ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸಲು ಸೂಚನೆ

| Published : Jul 24 2025, 12:45 AM IST

ಸಾರಾಂಶ

ಗಜೇಂದ್ರಗಡ ತಾಪಂ ಚಿಂತನಾ ಸಭಾಂಗಣದಲ್ಲಿ ಬುಧವಾರ ಸಾಮಾನ್ಯ ಸಭೆ ನಡೆಯಿತು. ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ವ್ಯವಸ್ಥೆ ಹಾಗೂ ಶಾಲಾ ಮೇಲ್ಚಾವಣಿ ದುರಸ್ತಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಿ ಎಂದು ತಾಪಂ ಆಡಳಿತಾಧಿಕಾರಿ ಶಶಿಕಾಂತ ಕೋಟಿಮನಿ ಸೂಚಿಸಿದರು.

ಗಜೇಂದ್ರಗಡ: ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ವ್ಯವಸ್ಥೆ ಹಾಗೂ ಶಾಲಾ ಮೇಲ್ಚಾವಣಿ ದುರಸ್ತಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಿ ಎಂದು ತಾಪಂ ಆಡಳಿತಾಧಿಕಾರಿ ಶಶಿಕಾಂತ ಕೋಟಿಮನಿ ಸೂಚಿಸಿದರು.

ಸ್ಥಳೀಯ ತಾಪಂ ಚಿಂತನಾ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳಿಂದ ಆಗಮಿಸುವ ಹಾಗೂ ತೆರಳುವ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸಲು ಸಾರಿಗೆ ಅಧಿಕಾರಿಗಳು ಕಾರ್ಯಯೋಜನೆ ಹಾಕಿಕೊಳ್ಳಬೇಕು. ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರು ಹಾಗೂ ಗುಣಮಟ್ಟದ ಆಹಾರ ನೀಡಲು ತಿಳಿಸಲಾಗಿದೆ. ತಾಲೂಕಿನಲ್ಲಿ ಶಾಲಾ ಮೇಲ್ಚಾವಣಿ ದುರಸ್ತಿಗೆ ಬಂದಿರುವ ಶಾಲಾ ಕೊಠಡಿಗಳಲ್ಲಿ ಪಾಠ, ಪ್ರವಚನ ನಡೆಸದಂತೆ ಹಾಗೂ ದುರಸ್ತಿಗೊಳ್ಳಬೇಕಿರುವ ಶಾಲೆ, ಅಂಗನವಾಡಿಗಳ ವರದಿಯನ್ನು ಸಿದ್ಧಪಡಿಸಿ ಅಗತ್ಯ ಅನುದಾನ ಬಿಡುಗಡೆಗೆ ತಾಪಂಗೆ ಕ್ರಿಯಾಯೋಜನೆ ರೂಪಿಸಲು ತಿಳಿಸಲಾಗಿದೆ ಎಂದ ಅವರು, ತಾಲೂಕಿನಲ್ಲಿ ಉತ್ತಮ ಮಳೆ ಆಗುತ್ತಿದ್ದು, ರೈತ ಸಮೂಹಕ್ಕೆ ಯೂರಿಯಾ ಗೊಬ್ಬರ ಹಾಗೂ ನ್ಯಾನೋ ಯೂರಿಯಾ ಗೊಬ್ಬರ ಕೊರತೆಯಾಗದಂತೆ ಕ್ರಮ ಕೈಗೊಳ್ಳಬೇಕು. ಬೆಳೆವಿಮೆ ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳಲು ಕೃಷಿ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು. ಮಳೆಯಿಂದ ವಿದ್ಯುತ್ ಕಂಬ ಹಾಗೂ ಟಿಸಿಗಳಲ್ಲಿ ಉಂಟಾಗುವ ತೊಂದರೆಗೆ ಪ್ರಥಮಾದ್ಯತೆ ನೀಡಿ ತ್ವರಿತಗತಿಯ ಪರಿಹಾರಕ್ಕೆ ಹೆಸ್ಕಾಂ ಅಧಿಕಾರಿಗಳು ಕೆಲಸ ನಿರ್ವಹಿಸಬೇಕು ಎಂದರು.

ಈ ವೇಳೆ ತಾಪಂ ಇಒ ಮಂಜುಳಾ ಹಕಾರಿ, ಪಂಚಾಯತ್‌ ರಾಜ್ ನಿರ್ದೇಶಕ ಬಸವರಾಜ ಬಡಿಗೇರ, ತಾಪಂ ಸಹಾಯಕ ಲೆಕ್ಕಾಧಿಕಾರಿ ಚಿಕ್ಕಪ್ಪ ಮಳಗಿ, ಹೆಸ್ಕಾಂ, ಸಾರಿಗೆ ಇಲಾಖೆ, ತೋಟಗಾರಿಕೆ, ಕೃಷಿ, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ ಸೇರಿ ಇತರರ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

ಮಳೆಗಾಲವಾಗಿದ್ದರಿಂದ ತಾಲೂಕಿನಲ್ಲಿ ೨-೩ ಡೇಂಘೀ ಪ್ರಕರಣಗಳು ಕಂಡುಬಂದಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹೀಗಾಗಿ ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ರೋಗದ ಬಗ್ಗೆ ಜಾಗೃತಿ ಮೂಡಿಸಲು ಗ್ರಾಪಂ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಲಾಗಿದೆ ತಾಪಂ ಆಡಳಿತಾಧಿಕಾರಿ ಶಶಿಕಾಂತ ಕೋಟಿಮನಿ ಹೇಳಿದರು.