ಹೆಗಡೆ ನಗರ ಸಂತ್ರಸ್ತರಿಗೆ ಮೂಲ ಸೌಕರ್ಯ ಕಲ್ಪಿಸಿ: ಜಬೀನಾ ಖಾನಂ

| Published : Mar 12 2024, 02:03 AM IST

ಸಾರಾಂಶ

ಹೆಗಡೆ ನಗರದ ನಿರಾಶ್ರಿತರಿಗೆ ಮನೆ, ಅಂಗನವಾಡಿ, ಶಾಲೆ, ರಸ್ತೆ, ಸಾರಿಗೆ ವ್ಯವಸ್ಥೆ, ಶೌಚಾಲಯ, ಶುದ್ಧ ಕುಡಿಯುವ ನೀರು, ಆಸ್ಪತ್ರೆ, ಪಡಿತರ ಅಂಗಡಿ, ವಿದ್ಯುತ್ ವ್ಯವಸ್ಥೆ ಕಲ್ಪಿಸಬೇಕು. ಮೂಲ ಸೌಕರ್ಯ ಕಲ್ಪಿಸುವವರೆಗೂ ಸಂತ್ರಸ್ತ ಕುಟುಂಬಗಳಿಗೆ ಬಾಡಿಗೆ ಮನೆಯಲ್ಲಿರಲು ಪಾಲಿಕೆ, ಜಿಲ್ಲಾಡಳಿತ, ಸರ್ಕಾರದಿಂದಲೇ ಮನೆ ಬಾಡಿಗೆ ಹಣ ನೀಡಬೇಕು.

ಕನ್ನಡಪ್ರಭ ವಾರ್ತೆ ದಾವಣಗೆರೆ

ವರ್ತುಲ ರಸ್ತೆಯಿಂದ ಸ್ಥಳಾಂತರಗೊಂಡ ಹೆಗಡೆ ನಗರ ನಿವಾಸಿಗಳು ವಾಸಿಸುವ ಪ್ರದೇಶಕ್ಕೆ ಮೂಲ ಸೌಕರ್ಯ ಕಲ್ಪಿಸಲು ಒತ್ತಾಯಿಸಿ ಸ್ಥಳಾಂತರಗೊಂಡ ರಾಮಕೃಷ್ಣ ಹೆಗಡೆ ನಗರ ನಿವಾಸಿಗಳ ಸಮಿತಿ, ಸ್ಲಂ ಜನರ ಸಂಘಟನೆ ಕರ್ನಾಟಕ, ಮಹಿಳೆಯರ ಸಂಘಟನೆ ಬೆಂಗಳೂರು, ಜಿಲ್ಲಾ ಪ್ರಗತಿ ಪರ ಸಂಘಟನೆಗಳ ಒಕ್ಕೂಟ, ನೆರಳು ಬೀಡಿ ಕಾರ್ಮಿಕರ ಯೂನಿಯನ್ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು.

ನಗರದ ಶ್ರೀ ಜಯದೇವ ವೃತ್ತದಿಂದ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ಅಶೋಕ ರಸ್ತೆ, ಮಹಾತ್ಮ ಗಾಂಧಿ ವೃತ್ತ, ಹಳೆ ಪಿಬಿ ರಸ್ತೆ ಮಾರ್ಗವಾಗಿ ಮಹಾ ನಗರ ಪಾಲಿಕೆಗೆ ತೆರಳಿ, ಪಾಲಿಕೆ ಅಧಿಕಾರಿಗಳ ಮೂಲಕ ವಸತಿ ಸಚಿವರಿಗೆ ಮನವಿ ಪತ್ರ ಸಲ್ಲಿಸಿ ಬಡ ನಿರಾಶ್ರಿತರ ಬೇಡಿಕೆಗಳ ಈಡೇರಿಸಲು ಆಗ್ರಹಿಸಲಾಯಿತು.

ನೆರಳು ಬೀಡಿ ಕಾರ್ಮಿಕರ ಯೂನಿಯನ್ ಅಧ್ಯಕ್ಷೆ ಜಬೀನಾ ಖಾನಂ ಮಾತನಾಡಿ, ಹೆಗಡೆ ನಗರದ ನಿರಾಶ್ರಿತರಿಗೆ ಮನೆ, ಅಂಗನವಾಡಿ, ಶಾಲೆ, ರಸ್ತೆ, ಸಾರಿಗೆ ವ್ಯವಸ್ಥೆ, ಶೌಚಾಲಯ, ಶುದ್ಧ ಕುಡಿಯುವ ನೀರು, ಆಸ್ಪತ್ರೆ, ಪಡಿತರ ಅಂಗಡಿ, ವಿದ್ಯುತ್ ವ್ಯವಸ್ಥೆ ಕಲ್ಪಿಸಬೇಕು. ಮೂಲ ಸೌಕರ್ಯ ಕಲ್ಪಿಸುವವರೆಗೂ ಸಂತ್ರಸ್ತ ಕುಟುಂಬಗಳಿಗೆ ಬಾಡಿಗೆ ಮನೆಯಲ್ಲಿರಲು ಪಾಲಿಕೆ, ಜಿಲ್ಲಾಡಳಿತ, ಸರ್ಕಾರದಿಂದಲೇ ಮನೆ ಬಾಡಿಗೆ ಹಣ ನೀಡಬೇಕು ಎಂದು ತಾಕೀತು ಮಾಡಿದರು.

ಹೆಗಡೆ ನಗರ ಸಂತ್ರಸ್ತರಿಗೆ ನೀಡಲಾದ ಜಾಗದಲ್ಲಿ ಮಹಿಳೆಯರ ಘನತೆ, ಗೌರವ ಕಾಪಾಡಲು ತಕ್ಷಣ ಶೌಚಾಲಯಗಳ ನಿರ್ಮಿಸಬೇಕು. ಬಯಲು ಬಹಿರ್ದೆಸೆಗೆ ಹೋಗದಂತೆ ಕ್ರಮ ಕೈಗೊಳ್ಳಬೇಕು. ಸ್ಥಳಾಂತರಗೊಂಡ ದಿನದಿಂದ ಕನಿಷ್ಟ 10 ಕಿಮೀ ದೂರ ತೆರಳಿ, ಪಡಿತರ ಧಾನ್ಯ ತರುವ ಪರಿಸ್ಥಿತಿ ಇದೆ. ಈ ಬಗ್ಗೆ ಆಹಾರ ಇಲಾಖೆಗೆ ಮನವಿ ಮಾಡಿದರೂ ಸ್ಪಂದನೆ ಸಿಕ್ಕಿಲ್ಲ. ಪಡಿತರ ಅಂಗಡಿಯ ತಕ್ಷಣ‍ವೇ ಸ್ಥಳಾಂತರಗೊಂಡ ಪ್ರದೇಶದಲ್ಲಿ ಆರಂಭಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿ ಎಂದು ಹೇಳಿದರು.

ಸಂತ್ರಸ್ತ ಕುಟುಂಬಗಳ ಮಕ್ಕಳು ಅಂಗನವಾಡಿ, ಶಾಲೆ, ಕಾಲೇಜು ಶಿಕ್ಷಣದಿಂದಲೇ ವಂಚಿತರಾಗುತ್ತಿದ್ದು, ನೂರಾರು ಮಕ್ಕಳ ಭವಿಷ್ಯ ಈಗ ತೂಗುಯ್ಯಾಲೆಯಲ್ಲಿದೆ. ತಕ್ಷಣವೇ ಇಂತಹ ಮಕ್ಕಳ ಶಿಕ್ಷಣಕ್ಕೆ ವ್ಯವಸ್ಥೆ ಮಾಡಬೇಕು. ಈಗ ಸ್ಥಳಾಂತರ ಮಾಡಿದ ಸ್ಥಳದಿಂದ ಶಾಲಾ-ಕಾಲೇಜಿಗೆ ಹೋಗಿ ಬರಲು ಅನುಕೂಲವಾಗುವಂತೆ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಸರಿಯಾದ ದಾಖಲಾತಿ ಇಲ್ಲವೆಂದು ತಿರಸ್ಕರಿಸಿದ 35-40ಕ್ಕೂ ಹೆಚ್ಚು ಕುಟುಂಬಗಳಿಗೆ ತಕ್ಷಣ‍ವೇ ನಿವೇಶನ, ಮನೆ ನೀಡಿ, ಹಕ್ಕುಪತ್ರ ನೀಡಬೇಕು. ಅಲ್ಲದೇ, ಎಲ್ಲಾ ಸಂತ್ರಸ್ತ ಕುಟುಂಬಕ್ಕೂ ತಕ್ಷಣ ಹಕ್ಕುಪತ್ರ ನೀಡುವ ಕೆಲಸ ಆಗಬೇಕು ಎಂದು ಒತ್ತಾಯಿಸಿದರು.

ಸಂಘಟನೆಗಳ ಮುಖಂಡರಾದ ಎಂ.ಕರಿಬಸಪ್ಪ, ನಂದಿನಿ, ನೀಲಯ್ಯ, ಜಾನ್ಸಿ, ರೈತ ಸಂಘದ ಬುಳ್ಳಾಪುರ ಹನುಮಂತಪ್ಪ, ಡಿಎಸ್ಸೆಸ್‌ ನ ಮಂಜುನಾಥ ಕುಂದುವಾಡ, ಸೈಯದ್ ಆರೀಫ್ ಹಾಕಿ, ಜಬೀವುಲ್ಲಾ ಇತರರಿದ್ದರು.