ಕನ್ನಡಪ್ರಭ ವಾರ್ತೆ ಇಂಡಿ
ಬೇಸಿಗೆಯಲ್ಲಿ ಯಾವುದೇ ಗ್ರಾಮ, ಜನವಸತಿ ಪ್ರದೇಶಕ್ಕೆ ಕುಡಿಯುವ ನೀರಿನ ಅಭಾವವಾಗದಂತೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಬೇಕು. ನೀರಿನ ಸಮಸ್ಯೆ ಉದ್ಭವಿಸಬಹುದಾದ ಸ್ಥಳಗಳ ಕುರಿತು ಮುಂಚಿತವಾಗಿ ತಿಳಿದುಕೊಂಡು ಮಾಹಿತಿ ಸಲ್ಲಿಸಬೇಕು. ನಗರ ನೀರು ಸರಬರಾಜಿಗೆ ಸಂಬಂಧಿಸಿದ ಅಗತ್ಯ ಮುಜಾಗ್ರತಾ ಕ್ರಮವಹಿಸಬೇಕು. ಗ್ರಾಮ ಪಂಚಾಯತಿ ಹಂತದಲ್ಲಿಯೂ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಕಂದಾಯ ಉಪ ವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.ನಗರದ ತಾಪಂ ಸಭಾ ಭವನದಲ್ಲಿ ಹಮ್ಮಿಕೊಂಡ ಕುಡಿಯುವ ನೀರಿನ ಸಮಸ್ಯೆ ಕುರಿತು ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಅಭಿವೃದ್ಧಿ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಪಂ ಇಒ ಡಾ.ಭೀಮಾಶಂಕರ ಕನ್ನೂರ ಮಾತನಾಡಿ, ಕಳೆದ ವರ್ಷದಲ್ಲಿ ಅಂಜುಟಗಿ, ಕೊಳುರಗಿ, ಝಳಕಿ, ಹಡಲಸಂಗ್, ಬಸನಾಳ, ಚವಡಿಹಾಳ, ಚೊರಗಿ, ನಿಂಬಾಳ ಕೆಡಿ, ಚಿಕ್ಕ ಬೆವನೂರ, ತಡವಲಗ, ಬತಗುಣಕಿ, ಸಾಲೋಟಗಿ, ಅಡವಿ ವಸ್ತಿಗಳು ಇನ್ನೂ ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗಿದ್ದು, ಈ ಬಾರಿ ಯಾವುದೇ ಸಮಸ್ಯೆ ಆಗದಂತೆ ಮುಜಾಗ್ರತೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಯಾವುದೇ ಸಮಸ್ಯೆ ಬಾರದಂತೆ ಖುದ್ದಾಗಿ ಪರಿಶೀಲನೆ ನಡೆಸಬೇಕು. ಎಲ್ಲಾ ಬೋರವೆಲ್‌ಗಳ ಮಾಹಿತಿ ಕೂಡ್ರಿಕರಿಸಬೇಕು. ಚಾಲ್ತಿಯಲ್ಲಿರುವ ಬೋರವೆಲ್‌ಗಳು ಪರಿಶೀಲನೆ ಮಾಡಬೇಕು ಎಂದು ಸೂಚಿಸಿದರು.ಚಡಚಣ ತಾಪಂ ಇಒ ಸಂಜಯ ಖಡಗೇಕರ ಮಾತನಾಡಿ, ಗ್ರಾಮೀಣ ಹಂತದಲ್ಲಿ ನೀರಿನ ಮೂಲಗಳನ್ನು ಗುರುತಿಸಿ, ಅವುಗಳನ್ನು ಪರಿಣಾಮಕಾರಿಯಾಗಿ ಸದುಪಯೋಗ ಪಡಿಸಿಕೊಂಡು ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಗ್ರಾಮದ ಸುತ್ತಮುತ್ತಲೂ ನಿಂತ ನೀರನ್ನು ಸ್ವಚ್ಛಗೊಳಿಸಬೇಕು. ಶುದ್ಧ ಕುಡಿಯುವ ನೀರು ಉಪಯೋಗಿಸುವಂತೆ ಗ್ರಾಮಗಳಲ್ಲಿ ಡಂಗುರ ಸಾರಬೇಕು. ನೀರಿನ ನಿರ್ವಹಣೆ ಕುರಿತು ಗ್ರಾಮ ಪಂಚಾಯಿತಿ ಹಂತದಲ್ಲಿ ವಹಿಗಳನ್ನು ಇಟ್ಟುಕೊಳ್ಳಬೇಕು. ಮೇಲಾಧಿಕಾರಿಗಳು ಭೇಟಿ ನೀಡಿದಾಗ ನಿರ್ವಹಣೆ ಮಾಡಿರುವ ದಾಖಲಾತಿಗಳನ್ನು ತೋರಿಸಬೇಕು. ಜನ ಜಾನುವಾರುಗಳಿಗೆ ಬೇಸಿಗೆ ಸಮಯದಲ್ಲಿ ನೀರಿನ ಸಮಸ್ಯೆ ಆಗದಂತೆ ಎಲ್ಲರೂ ಕಾರ್ಯನಿರ್ವಹಿಸಿ ಎಂದು ಸೂಚಿಸಿದರು. ಕಳೆದ 3 ವರ್ಷದಲ್ಲಿ ಇಂಡಿ ಮತ್ತು ಚಡಚಣ ಭಾಗದ ಎಲ್ಲಾ ಅಧಿಕಾರಿಗಳು ಬೇಸಿಗೆ ಸಮಯದಲ್ಲಿ ಅಚ್ಚುಕಟ್ಟಾಗಿ ನಿಭಾಯಿಸಿದ್ದೀರಿ. ಅದೇ ರೀತಿ ಈ ಸಲಾ ಮೇಲಾಧಿಕಾರಿಗಳ ಅಗತ್ಯ ಸಲಹೆ, ಸೂಚನೆ, ಮಾರ್ಗದರ್ಶನ ಪ್ರಕಾರ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿ ಎಂದು ಸೂಚಿಸಿದರು.
ತಹಸೀಲ್ದಾರ್ ಬಿ.ಎಸ್.ಕಡಕಭಾವಿ, ಚಡಚಣ ತಹಸೀಲ್ದಾರ್ ಸಂಜಯ ಇಂಗಳೆ, ಕೆಬಿಜೆಎನ್‌ಎಲ್ ಇಇ ಮನೋಜಕುಮಾರ ಗಡಬಳ್ಳಿ, ಆಲಮಟ್ಟಿ ವಿಭಾಗದ ಇಂಜಿನಿಯರಗಳು, ತಾಲೂಕಿನ ಎಲ್ಲಾ ವಿಭಾಗದ ಅಧಿಕಾರಿಗಳು, ಇಂಡಿ ಮತ್ತು ಚಡಚಣ ಗ್ರಾಪಂ ಆಡಳಿತ ಅಧಿಕಾರಿಗಳು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿ ಇದ್ದರು.