ರೈತರಿಗೆ ಸೂಕ್ತ ಸವಲತ್ತು ಒದಗಿಸಿ: ಆನಂದ್‌

| Published : Jun 23 2024, 02:07 AM IST

ಸಾರಾಂಶ

ಕಡೂರು, ಕ್ಷೇತ್ರದ ಅರ್ಹ ರೈತರಿಗೆ ಸಿಗಬೇಕಾದ ಎಲ್ಲಾ ಸವಲತ್ತುಗಳನ್ನು ಒದಗಿಸಲು ಸಂಬಂಧಿಸಿದ ಇಲಾಖೆಗಳು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಶಾಸಕ ಕೆ.ಎಸ್.ಆನಂದ್ ಸೂಚನೆ ನೀಡಿದರು.

ಕಡೂರಿನ ಕೆರೆಸಂತೆ ಗ್ರಾಮದಲ್ಲಿ ಪಶುಸಂಗೋಪನಾ ಇಲಾಖೆಯಿಂದ ಎಮ್ಮೆ, ಹಸು ಕರುಗಳ ಪ್ರದರ್ಶನ, ಚಿಕಿತ್ಸಾ ಶಿಬಿರ

ಕನ್ನಡಪ್ರಭ ವಾರ್ತೆ, ಕಡೂರು

ಕ್ಷೇತ್ರದ ಅರ್ಹ ರೈತರಿಗೆ ಸಿಗಬೇಕಾದ ಎಲ್ಲಾ ಸವಲತ್ತುಗಳನ್ನು ಒದಗಿಸಲು ಸಂಬಂಧಿಸಿದ ಇಲಾಖೆಗಳು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಶಾಸಕ ಕೆ.ಎಸ್.ಆನಂದ್ ಸೂಚನೆ ನೀಡಿದರು. ಕಡೂರು ಕ್ಷೇತ್ರದ ಕೆರೆಸಂತೆ ಗ್ರಾಮದಲ್ಲಿ ಪಶುಸಂಗೋಪನಾ ಇಲಾಖೆಯಿಂದ ನಡೆದ ಮಿಶ್ರತಳಿ, ನಾಟಿ ತಳಿಯ ಎಮ್ಮೆ, ಹಸು ಕರುಗಳ ಪ್ರದರ್ಶನ ಮತ್ತು ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಕಟ್ಟಕಡೆಯ ಅರ್ಹ ರೈತರಿಗೂ ಸರ್ಕಾರದ ಸವಲತ್ತು ಗಳನ್ನು ಪ್ರಾಮಾಣಿಕವಾಗಿ ತಲುಪಿಸುವ ಕೆಲಸವನ್ನು ಇಲಾಖೆ ಅಧಿಕಾರಿಗಳು ತಪ್ಪದೆ ಮಾಡಬೇಕು ಎಂದರು.

ಬರಪೀಡಿತ ಬಯಲು ಸೀಮೆಯಾದ ಕಡೂರು ಪ್ರದೇಶದಲ್ಲಿ ರೈತಾಪಿ ವರ್ಗದವರಿಗೆ ಹೈನುಗಾರಿಕೆಯೇ ಜೀವನಾಧಾರವಾಗಿದೆ. ಹಾಗಾಗಿ ರೈತರು ಜಾನುವಾರುಗಳ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ಕೊಟ್ಟು ಅವುಗಳನ್ನು ಕಾಪಾಡಿಕೊಳ್ಳಬೇಕು. ಸಮರ್ಪಕವಾಗಿ ಸೂಕ್ತ ಮೇವು ದೊರಕಿಸಬೇಕು. ಈ ನಿಟ್ಟಿನಲ್ಲಿ ಪಶು ಇಲಾಖೆಯಿಂದ ಉಚಿತ ಹಾಗೂ ರಿಯಾಯಿತಿ ದರದಲ್ಲಿ ನೀಡುವ ಮೇವಿನ ಬೀಜಗಳ ಸವಲತ್ತುಗಳನ್ನು ಉಪಯೋಗಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು. ಕೃಷಿ, ತೋಟಗಾರಿಕೆ, ಪಶು ಇಲಾಖೆಗಳ ಕಾರ್ಯಗಳಲ್ಲಿ ತಾವು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದರು.

ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ಉಮೇಶ್ ಮಾತನಾಡಿ, ಪಶು ಇಲಾಖೆ ಜಾನುವಾರುಗಳಿಗೆ ಆರೋಗ್ಯ ಸಮಸ್ಯೆ ಎದುರಾದರೆ ಕೂಡಲೇ ಸ್ಪಂದಿಸುತ್ತದೆ. ಹಸು, ಕರು ಮುಂತಾದವುಗಳಿಗೆ ಯಾವುದೇ ರೀತಿ ಆರೋಗ್ಯದಲ್ಲಿ ವ್ಯತ್ಯಾಸ ವಾದರೂ ಪಶು ಇಲಾಖೆ ಮಾರ್ಗದರ್ಶನ ಪಡೆದು ಅದನ್ನು ಸರಿಪಪಡಿಸಿಕೊಳ್ಳಬೇಕು. ತುರ್ತು ಪರಿಸ್ಥಿತಿ ಎದುರಾದ ಸಮಯದಲ್ಲಿ ಸಂಚಾರಿ ಪಶು ಚಿಕಿತ್ಸಾಲಯದ ಉಪಯೋಗವನ್ನು ರೈತರು ಪಡೆದುಕೊಳ್ಳಬೇಕು. ಅಗತ್ಯ ಬಿದ್ದರೆ ಸಹಾಯವಾಣಿ ಸಂಖ್ಯೆ1962 ಗೆ ಕರೆ ಮಾಡಿ ಸಲಹೆ, ಸೂಚನೆ ಪಡೆಯಬಹುದು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಮಿಶ್ರತಳಿ ಪಶುಗಳ ಪ್ರದರ್ಶನದಲ್ಲಿ 25 ಕ್ಕೂ ಹೆಚ್ಚು ವಿಜೇತ ರೈತರಿಗೆ ಬಹುಮಾನ ನೀಡಿ, ಪಶು ಆಹಾರದ ಮಿನರಲ್ಸ್ ಮತ್ತು ಟಾನಿಕ್ ಗಳನ್ನು ವಿತರಿಸಲಾಯಿತು. ಕೆರೆಸಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಂದನಾ ರವಿಕುಮಾರ್, ಸದಸ್ಯರು ಮತ್ತಿತರರು ಹಾಜರಿದ್ದರು. 22ಕೆಕೆಡಿಯು1.

ಶಾಸಕ ಕೆ.ಎಸ್. ಆನಂದ್ ಕಡೂರು ಕ್ಷೇತ್ರದ ಕೆರೆಸಂತೆ ಗ್ರಾಮದಲ್ಲಿ ಪಶುಸಂಗೋಪನಾ ಇಲಾಖೆಯಿಂದ ನಡೆದ ಮಿಶ್ರತಳಿ, ನಾಟಿ ತಳಿಯ ಎಮ್ಮೆ,ಹಸು ಕರುಗಳ ಪ್ರದರ್ಶನ ಮತ್ತು ಚಿಕಿತ್ಸಾ ಶಿಬಿರದಲ್ಲಿ ಸವಲತ್ತುಗಳನ್ನು ವಿತರಿಸಿದರು.