ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಸತ್ತೇಗಾಲದಿಂದ ಇಗ್ಗಲೂರು ಬ್ಯಾರೇಜ್‌ಗೆ ಕಾವೇರಿ ನೀರು ಹರಿಸುವ ಸತ್ತೇಗಾಲ ಯೋಜನೆಯನ್ನು ಶೀಘ್ರವೇ ಪೂರ್ಣಗೊಳಿಸಬೇಕು ಜೊತೆಗೆ ಯೋಜನೆಗೆ ಭೂಮಿ ನೀಡಿರುವ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಕರ್ನಾಟಕ ಜನಪರ ವೇದಿಕೆ ಮುಖಂಡರು ಪ್ರತಿಭಟನೆ ನಡೆಸಿದರು.ತಾಲೂಕಿನ ಮಳವಳ್ಳಿ- ಕೊಳ್ಳೇಗಾಲ ಮುಖ್ಯರಸ್ತೆಯ ಜವಗನಹಳ್ಳಿ ಗುಡ್ಡದ ಸಮೀಪದ ಸಲಂ ಬೋರೆ ಸುರಂಗ ಮಧ್ಯೆ ಪ್ರತಿಭಟನೆ ವೇಳೆ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ ಮಾತನಾಡಿ, ಕೆಆರ್‌ಎಸ್‌ನಿಂದ ಕಾವೇರಿ ನೀರು ತಮಿಳುನಾಡಿಗೆ ಲಕ್ಷಾಂತರ ಕ್ಯುಸೆಕ್ ಹರಿದು ಹೋಗುತ್ತಿದ್ದರೂ ಕೂಡ ನಮ್ಮ ಕಾವೇರಿ ನೀರನ್ನು ನಾವು ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದೇವೆ ಎಂದರು.
ಸತ್ತೇಗಾಲ ಯೋಜನೆ ಪ್ರಾರಂಭಗೊಂಡು 6 ವರ್ಷ ಕಳೆಯುತ್ತಿದ್ದರೂ ಕೂಡ ಕಾಮಗಾರಿಯನ್ನು ಅಂತಿಮಗೊಳಿಸುವಲ್ಲಿ ಸರ್ಕಾರ ವಿಫಲವಾಗಿದೆ. ಸತ್ತೇಗಾಲದಿಂದ ಕಾವೇರಿ ನೀರನ್ನು ಸುರಂಗ ಮಾರ್ಗವಾಗಿ ಇಗ್ಗಲೂರಿನ ಎಚ್.ಡಿ ದೇವೇಗೌಡ ಬ್ಯಾರೇಜ್ ನೀರನ್ನು ಹರಿಸಿ ಚನ್ನಪಟ್ಟಣ- ರಾಮನಗರದ ಸಾವಿರಾರು ಜನತೆಗೆ ಕುಡಿಯಲು ಹಾಗೂ ಕೃಷಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಯೋಜನೆಯನ್ನು ಕೂಡಲೇ ಪೂರ್ಣಗೊಳಿಸಬೇಕೆಂದು ಆಗ್ರಹಿಸಿದರು.ಮಳವಳ್ಳಿ ತಾಲೂಕಿನಲ್ಲಿ ಹಲವು ರೈತರು ಈ ಯೋಜನೆಗೆ ಭೂಮಿ ನೀಡಿದ್ದಾರೆ. ಸರ್ಕಾರ ರೈತರಿಗೆ ಸಮರ್ಪಕ ಪರಿಹಾರ ನೀಡಬೇಕು. ಜೊತೆಗೆ ಕೆರೆಕಟ್ಟೆಗಳನ್ನು ತುಂಬಿಸಲು ಆಗತ್ಯ ಕ್ರಮ ಕೈಗೊಳ್ಳಬೇಕು. ಕಾಮಗಾರಿ ಕೂಡಲೇ ಚುರುಕುಗೊಳಿಸಬೇಕು, ಇಲ್ಲದಿದ್ದರೇ ಮೇ 28ರಂದು ಮಂಡ್ಯದ ಕಾವೇರಿ ನೀರಾವರಿ ನಿಗಮದ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ನಮಗೆ ನ್ಯಾಯ ಸಿಗದಿದ್ದರೇ ಹೆದ್ದಾರಿ ಬಂದ್ ಜೊತೆಗೆ ಸುರಂಗ ಮಾರ್ಗದಿಂದ ಮಂಡ್ಯದ ವರೆಗೆ ಪಾದಯಾತ್ರೆ ನಡೆಸಲಾಗುವುದು. ಜೊತೆಗೆ ನಿರಂತರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.ವೇದಿಕೆ ರಾಜ್ಯ ಕಾರ್ಯಾಧ್ಯಕ್ಷ ಮಳವಳ್ಳಿ ಶ್ರೀನಿವಾಸ್ ಮಾತನಾಡಿ, ಈ ಯೋಜನೆಯಲ್ಲಿ ಮಳವಳ್ಳಿ ತಾಲೂಕಿಗೆ ಯಾವುದೇ ಸೌಲಭ್ಯಗಳಿಲ್ಲ. ಯೋಜನೆಯಿಂದ ಭೂಮಿ ಕೊರೆದು ಸುರಂಗ ಮಾಡುತ್ತಿರುವುದರಿಂದ ಅಂತರ್ಜಲ ಕಡಿಮೆಯಾಗಿದೆ. ಸುರಂಗ ಮಾರ್ಗದಲ್ಲಿ ಕಲ್ಲು ಹೊಡೆಯಲು ಬಳಸುವ ಸಿಡಿ ಮದ್ದಿನಿಂದ ಮನೆಗಳು ಬಿರುಕು ಬಿಟ್ಟಿವೆ ಎಂದರು.
ಕಾಮಗಾರಿ ಮಣ್ಣನ್ನು ರೈತರ ಜಮೀನುಗಳಿಗೆ ಹಾಕಲಾಗಿದೆ. ಇದರಿಂದ ವ್ಯವಸಾಯ ಮಾಡದಂತಾಗಿದೆ. ಕೂಡಲೇ ಮಳವಳ್ಳಿ ತಾಲೂಕಿನ ರೈತರಿಗೆ ನೀರಿನ ಸೌಲಭ್ಯ ಕಲ್ಪಿಸಬೇಕು. ಭೂಮಿ ಹಾಗೂ ಮನೆ ಬಿರುಕು ಬಿಟ್ಟಿರುವುದರಿಂದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಇಲ್ಲದಿದ್ದರೇ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.ಪ್ರತಿಭಟನೆಯಲ್ಲಿ ವೇದಿಕೆ ರಾಜ್ಯ ಉಪಾಧ್ಯಕ್ಷ ರಂಜಿತ್‌ಗೌಡ, ಮುಖಂಡರಾದ ಸುರೇಶ್, ಮಲ್ಲು, ಜಯರಾಮು, ನಾಗರಾಜು ಸೇರಿದಂತೆ ರೈತರು ಹಾಗೂ ಸಂಘಟನೆಯ ಮುಖಂಡರು ಇದ್ದರು.