ಹಾಸನಾಂಬ ದರ್ಶನೋತ್ಸವಕ್ಕೆ ಸಂಬಂಧಿಸಿದಂತೆ ಹಲವು ಸಭೆಗಳನ್ನು ನಡೆಸಲಾಗಿದ್ದರೂ, ಒಂದೇ ಒಂದು ಸಭೆಯ ಮಾಹಿತಿಯನ್ನೂ ತಮಗೆ ನೀಡಿಲ್ಲ. ಸಭೆಯ ನೋಟಿಸ್ ನೀಡಿಲ್ಲ, ದೂರವಾಣಿ ಮೂಲಕವೂ ಆಹ್ವಾನಿಸಿಲ್ಲ. ಜಾತ್ರಾ ಮಹೋತ್ಸವದ ಸಿದ್ಧತೆ, ಕಾರ್ಯಕ್ರಮಗಳು ಹಾಗೂ ಖರ್ಚು-ವೆಚ್ಚಗಳ ಬಗ್ಗೆಯೂ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ವಿಧಾನ ಪರಿಷತ್ ಸದಸ್ಯನಾಗಿ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಿರುವ ತಮ್ಮನ್ನು ಈ ರೀತಿ ಕಡೆಗಣಿಸಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು. ಸಭೆಗಳಿಗೆ ವಿಧಾನ ಪರಿಷತ್ ಸದಸ್ಯನಾದ ತಮ್ಮನ್ನು ಆಹ್ವಾನಿಸದೆ ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಎಂದು ಎಂಎಲ್‌ಸಿ ಡಾ. ಸೂರಜ್ ರೇವಣ್ಣ ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹಾಸನ

ಹಾಸನಾಂಬಾ ದೇವಿ ದರ್ಶನೋತ್ಸವದ ಪೂರ್ವಸಿದ್ಧತೆ ಹಾಗೂ ಜಾತ್ರಾ ಮಹೋತ್ಸವಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ನಡೆಸಿದ ಸಭೆಗಳಿಗೆ ವಿಧಾನ ಪರಿಷತ್ ಸದಸ್ಯನಾದ ತಮ್ಮನ್ನು ಆಹ್ವಾನಿಸದೆ ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಎಂದು ಎಂಎಲ್‌ಸಿ ಡಾ. ಸೂರಜ್ ರೇವಣ್ಣ ಆರೋಪಿಸಿದ್ದಾರೆ.ಶುಕ್ರವಾರ ಹಾಸನಾಂಬಾ ದೇವಿ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಹಾಸನಾಂಬ ದರ್ಶನೋತ್ಸವಕ್ಕೆ ಸಂಬಂಧಿಸಿದಂತೆ ಹಲವು ಸಭೆಗಳನ್ನು ನಡೆಸಲಾಗಿದ್ದರೂ, ಒಂದೇ ಒಂದು ಸಭೆಯ ಮಾಹಿತಿಯನ್ನೂ ತಮಗೆ ನೀಡಿಲ್ಲ. ಸಭೆಯ ನೋಟಿಸ್ ನೀಡಿಲ್ಲ, ದೂರವಾಣಿ ಮೂಲಕವೂ ಆಹ್ವಾನಿಸಿಲ್ಲ. ಜಾತ್ರಾ ಮಹೋತ್ಸವದ ಸಿದ್ಧತೆ, ಕಾರ್ಯಕ್ರಮಗಳು ಹಾಗೂ ಖರ್ಚು-ವೆಚ್ಚಗಳ ಬಗ್ಗೆಯೂ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ವಿಧಾನ ಪರಿಷತ್ ಸದಸ್ಯನಾಗಿ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಿರುವ ತಮ್ಮನ್ನು ಈ ರೀತಿ ಕಡೆಗಣಿಸಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು. ಕಳೆದ ಬಾರಿ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅವರು ಬೆಂಗಳೂರು ಹಾಗೂ ಹಾಸನದಲ್ಲಿ ಸಭೆಗಳನ್ನು ನಡೆಸಿ ಎಲ್ಲ ಶಾಸಕರು ಮತ್ತು ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದರು. ಎಲ್ಲರೂ ಸಹಮತ ವ್ಯಕ್ತಪಡಿಸಿ ಜಾತ್ರಾ ಮಹೋತ್ಸವಕ್ಕೆ ಸಹಕಾರ ನೀಡಿದ್ದೆವು. ಆದರೆ ಈ ಬಾರಿ ಯಾವ ಸಭೆಗಳಲ್ಲಿ ಏನು ತೀರ್ಮಾನವಾಗಿದೆ ಎಂಬುದೇ ತಮಗೆ ತಿಳಿದಿಲ್ಲ ಎಂದು ಹೇಳಿದರು.ಜಿಲ್ಲಾಡಳಿತದ ಈ ನಡೆ ಶಿಷ್ಟಾಚಾರ ಉಲ್ಲಂಘನೆಯಾಗಿದ್ದು, ಈ ಕುರಿತು ಈಗಾಗಲೇ ಸಂಬಂಧಪಟ್ಟವರಿಗೆ ಪತ್ರ ಬರೆದಿದ್ದೇನೆ. ವಿಧಾನ ಪರಿಷತ್‌ನಲ್ಲಿ ಜಿಲ್ಲಾಡಳಿತದ ಅಧಿಕಾರಿಗಳ ವಿರುದ್ಧ ಧ್ವನಿ ಎತ್ತುವುದರ ಜತೆಗೆ ಹಕ್ಕುಚ್ಯುತಿ ಮಂಡಿಸಿ ಕ್ರಮಕ್ಕೆ ಒತ್ತಾಯಿಸುತ್ತೇನೆ ಎಂದು ಎಚ್ಚರಿಸಿದರು. ಹಾಲಿನ ದರ ಏರಿಕೆಗೆ ಸ್ವಾಗತ:

ಹಾಲಿನ ದರ ಏರಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ರೈತರು ಹಾಗೂ ಗ್ರಾಹಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಬೇಕಿದೆ. ಆದರೆ ಹಾಲು ಉತ್ಪಾದಕರ ಹಿತಕ್ಕೆ ಮೊದಲ ಆದ್ಯತೆ ನೀಡಬೇಕು ಎಂದರು. ರಾಜ್ಯದಲ್ಲಿ ಹಾಲು ಉತ್ಪಾದಕರಿಂದ ಪ್ರತಿ ಲೀಟರ್‌ಗೆ ಸುಮಾರು ೩೫ರಂತೆ ಹಾಲು ಖರೀದಿಸಲಾಗುತ್ತಿದೆ. ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ೪೧.೫೦ ಹಾಗೂ ತಮಿಳುನಾಡಿನಲ್ಲಿ ೪೦.೫೦ ನೀಡಲಾಗುತ್ತಿದೆ. ಬರಗಾಲದಿಂದ ಬೆಳೆ ಬೆಳೆಯಲು ಸಾಧ್ಯವಾಗದೆ, ಮೇವಿನ ಕೊರತೆಯೂ ಉಂಟಾಗಿ ಹೈನುಗಾರರು ಸಂಕಷ್ಟ ಎದುರಿಸುತ್ತಿದ್ದಾರೆ. ಹಾಲು ಉತ್ಪಾದಕರು ಮತ್ತು ಹಾಲು ಒಕ್ಕೂಟಗಳ ಹಿತದ ಜತೆಗೆ ಗ್ರಾಹಕರಿಗೂ ಹೊರೆಯಾಗದ ರೀತಿಯಲ್ಲಿ ದರ ಹೆಚ್ಚಿಸಿರುವುದು ಸ್ವಾಗತಾರ್ಹ. ಈ ನಿರ್ಧಾರವನ್ನು ಬಹಳ ಹಿಂದೆಯೇ ಕೈಗೊಳ್ಳಬೇಕಿತ್ತು. ಬರಗಾಲದ ಸಂದರ್ಭದಲ್ಲಿ ದರ ಹೆಚ್ಚಳ ಮಾಡಿರುವುದು ಕೂಡ ಹೈನುಗಾರರಿಗೆ ನೆರವಾಗಲಿದೆ ಎಂದು ಅಭಿಪ್ರಾಯಪಟ್ಟರು.