ಚಿಕ್ಕಮಗಳೂರುವನ್ಯಜೀವಿಗಳಿಂದ ಬೆಳೆ ಹಾನಿ ದೂರು ಬಂದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಜಿಪಿಎಸ್ ಚಿತ್ರ ಸಹಿತ ಹಾನಿಯ ನಿರ್ಧಾರ ಮಾಡಿ ತ್ವರಿತವಾಗಿ ಪರಿಹಾರ ನೀಡಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಸೂಚಿಸಿದ್ದಾರೆ.

ಚಿಕ್ಕಮಗಳೂರಿನ ಜಿಲ್ಲಾ ಪಂಚಾಯಿತಿಯಲ್ಲಿ ಶನಿವಾರ ಅಧಿಕಾರಿಗಳೊಂದಿಗೆ ಸಭೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ವನ್ಯಜೀವಿಗಳಿಂದ ಬೆಳೆ ಹಾನಿ ದೂರು ಬಂದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಜಿಪಿಎಸ್ ಚಿತ್ರ ಸಹಿತ ಹಾನಿಯ ನಿರ್ಧಾರ ಮಾಡಿ ತ್ವರಿತವಾಗಿ ಪರಿಹಾರ ನೀಡಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಸೂಚಿಸಿದ್ದಾರೆ.

ಚಿಕ್ಕಮಗಳೂರಿನ ಜಿಲ್ಲಾ ಪಂಚಾಯಿತಿಯಲ್ಲಿ ಶನಿವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಆನೆ, ಕಾಡೆಮ್ಮೆ, ಕಾಡುಕೋಣ, ಹಂದಿಗಳಿಂದ ತೀವ್ರ ಬೆಳೆ ಹಾನಿ ಆಗುತ್ತಿದೆ. ಅಧಿಕಾರಿಗಳು ವಿಳಂಬ ಮಾಡದೆ ರೈತರಿಗೆ ಪರಿಹಾರ ನೀಡಬೇಕು. ಪ್ರಾಮಾಣಿಕವಾಗಿ ಬೆಳೆ ಹಾನಿ ನಿರ್ಧಾರ ಮಾಡಬೇಕು ಎಂದರು.

ಪ್ರಸ್ತುತ ವೃತ್ತಕ್ಕೆ ₹1 ಕೋಟಿ ಹಣ ಬಿಡುಗಡೆಯಾಗಿದೆ. ಬಾಕಿ ಇರುವ ಎಲ್ಲ ಬೆಳೆ ಹಾನಿ ಪರಿಹಾರ ನೀಡುವಂತೆ ಸೂಚಿಸಿದ ಅವರು, ಆನೆ ನಿಗ್ರಹ ಕಂದಕ, ಸೌರತಂತಿ ಬೇಲಿಗಳ ಸಮರ್ಪಕ ನಿರ್ವಹಣೆ ಮಾಡುವಂತೆ ತಿಳಿಸಿದರು.

ಆನೆ ಸೆರೆ ತಂಡ: ಮೂಡಿಗೆರೆ, ಕೊಪ್ಪ ಮೊದಲಾದ ಕಡೆಗಳಲ್ಲಿ ಆನೆ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಭಾಗದಲ್ಲೇ ಒಂದು ಆನೆ ಸೆರೆ ಕಾರ್ಯತಂಡ ಸ್ಥಾಪಿಸುವ ಬಗ್ಗೆ ಪರಿಶೀಲಿಸಿ ಕಾರ್ಯಸಾಧ್ಯ ವರದಿ ಕೇಳಿದ ಸಚಿವರು, ಹೊಸದಾಗಿ ಮಾಡಿ ರುವ ಆನೆ ಕಾರ್ಯಪಡೆ ಹೇಗೆ ಕಾರ್ಯ ನಿರ್ವಹಿಸುತ್ತಿದೆ ಎಂಬ ಬಗ್ಗೆಯೂ ವರದಿ ಸಲ್ಲಿಸಲು ತಿಳಿಸಿದರು.

ರೈಲ್ವೆ ಬ್ಯಾರಿಕೇಡ್ ಅಧ್ಯಯನ ಅಗತ್ಯ

ತಾವು ಸಚಿವರಾದ ತರುವಾಯ, ಮುಖ್ಯಮಂತ್ರಿಗಳಿಗೆ ಮನವಿ ಮಾಡಿ ಆನೆಗಳ ಉಪಟಳ ಇರುವ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಹೆಚ್ಚುವರಿ ರೈಲ್ವೆ ಬ್ಯಾರಿಕೇಡ್ ಅಳವಡಿಕೆಗೆ ಹಣ ಮಂಜೂರು ಮಾಡಿಸಿದ್ದು, ಕಾಮಗಾರಿಯೂ ಆಗಿದೆ. ಯಾವ ಯಾವ ವಲಯ ದಲ್ಲಿ ಎಷ್ಟು ಕಿಲೋ ಮೀಟರ್ ಬ್ಯಾರಿಕೇಡ್ ಹಾಕಲಾಗಿದೆ. ಬ್ಯಾರಿಕೇಡ್ ಅಳವಡಿಸಿದ ಬಳಿಕ ಆನೆ, ಕಾಡುಕೋಣ ಹಾವಳಿ ಕಡಿಮೆ ಆಗಿದೆಯೇ ಎಂಬ ಬಗ್ಗೆ ಅಧಿಕಾರಿಗಳ ತಂಡ ಅಧ್ಯಯನ ನಡೆಸಿ ವರದಿ ಸಲ್ಲಿಸಬೇಕು ಎಂದರು.

ವನ್ಯಜೀವಿಗಳ ಸಾವಿಗೆ ಕಾರಣವಾಗುವ ಉರುಳು ಅಳವಡಿಸಿರುವ ತೋಟಗಳ ಪರಿಶೀಲನೆ ನಡೆಸಲು ತಿಳಿಸಿದ ಈಶ್ವರ ಖಂಡ್ರೆ, ಹೊರಗುತ್ತಿಗೆ ಸಿಬ್ಬಂದಿಗೆ ಅಗತ್ಯ ಉಪಕರಣ, ನಿಯಮಿತವಾಗಿ ವೇತನ, ಭತ್ಯೆ ಪಾವತಿಸಲು ಸೂಚಿಸಿದರು.

ಸಭೆಯಲ್ಲಿ ಶಾಸಕರಾದ ರಾಜೇಗೌಡ, ತಮ್ಮಯ್ಯ, ಉಪ ಅರಣ್ಯ ಸಂರಕ್ಷಣಾಧಿಕಾರಿ ಪುಲಕಿತ್ ಮೀನಾ, ರಮೇಶ್ ಬಾಬು ಇದ್ದರು.

---ಕೋಟ್‌----

ಕಳಸದಲ್ಲಿ ಕಾಡುಕೋಣದ ದಾಳಿಗೆ ಕೂಲಿ ಕಾರ್ಮಿಕ ಸಾವಿಗೀಡಾಗಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಸಚಿವರು, ಕಾಡುಕೋಣ ಸೆರೆ ತರಬೇತಿ ಪಡೆದಿರುವ ಸಿಬ್ಬಂದಿ ಸಮಸ್ಯೆ ಇರುವ ಪ್ರದೇಶಕ್ಕೆ ನಿಯೋಜಿಸಿ ಜನರ ಪ್ರಾಣಕ್ಕೆ ತೊಂದರೆ ಉಂಟಾಗದಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. - ಈಶ್ವರ್‌ ಬಿ.ಖಂಡ್ರೆ, ಅರಣ್ಯ ಸಚಿವರು---ಬಾಕ್ಸ್‌---

ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಅರಣ್ಯ ಸಂಬಂಧದ ಕಡತ ಕಂದಾಯ ಇಲಾಖೆ ಮುಂದಿದ್ದು, ಶೀಘ್ರ ತರಿಸಿಕೊಂಡು ಘೋಷಣೆ ಮಾಡಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ತಿಳಿಸಿದರು.ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ‘ಮುಳ್ಳಯ್ಯನಗಿರಿ ಸೇರಿ ಸುತ್ತಮುತ್ತಲ ಪರ್ವತಶ್ರೇಣಿ ಕಂದಾಯ ಇಲಾಖೆ ವ್ಯಾಪ್ತಿಯಲ್ಲಿದೆ. ಈಗಿರುವ ಪ್ರಸ್ತಾವನೆ ಜತೆಗೆ ಇನ್ನೂ ಹೆಚ್ಚಿನ ಜಮೀನು ಸೇರಿಸಬೇಕು ಎಂಬುದು ನನ್ನ ಅಭಿಪ್ರಾಯವಾಗಿತ್ತು’ ಎಂದರು. ಸ್ಥಳೀಯ ಶಾಸಕರು, ಗ್ರಾಮಸ್ಥರು ಸೇರಿ ಸಂಬಂಧಿಸಿದ ಎಲ್ಲರ ಜತೆ ಸಮಾಲೋಚನೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇದರ ಜತೆಗೆ ಕಂದಾಯ ಇಲಾಖೆ ಅಭಿಪ್ರಾಯ ಕೇಳಿದ್ದೇವೆ.

ಮಾನವ–ವನ್ಯಜೀವಿ ಸಂಘರ್ಷ ಕಡಿಮೆ ಮಾಡಲು ಬಹಳಷ್ಟು ಕ್ರಮ ಕೈಗೊಂಡಿದ್ದೇವೆ. ಆನೆ ಕಾರ್ಯಪಡೆಗೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲಾಗಿದೆ. ಕಮಾಂಡ್ ಸೆಂಟರ್ ತೆರೆಯಲಾಗಿದೆ. ರೈಲ್ವೆ ಬ್ಯಾರಿಕೇಡ್, ಟೆಂಟಕಲ್ ಬೇಲಿಗಳನ್ನೂ ಈಗಾಗಲೇ ನಿರ್ಮಿಸಲಾಗಿದೆ ಇನ್ನೂ ಹೆಚ್ಚಿನ ಬೇಲಿ ನಿರ್ಮಿಸಲು ಅನುದಾನ ನೀಡಲಾಗಿದೆ. ಕಾಡಿನಿಂದ ಪ್ರಾಣಿಗಳು ಜನವಸತಿ ಕಡೆಗೆ ಬರುವುದನ್ನು ತಡೆಯಲಾಗುತ್ತಿದೆ. ಕಾಡಂಚಿನಲ್ಲಿ ಪ್ರಾಣಿಗಳ ಗಮನ ಹರಿಸಲು ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ. ದಿನಕ್ಕೆ 10 ಕಿ.ಮೀ. ನಡೆದು ಗಸ್ತು ನಡೆಸಲಿದ್ದಾರೆ ಎಂದು ವಿವರಿಸಿದರು.

ಕಾಡಾನೆ ಸಾಫ್ಟ್ ರಿಲೀಸ್ ಕೇಂದ್ರ ತೆರೆಯಲು ಸಮಗ್ರ ಯೋಜನಾ ವರದಿ ಸಿದ್ಧವಾಗಿದೆ. ಭದ್ರಾ ಅಭಯಾರಣ್ಯದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಿರುವುದರಿಂದ ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿದೆ. ₹60 ಕೋಟಿ ಅನುದಾನ ಲಭ್ಯವಿದ್ದು, ಬೇರೆ ಎಲ್ಲಿ ಸಾಫ್ಟ್‌ ರಿಲೀಸ್ ಕೇಂದ್ರ ತೆರೆಯಬಹುದು ಎಂಬುದನ್ನು ಅಧಿಕಾರಿಗಳು ನೋಡುತ್ತಿದ್ದಾರೆ. ಶೀಘ್ರ ಜಾಗ ಅಂತಿಮಗೊಳ್ಳಲಿದ್ದು, ತಿಂಗಳಲ್ಲೇ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ ಎಂದು ವಿವರಿಸಿದರು.

ಕುದುರೆಮುಖ ರಾಷ್ಟ್ರೀಯ ಉದ್ಯಾನದಿಂದ ಹೊರ ಬರಲು ಒಪ್ಪಿರುವ 300 ಕುಟುಂಬಗಳ ಸ್ಥಳಾಂತರಕ್ಕೆ ₹300 ಕೋಟಿ ಅಗತ್ಯವಿದೆ. ಸದ್ಯ ₹20 ಕೋಟಿ ಬಿಡುಗಡೆಯಾಗಿದ್ದು, ಹಂತ ಹಂತವಾಗಿ ಹಣದ ಲಭ್ಯತೆ ಆಧರಿಸಿ ಅನುದಾನ ಬಿಡುಗಡೆ ಮಾಡಲಾಗುವುದು. ಒಪ್ಪಿಗೆ ಸೂಚಿಸದ ಇನ್ನೂ 300ಕ್ಕೂ ಹೆಚ್ಚು ಕುಟುಂಬ ಇವೆ. ಒಪ್ಪಿದರೆ ಅವರನ್ನೂ ಸ್ಥಳಾಂತರ ಮಾಡ ಲಾಗುವುದು. ಮೂಲ ಸೌಕರ್ಯ ಇಲ್ಲದ ಅರಣ್ಯದಲ್ಲಿ ಅವರು ಉಳಿದು ಏನು ಮಾಡುತ್ತಾರೆ, ಮುಂದಿನ ದಿನಗಳಲ್ಲಿ ಅವರೂ ಒಪ್ಪಿಗೆ ಸೂಚಿಸುತ್ತಾರೆ ಎಂದು ಹೇಳಿದರು.--

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ಬಿಜೆಪಿ ಅತ್ಮಾವಲೋಕನ ಮಾಡಿಕೊಳ್ಳಲಿ

ಚಿಕ್ಕಮಗಳೂರು: ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ಬಗ್ಗೆ ಟೀಕೆ ಮಾಡುತ್ತಿರುವ ಬಿಜೆಪಿ ನಾಯಕರು ಪೆಟ್ರೋಲ್, ಡೀಸೆಲ್, ಗ್ಯಾಸ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಬಗ್ಗೆ ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ 13 ವರ್ಷದ ಹಿಂದೆ ₹400 ಇದ್ದ ಸಿಲಿಂಡರ್ ಬೆಲೆ ಈಗ ಒಂದು ಸಾವಿರ ರು.. ದಾಟಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆ ಇದ್ದರೂ ಭಾರತದಲ್ಲಿ ಬೆಲೆ ಹೆಚ್ಚುತ್ತಿದೆ ಎಂದು ದೂರಿದರು.

ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಬಡವರ ಹಣ ಲೂಟಿ ಮಾಡಲಾಗುತ್ತಿದೆ. ರಾಜ್ಯ ಬಿಜೆಪಿ ನಾಯಕರು ದೆಹಲಿಯಲ್ಲಿ ತಮ್ಮ ಹಕ್ಕು ಕೇಳಲಿ. ಅದನ್ನು ಬಿಟ್ಟು ಇಲ್ಲಿ ಟೀಕೆ ಮಾಡುವುದು ಸರಿಯಲ್ಲ ಎಂದು ಲೇವಡಿ ಮಾಡಿದರು.ಉಪಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಗೆಲುವು ಸಾಧಿಸುತ್ತದೆ. ಕೆಲವೊಂದು ಸಣ್ಣಪುಟ್ಟ ಅಸಮಾಧಾನ ಇದ್ದೇ ಇರುತ್ತದೆ. ಕಾಂಗ್ರೆಸ್ ಎಲ್ಲರಿಗೂ ಸಮಾನ ಅವಕಾಶ ನೀಡಿದೆ ಎಂದು ಹೇಳಿದರು.

ಕಾಂಗ್ರೆಸ್ ಬಗ್ಗೆ ಬಿಜೆಪಿ ಇಲ್ಲಸಲ್ಲದ ಆರೋಪ ಮಾಡುತ್ತಿದೆ. ಕಾಂಗ್ರೆಸ್ ಎಂದೆಂದಿಗೂ ಮಹಿಳೆಯರ ಪರವಾಗಿಯೇ ಇದೆ. ಆದರೆ ಬಿಜೆಪಿ ಮಹಿಳಾ ವಿರೋಧಿ ಎಂದು ಟೀಕಿಸಿದರು.