಮಕ್ಕಳು ರಸ್ತೆಗಳಲ್ಲಿ ಓಡಾಡಲು ಸಾಧ್ಯವೇ ಇಲ್ಲ. ಮೈನಿಂಗ್ ಧೂಳು ಹಾಗೂ ಮಳೆ ಬಂದರೆ ಕೆಂಪು ಬಣ್ಣಕ್ಕೆ ತಿರುಗುವ ಕೆಸರಿನಿಂದ ಬದುಕು ಹೈರಾಣಾಗಿದೆ.
ಇದನ್ನು ಮುಂದೆ ಮಾಡಿಕೊಂಡು ಈಗಾಗಲೇ ಪ್ರತಿಭಟನೆ ನಡೆದಿದ್ದರೂ, ಜಿಲ್ಲಾಡಳಿತ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಸ್ವತಃ ಜಿಲ್ಲಾಧಿಕಾರಿಗಳನ್ನೇ ಭೇಟಿ ಮಾಡಿ ಸಮಸ್ಯೆಯನ್ನು ವಿವರಿಸಿದ್ದರೂ ಪರಿಹಾರ ಸಿಕ್ಕಿಲ್ಲ. ಹೀಗಿರುವುದರಿಂದ ಅವಿರತ ಧರಣಿ ಸತ್ಯಾಗ್ರಹಕ್ಕೆ ರೈತರು ಮುಂದಾಗಿದ್ದಾರೆ.
ಸುತ್ತಲ ಗ್ರಾಮಗಳ ರಸ್ತೆಗಳನ್ನು ಎತ್ತಿನಗಾಡಿ, ಬಸ್ ಸಂಚಾರಕ್ಕೆ ಮಿತಿಗೊಳಿಸಿ ನಿರ್ಮಾಣ ಮಾಡಲಾಗಿದೆ. ಆದರೆ ಈ ರಸ್ತೆಗಳ ಮೇಲೆ ಓಡಾಡುವ ಅದಿರು ಲಾರಿಗಳು ೫೦ ರಿಂದ ೬೦ ಟನ್ ಭಾರವಾದ ಅದಿರು ಸಾಗಿಸುತ್ತಿವೆ. ಸಾಲುಗಟ್ಟಿ ಲಾರಿಗಳು ಸಂಚರಿಸುವಾಗ ಪಾದಚಾರಿಗಳು ಉಸಿರು ಬಿಗಿಹಿಡಿದು ರಸ್ತೆಗಳ ಬದಿಯಲ್ಲಿಯೇ ನಿಲ್ಲಬೇಕು. ಶಾಲಾ ಮಕ್ಕಳಿಗೆ ಇವು ಶಾಪವಾಗಿ ಪರಿಣಮಿಸಿವೆ. ಆದ್ದರಿಂದ ಗ್ರಾಮದೊಳಗೆ ಈ ಲಾರಿಗಳ ಸಂಚಾರ ನಿರ್ಬಂಧಿಸಬೇಕೆಂಬುದು ಧರಣಿ ನಿರತರ ಬೇಡಿಕೆಯಾಗಿದೆ.
ವಿ.ಪಾಳ್ಯದಿಂದ ಭೀಮಸಮುದ್ರ, ಮೇಗಳಹಳ್ಳಿ, ಕಡ್ಲೇಗುದ್ದು, ಬೊಮ್ಮೇನಹಳ್ಳಿಯಿಂದ ಭೀಮಸಮುದ್ರದವರೆಗೆ ಗುಣಮಟ್ಟದ ರಸ್ತೆ ನಿರ್ಮಾಣ ಆಗುವವರೆಗೂ ಈ ಭಾಗದ ರೈತರು ಹೋರಾಟ ಮಾಡುತ್ತೇವೆ ಎಂದು ಭೀಮಸಮುದ್ರದ ರೈತ ಸಂಘದ ಅಧ್ಯಕ್ಷ ಶಂಕರಮೂರ್ತಿ ತಿಳಿಸಿದರು.ರಸ್ತೆ ನಿರ್ಮಾಣ ಆಗುವವರೆಗೆ ಹೋರಾಟ ನಿಲ್ಲದು. ಜಿಲ್ಲಾಡಳಿತದ ಹಠಮಾರಿ ಧೋರಣೆ ಹೀಗೆಯೇ ಮುಂದುವರೆದರೆ ರಸ್ತೆಯಲ್ಲಿಯೇ ಉರುಳು ಸೇವೆ ಮಾಡುತ್ತೇವೆ ಎಂದು ಶಂಕರಮೂರ್ತಿ ಎಚ್ಚರಿಸಿದರು.
ಗುಣಮಟ್ಟದ ರಸ್ತೆ ನಿರ್ಮಾಣ ಆಗಬೇಕು. ಗಣಿಗಾರಿಕೆಗೆ ಸಂಬಂಧಿಸಿದ ಲಾರಿಗಳು ಗ್ರಾಮದಲ್ಲಿ ಸಂಚರಿಸಕೂಡದು ಎಂಬುದು ನಮ್ಮ ಬೇಡಿಕೆ ಎಂದರು.ಈ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳವರೆಗೂ ಒಯ್ದು ಚರ್ಚಿಸಲಾಗಿದೆ. ಪಾದಯಾತ್ರೆಯನ್ನೂ ನಡೆಸಲಾಗಿದೆ. ಆದರೂ ನಮ್ಮ ಸಮಸ್ಯೆ ಬಗೆಹರಿದಿಲ್ಲ. ಜಿಲ್ಲಾಡಳಿತ ಕಣ್ಣುಮುಚ್ಚಿ ಕುಳಿತಿದೆ. ಅದನ್ನು ಎಚ್ಚರಿಸಲು ಗುರುವಾರದಿಂದ ಧರಣಿ ಸತ್ಯಾಗ್ರಹ ಆರಂಭಿಸಿದ್ದೇವೆ ಎಂದರು.
ಭೀಮಸಮುದ್ರ ರೈತ ಸಂಘದ ಮುಖಂಡ ಎಸ್ ಶೈಲೆಂದರ್ ಪಟೇಲ್ ಮಾತನಾಡಿ ಭಾರತಕ್ಕೆ ಸ್ವತಂತ್ರ ಬಂದು ಏಳು ದಶಕಗಳು ಮುಗಿದಿದ್ದರೂ ರಸ್ತೆಯಂತಹ ಮೂಲಭೂತ ಸೌಕರ್ಯಕ್ಕೆ ಧರಣಿ ಮಾಡುವ ಪರಿಸ್ಥಿತಿ ಬಂದಿರುವುದು ಶೋಚನೀಯ. ಗ್ರಾಮದಿಂದ 200 ಮೀಟರ್ ದೂರದಲ್ಲಿ ಪ್ರತ್ಯೇಕ ರಸ್ತೆ ಮಾಡಿಕೊಂಡು ಅದಿರು ಲಾರಿಗಳೂ ಸಂಚರಿಸಲು ಸಾಧ್ಯವಿದೆ. ಇದನ್ನು ಹಲವು ಬಾರಿ ಜಿಲ್ಲಾಧಿಕಾರಿಗಳಿಗೆ ಹೇಳಿದ್ದೇವೆ ಎಂದರು.ಅದಿರು ಸಾಗಾಣಿಕೆ ಲಾರಿಗಳಿಂದ ಆಗುತ್ತಿರುವ ಅನಾಹುತಗಳನ್ನು ಜಿಲ್ಲಾ ಸಚಿವರು, ಮುಖ್ಯಮಂತ್ರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಗಮನಿಸಬೇಕು ಎಂದರು.
ರೈತರು ಗ್ರಾಮದ ಸಾರ್ವಜನಿಕರು ವಿ ಪಾಳ್ಯ, ನಲ್ಲಿಕಟ್ಟೆ, ಬೊಮ್ಮೇನಹಳ್ಳಿ ಭಾಗದ ರೈತರು ಭಾಗಿಯಾಗಿದ್ದರು.