ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿ
ಭೀಮಾನದಿ ಪ್ರವಾಹ ಹಾಗೂ ಮಳೆಯಿಂದ ಬೆಳೆ ಹಾನಿಗೊಳಗಾದ ಆಸ್ತಿಪಾಸ್ತಿಗಳ ವರದಿ ತಯಾರಿಸಬೇಕು. ಈ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿದ್ದು, ವಾಸ್ತವ ಅಂಶಗಳನ್ನು ಒಳಗೊಂಡು ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭೀಮಾನದಿ ಪ್ರವಾಹ ಕುರಿತು ಅಧಿಕಾರಿಗಳ ತುರ್ತು ಸಭೆಯಲ್ಲಿ ಮಾತನಾಡಿದರು. ಕಾಳಜಿ ಕೇಂದ್ರಗಳಲ್ಲಿರುವ ಜನರು ಹಾಗೂ ಜಾನುವಾರುಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಪ್ರವಾಹ ಹಾಗೂ ಮಳೆಯಿಂದ ಜೀವಹಾನಿಯಾಗದಂತೆ ಕಾಳಜಿ ವಹಿಸಬೇಕು. ಮಳೆಯಿಂದ ನೀರು ರಸ್ತೆ ಮೇಲೆ ಬಂದು ಸಂಚಾರಕ್ಕೆ ಅಡಚಣೆಯುಂಟು ಮಾಡದಂತೆ ಶಾಶ್ವತ ಪರಿಹಾರಕ್ಕೆ ರೂಪುರೇಷ ತಯಾರಿಸಿ, ಸಮಸ್ಯೆ ಬಗೆ ಹರಿಸಲು ಕ್ರಮ ಕೈಗೊಳ್ಳಬೇಕು. ಪಟ್ಟಣದ ಧನಶೆಟ್ಟಿ ಗೊಬ್ಬರ ಅಂಗಡಿಯಲ್ಲಿ ಮಳೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿಯಾದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕರು, ಹಾನಿ ಕುರಿತು ಇನ್ಸೂರೆನ್ಸ್ ದೊರೆಯುವಂತೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಮಳೆಯಿಂದ ಬೆಳೆಗಳು ಸಂಪೂರ್ಣ ಹಾನಿಯಾಗಿದೆ. ವಾಣಿಜ್ಯ ಬೆಳೆಗಳ ಹಾನಿ, ಕಟ್ಟಡಗಳ ಹಾನಿ ಕುರಿತು ಪ್ರತ್ಯೇಕ ವರದಿ ತಯಾರಿಸಬೇಕು. ಯಾರೂ ಆತಂಕ ಪಡಬಾರದು. ನಿಮ್ಮ ಜೊತೆ ತಾಲೂಕು ಆಡಳಿತ, ಸರ್ಕಾರವಿದೆ. ಬೆಳೆ ಪರಿಹಾರ, ಕಟ್ಟಡ ಹಾನಿಯನ್ನು ಒಗಿಸಿಕೊಡಲಾಗುತ್ತದೆ. ಪ್ರವಾಹ, ಮಳೆಯಿಂದ ಸಂಕ್ರಾಮಿಕ ರೋಗಗಳು ಬರುವ ಸಾಧ್ಯತೆ ಇದ್ದು, ಗ್ರಾಮಗಳಲ್ಲಿ ಫಾಗಿಂಗ್ ಸಿಂಪಡಿಸಬೇಕು. ಸ್ವಚ್ಚತೆಗೆ ಕ್ರಮ ಕೈಗೊಳ್ಳಬೇಕು. ಭೀಮಾ ನದಿಯಲ್ಲಿ ಗದ್ದಲು ನೀರು ಬರುತ್ತಿದ್ದು, ಸಾರ್ವಜನಿಕರಿಗೆ ಶುದ್ದ ಕುಡಿಯುವ ನೀರು ಒದಗಿಸಿ. ಬಡವರು, ನಿರ್ಗಗತಿಕರಿಗೆ ಹಾಗೂ ತೊಂದರೆಗೆ ಒಳಗಾದವರಿಗೆ ಮಾನವೀಯತೆಯ ಮೇಲೆ ಸಹಾಯ ಮಾಡಬೇಕು ಎಂದು ಹೇಳಿದರು.ಸಭೆಯಲ್ಲಿ ತಹಸೀಲ್ದಾರ್ ಬಿ.ಎಸ್.ಕಡಕಭಾವಿ, ತಾಪಂ ಇಒ ಡಾ.ಕನ್ನೂರ, ಎಇಇ ದಯಾನಂದ ಮಠ, ಶಿವಾಜಿ ಬನಸೋಡೆ, ಕೃಷಿ ಎಡಿ ಮಹಾದೇವಪ್ಪ ಏವೂರ, ತೋಟಗಾರಿಕೆ ಅಧಿಕಾರಿ ಎಚ್.ಎಸ್.ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಸಿದರಾಯ ಕಟ್ಟಿಮನಿ, ಸಿ.ಎಸ್.ವಾಲಿಕಾರ, ಪಿ.ಜೆ.ಕೊಡಹೊನ್ನ, ಬಸವರಾಜ ರಾವೂರ, ಸಂತೋಷ ಹೊಟಗಾರ, ಆರ್.ಎಫ್‌ಒ ಮಂಜುನಾಥ ಧುಳೆ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ನೋಡಲ್ ಅಧಿಕಾರಗಳು, ಪಿಡಿಒ, ಗ್ರಾಮ ಆಡಳಿತಾಧಿಕಾರಿಗಳು ಸಭೆಯಲ್ಲಿ ಇದ್ದರು.