ನಿರಾಶ್ರಿತ ಕುಟುಂಬಗಳಿಗೆ ಸೂಕ್ತ ಪರಿಹಾರ ಒದಗಿಸಿ

| Published : Oct 24 2025, 01:00 AM IST

ಸಾರಾಂಶ

ಮನೆ ಕಳೆದುಕೊಂಡವರಿಗೆ ಅವರ ಬೇಡಿಕೆಯಂತೆ ಸೂಕ್ತ ಪರಿಹಾರಧನ ಹಾಗೂ ಮನೆಗಳನ್ನು ನೀಡುವ ಲಿಖಿತ ಭರವಸೆ ನೀಡಿದರೆ ನಾವು ಧರಣಿ ಹಿಂಪಡೆಯುತ್ತೇವೆ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ತಾಲೂಕಿನ ಕುದರಿಸಾಲವಾಡಗಿ ಗ್ರಾಮದಲ್ಲಿ ಯಾಳವಾರ ಗ್ರಾಮಕ್ಕೆ ಹೋಗುವ ಮುಖ್ಯ ರಸ್ತೆ ಅಭಿವೃದ್ಧಿ ಹಾಗೂ ಅಗಲೀಕರಣ ನೆಪದಲ್ಲಿ ತೆರವುಗೊಳಿಸಿದ 143ಕ್ಕೂ ಹೆಚ್ಚು ಕುಟುಂಬಗಳಿಗೆ ಸೂಕ್ತ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಖಂಡ ಅಶೋಕಗೌಡ ಪಾಟೀಲ ನೇತೃತ್ವದಲ್ಲಿ ನಡೆಸುತ್ತಿರುವ ಧರಣಿ ಸತ್ಯಾಗ್ರಹ ಗುರುವಾರ ಒಂಬತ್ತನೇ ದಿನಕ್ಕೆ ಕಾಲಿಟ್ಟಿದೆ. ಮಿನಿ ವಿಧಾನಸೌಧ ಮುಂಭಾಗ ನಡೆಯುತ್ತಿರವ ಧರಣಿ ಸ್ಥಳಕ್ಕೆ ಗುರುವಾರ ಸಂಜೆ ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಭೇಟಿ ನೀಡಿ ಪ್ರತಿಭಟನಾನಿರತರ ಮನವೊಲಿಸುವ ಪ್ರಯತ್ನ ವಿಫಲವಾಗಿದೆ.

ಮುಖಂಡರಾದ ಪ್ರಭುಗೌಡ ಲಿಂಗದಳ್ಳಿ ಹಾಗೂ ಅಶೋಕಗೌಡ ಪಾಟೀಲ ಮಾತನಾಡಿ, ಕುದರಿಸಾಲವಾಡಗಿ ಗ್ರಾಮದಲ್ಲಿ ನಡೆಸಿದ ರಸ್ತೆ ತೆರವು ಕಾರ್ಯಾಚರಣೆ ಯಾವ ಯೋಜನೆಯಡಿ ಮಾಡಲಾಗಿದೆ. ಅಂದಾಜು ವೆಚ್ಚವೆಷ್ಟು ಹಾಗೂ ಗುತ್ತಿಗೆದಾರರು ಯಾರು ಎಂಬ ಬಗ್ಗೆ ಸಂಫೂರ್ಣ ಮಾಹಿತಿ ನೀಡಬೇಕು. ಸತತ ಮಳೆಯಿಂದ ಜನರು ಸಮಸ್ಯೆಯಲ್ಲಿದ್ದಾರೆ. ತೆರವು ಕಾರ್ಯಾಚರಣೆ ವಾರ ಕಾಲ ಮುಂದೂಡಿ ಎಂದು ಡಿಸಿ, ಎಸ್ಪಿ ಅವರಿಗೆ‌ ಮನವಿ ಮಾಡಿದರೂ ಕೇಳದೇ ಕೇವಲ ಒಂದೇ ನೋಟಿಸ್ ನೀಡಿ ಮನೆಗಳ ತೆರವು ಕಾರ್ಯ ಮಾಡಿದ್ದೀರಿ. ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿಪಡಿಸುವುದು ಬೇಡವೆಂದು ನಾವೆಲ್ಲಾ 45 ಅಡಿ ರಸ್ತೆ ತೆರವು ಮಾಡಿ ಎಂದರೂ ಎರಡೆರಡು ಬಾರಿ ರಸ್ತೆ ಮಾರ್ಕ್ ಮಾಡಿ ಏಕಾಏಕಿ 55 ಅಡಿ ಎಂದು 60 ಅಡಿವರೆಗೂ ತೆರವು ಕಾರ್ಯಾಚರಣೆ ಮಾಡಲಾಗಿದೆ. ಮನೆ ಕಳೆದುಕೊಂಡವರಿಗೆ ಅವರ ಬೇಡಿಕೆಯಂತೆ ಸೂಕ್ತ ಪರಿಹಾರಧನ ಹಾಗೂ ಮನೆಗಳನ್ನು ನೀಡುವ ಲಿಖಿತ ಭರವಸೆ ನೀಡಿದರೆ ನಾವು ಧರಣಿ ಹಿಂಪಡೆಯುತ್ತೇವೆ ಎಂದು ಶಾಸಕರ ಎದುರು ತಮ್ಮ ಅಹವಾಲು ಸಲ್ಲಿಸಿದರು.

ಶಾಸಕ ರಾಜುಗೌಡ ಪಾಟೀಲ ಮಾತನಾಡಿ, ಕುದರಿಸಾಲವಾಡಗಿ ಗ್ರಾಮದಲ್ಲಿ ಯಾಳವಾರಕ್ಕೆ ಹೋಗುವ ಈ ರಸ್ತೆಯ ಕುರಿತು ಬ್ರಿಟಿಷರ ಕಾಲದ ನಕ್ಷೆಯಲ್ಲಿ 108 ಅಡಿ ರಸ್ತೆಯಿದೆ. ಇದರ ಬದಲಾಗಿ ನಾವು ಜನರ ಅನುಕೂಲಕ್ಕಾಗಿ 55 ಅಡಿ ರಸ್ತೆ ಮಾಡಲು ಮುಂದಾಗಿದ್ದೇವೆ. ರಸ್ತೆ ಅಗಲೀಕರಣದಲ್ಲಿ ನಿರಾಶ್ರಿತರಿಗೆ ಆದ ನೋವು ನನಗೂ ಆಗಿದೆ. ಈ ರಸ್ತೆ ಅಭಿವೃದ್ಧಿ ಕಾಮಗಾರಿಯಲ್ಲಿ ಹಾನಿಯಾಗುವ ಮನೆಗಳ ಕುಟುಂಬ ಬಾಂಧವರಿಗೆ ಗ್ರಾಮದ ಎಂಟು ಎಕರೆ ಸರ್ಕಾರಿ ಜಮೀನಿನಲ್ಲಿ ಅರ್ಹ ಫಲಾನುಭವಿಗಳಿಗೆ ಮನೆ ನಿವೇಶನ, ಮನೆ ನಿರ್ಮಾಣ ಮಾಡಿಸಿಕೊಡುವ ಜೊತೆಗೆ ಅಲ್ಲಿ ಎಲ್ಲ ರೀತಿಯ ಮೂಲಸೌಲಭ್ಯ ನೀಡುವುದಾಗಿ ಭರವಸೆ ನೀಡಿದರು.

ರಸ್ತೆ ಅಗಲೀಕರಣ ಕಾಮಗಾರಿ ಆರಂಭ ಮಾಡುವ ಮುನ್ನವೇ ಸಭೆ ನಡೆಸಿ ಜನರ ಗಮನಕ್ಕೆ ತರಲಾಗಿತ್ತು. ಇದು ಲೋಕೋಪಯೋಗಿ ಇಲಾಖೆಗೆ ಸೇರಿದ ಜಾಗ ಆಗಿರುವುದರಿಂದಾಗಿ ಪರಿಹಾರ ಬರುವುದಿಲ್ಲ ಎಂದು ಸಹ ಹೇಳಲಾಗಿತ್ತು. ಗ್ರಾಮದ ಅಭಿವೃದ್ಧಿಗೆ ಎಲ್ಲ ಜನರ ಸಹಕಾರ ತುಂಬಾ ಅಗತ್ಯವಿದೆ. ಈಗಲೂ ನಾನು ನಿರಾಶ್ರಿತರಿಗೆ ಸಹಾಯ-ಸಹಕಾರ ನೀಡಲು ಬದ್ಧನಿದ್ದೇನೆ ಎಂದರು.

ಭೂಸೇನಾ ನಿಗಮದಡಿ ₹2 ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆ, ಉಳಿದಂತೆ ಲೋಕೋಪಯೋಗಿ ಇಲಾಖೆಯಡಿ ಚರಂಡಿ ಕಾಮಗಾರಿ ನಡೆಯಲಿದೆ. ಗುತ್ತಿಗೆದಾರ ರಾಮು ಕವಲಗಿ ಈ ಕಾಮಗಾರಿ ಕಾರ್ಯ ಮಾಡಲಿದ್ದಾರೆ. ಈ ರಸ್ತೆ ಅಗಲೀಕರಣದಲ್ಲಿ ತೆರವುಗೊಂಡ ಸಾರ್ವಜನಿಕರ ಆಸ್ತಿಗಳನ್ನು ಶಾಸಕರ ಅನುದಾನದಲ್ಲಿ ನಿರ್ಮಾಣ ಮಾಡಲಾಗುವುದು. ಅಂಗನವಾಡಿ ಕೇಂದ್ರಕ್ಕೆ ₹18 ಲಕ್ಷ ಹಾಕಲಾಗಿದೆ ಎಂದು ಜನರ ಪ್ರಶ್ನೆಗೆ ಉತ್ತರಿಸಿದರು.

ತಾಪಂ ಇಒ ಪ್ರಕಾಶ ದೇಸಾಯಿ ಮಾತನಾಡಿ, ರಸ್ತೆ ಅಗಲೀಕರಣದಲ್ಲಿ ಸೂರು ಕಳೆದುಕೊಂಡವರಿಗೆ ನಮ್ಮ ಹೊಲ ನಮ್ಮ ತೋಟ ಯೋಜನೆಯಲ್ಲಿ ಅರ್ಹ ಫಲಾನುಭವಿಗಳಿಗೆ ಪರಿಹಾರ ಕಲ್ಪಿಸಿಕೊಟ್ಟು ಅಗತ್ಯ ಸೌಲಭ್ಯ ಒದಗಿಸಲಾಗುವುದು ಎಂದರು. ಲೋಕೋಪಯೋಗಿ ಇಲಾಖೆ ಎಇ ಮಾಲಿಪಾಟೀಲ ಮಾತನಾಡಿ, ಗ್ರಾಮದಲ್ಲಿ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ಎಲ್ಲ ಜನರಿಗೂ ಅನುಕೂಲವಾಗುತ್ತದೆ. ಆದ್ದರಿಂದ ಸಹಕರಿಸಬೇಕೆಂದರು.

ನಿರಾಶ್ರಿತರೊಂದಿಗೆ ಚರ್ಚಿಸಿ ನಿರ್ಧಾರ:

ಶಾಸಕರು ಧರಣಿ ಸ್ಥಳದಿಂದೆ ತೆರಳಿದ ನಂತರ ಮುಖಂಡ ಪ್ರಭುಗೌಡ ಲಿಂಗದಳ್ಳಿ, ಅಶೋಕಗೌಡ ಪಾಟೀಲ ಸುದ್ದಿಗಾರರೊಂದಿಗೆ ಮಾತನಾಡಿ,

ಶಾಸಕರು ನಮಗೆ ಸೂಕ್ತವಾದ ಲಿಖಿತ ಭರವಸೆ ನೀಡಲಿಲ್ಲ. ಅವರು ನೀಡಿದ ಭರವಸೆ ನಮಗೆ ತೃಪ್ತಿ ತಂದಿಲ್ಲ. ರಸ್ತೆ ನಕ್ಷೆ ಕುರಿತು ಶಾಸಕರು ಸಭೆ ಕರೆದರೆ ನಾವು ಸಭೆಗೆ ಹೋಗಲು ಸಿದ್ಧ. ರಸ್ತೆ ನಕ್ಷೆ ಬಗ್ಗೆ ಸ್ಪಷ್ಟಪಡಿಸಬೇಕಿದೆ. ರಸ್ತೆ ನಕ್ಷೆ ಬಗ್ಗೆ ಸರಿಯಾದ ದಾಖಲೆ ಅಗತ್ಯವಿದೆ. ನಿರಾಶ್ರಿತರಿಗೆ ಸೂಕ್ತ ನ್ಯಾಯ ಸಿಗುವವರೆಗೂ ನಮ್ಮ ಧರಣಿ ನಿರಂತರವಾಗಿ ನಡೆಯಲಿದೆ. ಶೀಘ್ರ ನಿರಾಶ್ರಿತರೊಂದಿಗೆ ಚರ್ಚಿಸಿ ಧರಣಿಯ ಕುರಿತು ನಿರ್ಧಾರ ಮಾಡುವುದಾಗಿ ತಿಳಿಸಿದರು.

ಧರಣಿಯಲ್ಲಿ ಮುಖಂಡರಾದ ಗುರುರಾಜ ಗುಡಿಮನಿ, ಕಾಮೇಶ ಭಜಂತ್ರಿ, ಅದಾಂಸಾಬ ಢವಳಗಿ, ನಜೀರ ಗುಡ್ನಾಳ, ರಮಜಾನ ಮುಜಾವರ, ಬಸವರಾಜ ದೇಸಾಯಿ, ಶ್ರೀಕಾಂತ ಹಚಡದ, ಮಲಕ್ಕವ್ವ ಬೆಳ್ಳೇಗೋಳ, ಹಜರತಬೀ ಅತ್ತಾರ, ಪಾವಡೆವ್ವ ದೊಡಮನಿ ಸೇರಿದಂತೆ ಇತರರು ಇದ್ದರು. ಈ ವೇಳೆ ಲೋಕೋಪಯೋಗಿ ಇಲಾಖೆ ಎಇಇ ದೊಡಮನಿ, ಡಿವೈಎಸ್ಪಿ ಬಲ್ಲಪ್ಪ ನಂದಗಾಂವಿ, ಪಿಐ ಗುರುಶಾಂತ ದಾಶ್ಯಾಳ, ಭೂಸೇನಾ ನಿಗಮದ ಎಇಇ ಆನಂದಸ್ವಾಮಿ ಸೇರಿದಂತೆ ಇತರರು ಇದ್ದರು.