ಶಿರಹಟ್ಟಿ: ಈ ಬಾರಿ ಬಿಸಿಲಿನ ತೀವ್ರತೆ ಜೋರಾಗಿರುವುದರಿಂದ ಗ್ರಾಮೀಣ ಭಾಗದಲ್ಲಿ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಧಿಕಾರಿಗಳು ಅಗತ್ಯ ಮುಂಜಾಗ್ರತೆ ವಹಿಸುವಂತೆ ಶಾಸಕ ಡಾ. ಚಂದ್ರು ಕೆ. ಲಮಾಣಿ ಸೂಚಿಸಿದರು.ಮಂಗಳವಾರ ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಜರುಗಿದ ಟಾಸ್ಕ್ ಫೋರ್ಸ್ ಕಮಿಟಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆ ಕುರಿತು ವಾಸ್ತವ ಸ್ಥಿತಿ ಅರಿತು ವರದಿ ಸಲ್ಲಿಸಬೇಕು ಎಂದರು.ಗ್ರಾಮ ಪಂಚಾಯಿತಿಗಳಿಗೆ ಸರ್ಕಾರ ನೇಮಕ ಮಾಡಿರುವ ಆಡಳಿತಾಧಿಕಾರಿಗಳು ಮತ್ತು ಪಿಡಿಒಗಳು ಹೊಂದಾಣಿಕೆಯಿಂದ ಸರ್ಕಾರಿ ಕೆಲಸ ಮಾಡಿದಲ್ಲಿ ಸಮಸ್ಯೆ ಬಗೆಹರಿಯಲು ಸಾಧ್ಯ. ಬಹುತೇಕ ಆಡಳಿತಾಧಿಕಾರಿಗಳು ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿಲ್ಲ ಎನ್ನುವ ದೂರುಗಳಿವೆ. ಹೀಗಾದರೆ ಪಿಡಿಒ ಅಲ್ಲಿ ಕೆಲಸ ಹೇಗೆ ಮಾಡಬೇಕು ಎಂದು ಪ್ರಶ್ನಿಸಿದರು. ಸಾರ್ವಜನಿಕರ ಹಿತದೃಷ್ಟಿಯಿಂದ ಕಡ್ಡಾಯವಾಗಿ ಆಡಳಿತಾಧಿಕಾರಿಗಳು ಪಂಚಾಯಿತಿಗಳಿಗೆ ಭೇಟಿ ನೀಡಿ ಸಮಸ್ಯೆ ಆಲಿಸಬೇಕು ಎಂದು ಸೂಚನೆ ನೀಡಿದರು.ಕಾಮಗಾರಿ ಬಗ್ಗೆ ಬೇಸರ: ಕೇಂದ್ರ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷಿ ಜೆಜೆಎಂ ಯೋಜನೆ ಶಿರಹಟ್ಟಿ, ಮುಂಡರಗಿ, ಲಕ್ಷ್ಮೇಶ್ವರ ತಾಲೂಕಿನಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಬಹುತೇಕ ಗ್ರಾಮಗಳಲ್ಲಿ ಜನರು ಹನಿ ನೀರು ಕೂಡ ಕಂಡಿಲ್ಲ. ಬಹುತೇಕ ಗ್ರಾಮಗಳಲ್ಲಿ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಇದಕ್ಕೆ ಸಾಕ್ಷಿ ಎಂದರೆ ಈ ಸಭೆಯಲ್ಲಿ ಪಿಡಿಒಗಳು ನೀಡುತ್ತಿರುವ ಉತ್ತರದಿಂದ ತಿಳಿಯುತ್ತದೆ. ಈ ಸಮಸ್ಯೆಗೆ ಗುತ್ತಿಗೆದಾರ ಕ್ಯಾರೆ ಎನ್ನುತ್ತಿಲ್ಲ ಎಂದರು.ಗರಂ ಆದ ಶಾಸಕ: ಬಹುತೇಕ ಗ್ರಾಮೀಣ ಪ್ರದೇಶದಲ್ಲಿ ಡಿಬಿಒಟಿ ಮೂಲಕ ಎಲ್ ಆ್ಯಂಡ್ ಟಿ ಕಂಪನಿಯವರು ನೀರು ಮಪೂರೈಕೆ ಮಾಡುತ್ತಿದ್ದು, ಎಲ್ಲೆಡೆ ಜನರಿಂದ ಆಕ್ರೋಶ ಕೇಳಿ ಬರುತ್ತಿದೆ. ಬೇಡಿಕೆಯಷ್ಟು ನೀರು ಪೂರೈಸದೇ ಜನರೊಂದಿಗೆ ಚಲ್ಲಾಟವಾಡುತ್ತಿದ್ದಾರೆ. ಬಹುತೇಕ ಪಿಡಿಒಗಳು ನಿಮ್ಮೆದುರೆ ಬೇಡಿಕೆಯಷ್ಟು ನೀರು ಪೂರೈಕೆ ಮಾಡುತ್ತಿಲ್ಲ ಎಂದು ಗಂಭೀರ ಆರೋಪ ಮಾಡುತ್ತಿದ್ದಾರೆ. ಇದಕ್ಕೆ ಏನು ಉತ್ತರ ಹೇಳುತ್ತೀರಿ ಎಂದು ಅಧಿಕಾರಿಯನ್ನು ತರಾಟೆಗೆ ತೆದುಕೊಂಡರು.ಕಡಕೋಳ, ಜಲ್ಲಿಗೇರಿ, ಜಲ್ಲಿಗೇರಿ ತಾಂಡಾ, ಹೊಳೆಇಟಗಿ, ಸಾಸಲವಾಡ, ಚವಡಾಳ, ಸೇವಾ ನಗರ, ಕೆರಳ್ಳಿ, ಮಾಗಡಿ, ರಣತೂರ, ಯಳವತ್ತಿ, ಯತ್ತಿನಹಳ್ಳಿ, ಮಾಡಳ್ಳಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಇಲ್ಲಿಯೂ ಸರಿಯಾಗಿ ಬೇಡಿಕೆಯಷ್ಟು ನೀರು ಪೂರೈಸುತ್ತಿಲ್ಲ. ಈ ಎಲ್ಲ ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿಯೂ ಪೂರ್ಣಗೊಂಡಿಲ್ಲ. ಎಲ್ಲೆಡೆ ಕಳಪೆ ಪೈಪ್ ಜೋಡಣೆ ಮಾಡಿ ಗುತ್ತಿಗೆದಾರ ಬಿಲ್ ತೆಗೆದುಕೊಂಡು ಪರಾರಿಯಾಗಿದ್ದು, ಇದಕ್ಕೆ ಯಾರು ಹೊಣೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.ಇದ್ಯಾವುದನ್ನು ಗಮನಿಸದೇ ಕಾಮಗಾರಿಯು ಶೇ. ೯೭ರಷ್ಟು ಮುಗಿದಿದೆ ಎಂದು ಅಧಿಕಾರಿಗಳು ಪ್ರಗತಿ ವರದಿಯನ್ನು ನೀಡಿದ್ದು, ಇದರಲ್ಲಿ ಯಾರ ತಪ್ಪಿದೆ ಎಂದು ನೀವೇ ಹೇಳಿ ಎಂದು ಗರಂ ಆದರು. ಎಲ್ ಆ್ಯಂಡ್ ಟಿ ಕಂಪನಿ ಅಧಿಕಾರಿ ಈ ಎಲ್ಲ ಗ್ರಾಮಗಳಿಗೆ ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕ್ರಮ ವಹಿಸಿ ವರದಿ ನೀಡುವಂತೆ ತಾಕೀತು ಮಾಡಿದರು.ಅಧಿಕಾರಿಗಳು ಕೂಡ ಎಲ್ಲೆಲ್ಲಿ ಬೋರ್‌ವೆಲ್ ಅಗತ್ಯವಿದೆ ಎನ್ನುವ ಬಗ್ಗೆ ಪಟ್ಟಿ ಸಿದ್ಧಪಡಿಸಿ ನಮ್ಮ ಗಮನಕ್ಕೆ ತರಬೇಕು. ಎಲ್ಲರೂ ಸಮನ್ವಯದಿಂದ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ಜನ- ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬೇಕು ಎಂದರು.ತಹಸೀಲ್ದಾರ್ ಕೆ. ರಾಘವೇಂದ್ರ ರಾವ್, ಧನಂಜಯ್ ಎಂ., ಯರಿಸ್ವಾಮಿ, ತಾಪಂ ಇಒ ರಾಮಪ್ಪ ದೊಡ್ಡಮನಿ, ಕೃಷ್ಣಪ್ಪ ಧರ್ಮರ, ಮುಖ್ಯಾಧಿಕಾರಿ ಸವಿತಾ ತಾಂಭ್ರೆ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
ಹಳ್ಳಿಗಳಲ್ಲಿ ಸಮರ್ಪಕವಾಗಿ ನೀರು ಪೂರೈಸಿ: ಶಾಸಕ ಡಾ. ಚಂದ್ರು ಲಮಾಣಿ ಸೂಚನೆ
ಗ್ರಾಮ ಪಂಚಾಯಿತಿಗಳಿಗೆ ಸರ್ಕಾರ ನೇಮಕ ಮಾಡಿರುವ ಆಡಳಿತಾಧಿಕಾರಿಗಳು ಮತ್ತು ಪಿಡಿಒಗಳು ಹೊಂದಾಣಿಕೆಯಿಂದ ಸರ್ಕಾರಿ ಕೆಲಸ ಮಾಡಿದಲ್ಲಿ ಸಮಸ್ಯೆ ಬಗೆಹರಿಯಲು ಸಾಧ್ಯ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.