ಪಂಚಮಸಾಲಿ ಲಿಂಗಾಯತ ಸಮುದಾಯದ ಶಾಂತಿಯುತ ಹೋರಾಟದ ಮೇಲೆ 2024ರ ಡಿ.10ರಂದು ಬೆಳಗಾವಿಯಲ್ಲಿ ನಡೆದ ಪೊಲೀಸ್ ಲಾಠಿಚಾರ್ಜ್ ಘಟನೆಗೆ ರಾಜ್ಯ ಸರ್ಕಾರ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ತಡ ಮಾಡದೆ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಪಂಚಮಸಾಲಿ ಲಿಂಗಾಯತ ಸಮುದಾಯದ ಶಾಂತಿಯುತ ಹೋರಾಟದ ಮೇಲೆ 2024ರ ಡಿ.10ರಂದು ಬೆಳಗಾವಿಯಲ್ಲಿ ನಡೆದ ಪೊಲೀಸ್ ಲಾಠಿಚಾರ್ಜ್ ಘಟನೆಗೆ ರಾಜ್ಯ ಸರ್ಕಾರ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ತಡ ಮಾಡದೆ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು, ಬೆಳಗಾವಿ ಅಧಿವೇಶನದ ವೇಳೆ ನಮ್ಮ ಸಮುದಾಯದವರು ಶಾಂತಿಯುತವಾಗಿ ಹಕ್ಕು ಮಂಡಿಸಲು ತೆರಳಿದ್ದಾಗ ಪೊಲೀಸ್ ದೌರ್ಜನ್ಯ ನಡೆಸಿರುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದೆ. ಈ ಘಟನೆಯು ಮಹಿಳೆಯರು, ವೃದ್ಧರು ಮತ್ತು ಯುವಕರ ಮನಸ್ಸಿನಲ್ಲಿ ಆಳವಾದ ಗಾಯ ಉಂಟುಮಾಡಿದೆ. ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರಗಳು ಹೋರಾಟಗಳನ್ನು ಸಂಯಮದಿಂದ ಮತ್ತು ಸಂವಾದದ ಮೂಲಕ ನಿರ್ವಹಿಸಿದ್ದವು. ಆದರೆ, ಪ್ರಸ್ತುತ ಸರ್ಕಾರ ಮೊಂಡುತನ ಪ್ರದರ್ಶಿಸುತ್ತಿದೆ. ಆಡಳಿತಾತ್ಮಕ ವೈಫಲ್ಯ ಮುಚ್ಚಿಕೊಳ್ಳಲು ಬಲಪ್ರಯೋಗದ ದಾರಿ ಹಿಡಿದಿದೆ ಎಂದು ಆರೋಪಿಸಿದರು. ಮುಂದಿನ ದಿನಗಳಲ್ಲಿ ಸಮುದಾಯದ ವತಿಯಿಂದ ರಾಜ್ಯಾದ್ಯಂತ ಬೃಹತ್ ಮತ್ತು ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಬಿಜೆಪಿ ಮುಖಂಡ ಹಾಗೂ ಸಮಾಜದ ನಾಯಕ ಸುರೇಶ ಬಿರಾದಾರ ಮಾತನಾಡಿದರು. ಮುಖಂಡರಾದ ವಿಜುಗೌಡ ಪಾಟೀಲ, ಚಂದ್ರಶೇಖರ ಕವಟಗಿ, ಉಮೇಶ ಕಾರಜೋಳ, ಮಳುಗೌಡ ಪಾಟೀಲ, ರವಿ ಬಗಲಿ, ಈರಣ್ಣ ರಾವೂರ, ಭರತ ಕೋಳಿ, ಭಾರತಿ ಭುಯ್ಯಾರ, ಸ್ವಪ್ನಾ ಕಣಮುಚನಾಳ, ರಾಜಕುಮಾರ ಸಗಾಯಿ, ಶ್ರೀಕಾಂತ ಸಿಂಧೆ ಇದ್ದರು.