ಬರ ಪರಿಸ್ಥಿತಿ ಅಧ್ಯಯನಕ್ಕೆ ರಾಜ್ಯಕ್ಕೆ ಭೇಟಿ ನೀಡಿರುವ ಕೇಂದ್ರದ ಅಂತರ್‌ ಸಚಿವಾಲಯ ತಂಡದೊಂದಿಗೆ ಶನಿವಾರ ಸಭೆ ನಡೆಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಮೊದಲ ಹಂತದಲ್ಲಿ 177 ತಾಲೂಕುಗಳ ಬರ ಪರಿಹಾರವಾಗಿ 7142.64 ಕೋಟಿ ರು. ನೀಡುವಂತೆ ಮನವಿ ಮಾಡಿದ್ದಾರೆ. ಜತೆಗೆ ಬರ ಅಧ್ಯಯನ ನಡೆಸಿ ರಾಜ್ಯಕ್ಕೆ ನ್ಯಾಯಸಮ್ಮತ ಪರಿಹಾರ ಕೊಡುವಂತೆ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬರ ಪರಿಸ್ಥಿತಿ ಅಧ್ಯಯನಕ್ಕೆ ರಾಜ್ಯಕ್ಕೆ ಭೇಟಿ ನೀಡಿರುವ ಕೇಂದ್ರದ ಅಂತರ್‌ ಸಚಿವಾಲಯ ತಂಡದೊಂದಿಗೆ ಶನಿವಾರ ಸಭೆ ನಡೆಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಮೊದಲ ಹಂತದಲ್ಲಿ 177 ತಾಲೂಕುಗಳ ಬರ ಪರಿಹಾರವಾಗಿ 7142.64 ಕೋಟಿ ರು. ನೀಡುವಂತೆ ಮನವಿ ಮಾಡಿದ್ದಾರೆ. ಜತೆಗೆ ಬರ ಅಧ್ಯಯನ ನಡೆಸಿ ರಾಜ್ಯಕ್ಕೆ ನ್ಯಾಯಸಮ್ಮತ ಪರಿಹಾರ ಕೊಡುವಂತೆ ಹೇಳಿದ್ದಾರೆ.

ಬರ ಅಧ್ಯಯನಕ್ಕಾಗಿ ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಿತ್‌ಕುಮಾರ್‌ ಸಾಹು ನೇತೃತ್ವದ ಕೇಂದ್ರ ಅಂತರ್‌ ಸಚಿವಾಲಯದ ತಂಡದೊಂದಿಗೆ ಡಿ.ಕೆ.ಶಿವಕುಮಾರ್‌ ಅವರು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದೆ. ಈ ವೇಳೆ ಕಂದಾಯ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಸೇರಿದಂತೆ ಹಲವರು ಉಪಸ್ಥಿತಿರಿದ್ದು, ಕೇಂದ್ರದ ತಂಡಕ್ಕೆ ರಾಜ್ಯದ ಬರ ಪರಿಸ್ಥಿತಿ ಕುರಿತಂತೆ ವಿವರಣೆ ನೀಡಿದರು.

ಸಭೆಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್‌ ಅವರು, ಕರ್ನಾಟಕದಲ್ಲಿ ಬರ ಪರಿಸ್ಥಿತಿಯಿಂದ 46,324.50 ಕೋಟಿ ರು. ನಷ್ಟವಾಗಿದೆ. ಅದರಲ್ಲಿ ರಾಜ್ಯ ಸರ್ಕಾರ ಮೊದಲ ಹಂತದಲ್ಲಿ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ, ₹3701 ಕೋಟಿ ಬರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಅದರ ಜತೆಗೆ ಹೊಸದಾಗಿ 76 ತಾಲೂಕುಗಳನ್ನು ಸೇರಿಸಿ ಬರ ಪರಿಹಾರದ ಪರಿಷ್ಕೃತ ಪಟ್ಟಿ ಸಿದ್ಧಪಡಿಸಲಾಗಿದೆ. ಅದರಂತೆ ಪರಿಷ್ಕೃತ ಪಟ್ಟಿಯಲ್ಲಿ ₹3,437.34 ಕೋಟಿ ಹೆಚ್ಚುವರಿಯಾಗಿ ಸೇರಿಸಿ ಒಟ್ಟು ₹7142.64 ಕೋಟಿ ಪರಿಹಾರಕ್ಕೆ ಮನವಿ ಮಾಡಲಾಗಿದೆ ಎಂದು ವಿವರಿಸಿದರು.

ರಾಜ್ಯದ 240 ತಾಲೂಕುಗಳ ಪೈಕಿ 217 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿದೆ. ಕೇಂದ್ರ ಸರ್ಕಾರದ ವಿಪತ್ತು ನಿರ್ವಹಣೆಗೆ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ವೈಜ್ಞಾನಿಕವಾಗಿ ಮೌಲ್ಯಮಾಪನ ನಡೆಸಿ ಬರಪೀಡಿತ ತಾಲೂಕುಗಳನ್ನು ಘೋಷಿಸಲಾಗಿದೆ. ರೈತರು ಕಂಗಾಲಾದರೆ ಎಲ್ಲವೂ ಸ್ಥಗಿತಗೊಳ್ಳುತ್ತದೆ. ಹೀಗಾಗಿ ಕೇಂದ್ರ ಸರ್ಕಾರ ರಾಜ್ಯದ ರೈತರ ನೆರವಿಗೆ ಧಾವಿಸಬೇಕು ಎಂದು ಮನವಿ ಮಾಡಿದರು.

ನನ್ನ ಮತ್ತು ಉಪಮುಖ್ಯಮಂತ್ರಿ ಡಾ। ಪರಮೇಶ್ವರ್‌ ಅವರ ನಾಲ್ಕು ದಶಕಗಳ ಸಾರ್ವಜನಿಕ ಜೀವನದಲ್ಲಿ ಜನ ಇಷ್ಟು ತೊಂದರೆಗೊಳಗಾಗಿರುವುದನ್ನು ನೋಡಿಲ್ಲ. ರೈತರ ಸಮಸ್ಯೆ ಅರಿಯಲು ವಿಧಾನಮಂಡಲ ವಿಶೇಷ ಅಧಿವೇಶನವನ್ನೂ ಕರೆಯಲಾಗಿತ್ತು. ಕೃಷ್ಣಾ ಜಲಾನಯನ ಪ್ರದೇಶ ಹೊರತುಪಡಿಸಿ, ಉಳಿದೆಲ್ಲ ಜಲಾಶಯಗಳಲ್ಲಿ ನೀರಿನ ಹರಿವು ಕಡಿಮೆಯಾಗಿದೆ. ಮಲೆನಾಡು, ಕರಾವಳಿ ಪ್ರದೇಶಗಳಲ್ಲೂ ಮಳೆಯ ತೀವ್ರ ಕೊರತೆಯಾಗಿದೆ. ಆದಾಗ್ಯೂ ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡಲು ಸಿಡಬ್ಲ್ಯುಸಿ ಆದೇಶಿಸಿದೆ. ರೈತರಿಗೆ ರಾಜ್ಯ ಸರ್ಕಾರದಿಂದ ತಲಾ 2500 ರು. ಪರಿಹಾರ ಘೋಷಿಸಲಾಗಿದೆ. ಕೇಂದ್ರ ಸರ್ಕಾರದಿಂದ ಹೆಚ್ಚಿನ ಸಹಕಾರ ನಿರೀಕ್ಷಿಸುತ್ತಿದ್ದೇವೆ ಎಂದರು.

ಮುಖ್ಯಮಂತ್ರಿ ಅವರ ಮನವಿಯನ್ನಾಲಿಸಿದ ಕೇಂದ್ರದ ತಂಡದ ಮುಖಸ್ಥ ಅಜಿತ್‌ಕುಮಾರ್‌ ಸಾಹು, ರಾಜ್ಯದಲ್ಲಿ ಪ್ರವಾಸ ಮಾಡಿ ವಸ್ತುಸ್ಥಿತಿ ಅರಿಯವುದರೊಂದಿಗೆ ದತ್ತಾಂಶಗಳನ್ನು ರಾಜ್ಯ ಸರ್ಕಾರದಿಂದ ಪಡೆದುಕೊಳ್ಳುತ್ತೇವೆ. ಬರ ವಿಚಾರವಾಗಿ ವಸ್ತುನಿಷ್ಠ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವುದಾಗಿ ಭರವಸೆ ನೀಡಿದರು.

ಮುಖ್ಯಮಂತ್ರಿ ಅವರ ಅಪರ ಮುಖ್ಯ ಕಾರ್ಯದರ್ಶಿ ತುಷಾರ್‌ ಗಿರಿನಾಥ್‌, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಿತೇಶ್‌ಕುಮಾರ್‌ ಸಿಂಗ್‌, ಅಪರ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತೆ ಡಾ। ಉಮಾ ಮಹದೇವನ್‌, ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಪ್ರಧಾನ ಕಾರ್ಯದರ್ಶಿ ಮನೋಜ್‌ಕುಮಾರ್‌ ಮೀನಾ ಇದ್ದರು.30 ಜಿಲ್ಲೆಗಳಲ್ಲಿ ಬರ, 47.09 ಲಕ್ಷ ಹೆಕ್ಟೇರ್‌ ಬೆಳೆ ನಷ್ಟ: ಪರಮೇಶ್ವರ್‌

ಉಪಮುಖ್ಯಮಂತ್ರಿ ಡಾ.ಪರಮೇಶ್ವರ್‌ ಅವರು ಬರ ಪರಿಸ್ಥಿತಿಯನ್ನು ವಿವರಿಸಿ, ರಾಜ್ಯದ 31 ಜಿಲ್ಲೆಗಳ ಪೈಕಿ 30 ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ತೀವ್ರವಾಗಿದೆ. 217 ತಾಲೂಕುಗಳು ಬರ ಪೀಡಿತವಾಗಿದ್ದು, ಆ ಪೈಕಿ ಈಗಾಗಲೇ ಅಂದಾಜಿಸಲಾಗಿರುವ 177 ತಾಲೂಕುಗಳಲ್ಲಿ 47.09 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. 2026ರ ನೈಋತ್ಯ ಮುಂಗಾರು ಅವಧಿಯಲ್ಲಿ ಶೇ.35ರಷ್ಟು ಮಳೆ ಕೊರತೆ ದಾಖಲಾಗಿದೆ. ರಾಜ್ಯದಲ್ಲಿ ಕೇವಲ 551 ಮಿ.ಮೀ. ಮಳೆ ದಾಖಲಾಗಿದೆ. 1956ರ ನಂತರ ರಾಜ್ಯದಲ್ಲಿ ದಾಖಲಾದ ಎರಡನೇ ಅತಿ ಕಡಿಮೆ ಮಳೆಯಾಗಿದೆ. 209 ತಾಲೂಕುಗಳಲ್ಲಿ ಮಳೆ ಕೊರತೆ ಆಗಿದೆ ಎಂದು ವಿವರಿಸಿದರು.

ಕುಡಿಯುವ ನೀರಿನ ಸಮಸ್ಯೆ ಈಗಾಗಲೇ ಶುರುವಾಗಿದೆ. 227 ಟ್ಯಾಂಕರ್‌ಗಳು ಮತ್ತು ಬಾಡಿಗೆಗೆ ಪಡೆದ 720 ಕೊಳವೆಬಾವಿಗಳ ಮೂಲಕ 861 ಗ್ರಾಮೀಣ ಪ್ರದೇಶಕ್ಕೆ ಈಗಾಗಲೇ ಕುಡಿಯುವ ನೀರು ಪೂರೈಸಲಾಗುತ್ತಿದೆ. ಮುಂಬರುವ ತಿಂಗಳುಗಳಲ್ಲಿ 2,300ಕ್ಕೂ ಹೆಚ್ಚಿನ ಗ್ರಾಪಂಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸಬಹುದು ಎಂದು ಅಂದಾಜಿಸಲಾಗಿದೆ. ಬರದ ಪರಿಣಾಮ ತಗ್ಗಿಸಲು ಬೆಳೆ ರಕ್ಷಣೆ, ಮೇವಿನ ಲಭ್ಯತೆ, ಜಾನುವಾರುಗಳ ರಕ್ಷಣೆ ಮತ್ತು ಗ್ರಾಮೀಣ ಉದ್ಯೋಗಕ್ಕೆ ಕ್ರಮ ಕೈಗೊಳ್ಳಲಾಗಿದೆ. ಈ ವರ್ಷ ರಾಜ್ಯವು ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆ ಅಡಿ 37.50 ಲಕ್ಷ ರೈತರು ನೋಂದಾಯಿದ್ದಾರೆ ಎಂದರು.

ರಾಜ್ಯ ಸರ್ಕಾರ ಸಲ್ಲಿಸಿರುವ ಎರಡು ಮನವಿಗಳಲ್ಲಿ ಕೇವಲ 177 ತಾಲೂಕುಗಳನ್ನಷ್ಟೇ ಸೇರಿಸಲಾಗಿದ್ದು, ನಂತರ ಬರ ಪೀಡಿತವೆಂದು ಘೋಷಿಸಲಾದ ಹೆಚ್ಚುವರಿ 40 ತಾಲೂಕುಗಳು ಹಾಗೂ ಅಂತಿಮ ಮೌಲ್ಯಮಾಪನದ ವೇಳೆ ಗುರುತಿಸಲಾಗುವ ಹೆಚ್ಚುವರಿ ಬೆಳೆ ಹಾನಿಯನ್ನೂ ಪರಿಗಣನೆಗೆ ತೆಗೆದುಕೊಳ್ಳಬೇಕು. ಮೌಲ್ಯಮಾಪನ ಪೂರ್ಣಗೊಂಡ ನಂತರ ಬರದಿಂದ ಬಾಧಿತ ಬೆಳೆ ಪ್ರದೇಶ 55 ಲಕ್ಷ ಹೆಕ್ಟೇರ್‌ಗಳಷ್ಟಾಗಬಹುದು ಎಂದು ಹೇಳಿದರು.