ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ವಾರ್ಡ್ ನಂ, 1, 2 ಮತ್ತು 3ನಜನರು ಅಗತ್ಯ ಮೂಲಭೂತ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷ ಸಿಪಿಐ ನೇತೃತ್ವದಲ್ಲಿ ಡಿ.ಎಂ.ಪಾಳ್ಯ ಸರ್ಕಲ್‌ನಿಂದ ಸುಮಾರು 8 ಕಿಮಿ. ಪಾದಯಾತ್ರೆ ನಡೆಸಿದರು.
ಕನ್ನಡಪ್ರಭ ವಾರ್ತೆ, ತುಮಕೂರು
ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ವಾರ್ಡ್ ನಂ, 1, 2 ಮತ್ತು 3ನಜನರು ಅಗತ್ಯ ಮೂಲಭೂತ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷ ಸಿಪಿಐ ನೇತೃತ್ವದಲ್ಲಿ ಡಿ.ಎಂ.ಪಾಳ್ಯ ಸರ್ಕಲ್‌ನಿಂದ ಸುಮಾರು 8 ಕಿಮಿ. ಪಾದಯಾತ್ರೆ ನಡೆಸಿದರು.ಪಾದಯಾತ್ರೆಯ ನೇತೃತ್ವ ವಹಿಸಿದ್ದ ಸಿಪಿಐ ಜಿಲ್ಲಾ ಕಾರ್ಯದರ್ಶಿ ಗಿರೀಶ್ ಮಾತನಾಡಿ ತುಮಕೂರು ನಗರದಲ್ಲಿ ಎರಡನೇ ಹಂತದ ಯುಜಿಡಿ ಕಾಮಗಾರಿಯು ನೂರಾರು ಕೋಟಿ ಖರ್ಚು ಮಾಡಿ ಕೆಲಸ ಮಾಡಿದ್ದರೂ ಸಹ ಸಾರ್ವಜನಿಕರಿಗೆ ಉಪಯೋಗವಾಗಿಲ್ಲ. ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಚರಂಡಿ ರಸ್ತೆಗಳನ್ನು ಮಾಡಿ ವೈಭವೀಕರಿಸಿರುವದಷ್ಟೆ. ಗುಣಮಟ್ಟದ ಕಾಮಗಾರಿ ಇಲ್ಲದ ಕಾರಣ ರಸ್ತೆಗಳು ಗುಂಡಿ ಬಿದ್ದಿದ್ದು, ಚರಂಡಿಗಳಲ್ಲಿ ಒಂದರಿಂದ ಎರಡು ಅಡಿ ನೀರು ನಿಲ್ಲುತ್ತಿದ್ದು ಸಾರ್ವಜನಿಕರಿಗೆ ಹಲವಾರು ಸಾಂಕ್ರಾಮಿಕ ರೋಗಗಳು ಹರಡುತ್ತಿವೆ ಎಂದರು.
ರೇವಣ್ಣ ಸಿದ್ದೇಶ್ವರ ಮಠದ ಗುರುಗಳಾದ ಬಿಂಧುಶೇಖರ್ ಓಡೆಯರ್ ಮಾತನಾಡಿ ಮರಳೇನಹಳ್ಳಿ ಕೆರೆಗೆ ಕೈಗಾರಿಕೆಗಳ ಘನತ್ಯಾಜ್ಯ ನೀರು ಹರಿದು ಬರುತ್ತಿದ್ದು ಅಂತರ್ಜಲಕ್ಕೆ ಸೇರಿಕೊಂಡು ಬುಗುಡನಹಳ್ಳಿ ಕೆರೆ ಸೇರುತ್ತಿದೆ. ಇದರಿಂದ ತುಮಕೂರು ನಗರದ ಜನ ಕಲುಷಿತ ನೀರನ್ನು ಕುಡಿಯಬೇಕಾಗುತ್ತದೆ. ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡ ತಡೆಯಬೇಕು ಎಂದು ಒತ್ತಾಯಿಸಿದರು. ಜೊತೆಗೆ ಗಲ್ಲಿಗಳಲ್ಲಿರುವ ರಸ್ತೆಗಳನ್ನು ಸರಿಪಡಿಸಿ ಸಿಸಿ ರಸ್ತೆ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.ಸಿಪಿಐ ಜಿಲ್ಲಾ ಖಜಾಂಚಿ ಅಶ್ವತ್ಥನಾರಾಯಣ ಮಾತನಾಡಿ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕರಿಗೆ ಸಮರ್ಪಕವಾದ ರಸ್ತೆ, ಬೀದಿ ದೀಪಗಳಿಲ್ಲದೆ ತೊಂದರೆಯಾಗುತ್ತಿದೆ. ಕೂಡಲೇ ಬೀದಿ ದೀಪಗಳನ್ನು ಅಳವಡಿಸಬೇಕು ಎಂದರು.
ಪ್ರತಿಭಟನೆಯಲ್ಲಿ ಸಹ ಕಾರ್ಯದರ್ಶಿ, ಗೋವಿಂದರಾಜು, ಶಾಖಾ ಕಾರ್ಯದರ್ಶಿ ಮಂಜುನಾಥ್ , ಸುರೇಶ್ ಎನ್, ಶಿವಶಂಕರ್, ರಾಜೇಶ್ ಟಿ.ಎನ್ ವಾರ್ಡ್ 1 ರ ನಾಗರೀಕರಾದ ಪಿಜೆ ಮಾರ್ಗೋ ಉದಯ್, ಎಸ್.ಎನ್.ಪಾಳ್ಯ ಕೆಂಪಣ್ಣ, ಮರಳೇನಹಳ್ಳಿ ಮಂಜುನಾಥ್, ಡಿ.ಎಂ.ಪಾಳ್ಯ ಕಿರಣ, ಜಗದೀಶ್, ಬಸವರಾಜು, ಕುಪ್ಪೂರು ವೆಂಕಟೇಶ್, ಸುರೇಶ್ ಸೇರಿದಂತೆ ಇನ್ನು ಮುಂತಾದವರು ಭಾಗವಹಿಸಿದ್ದರು. ಜಿಲ್ಲಾಧಿಕಾರಿಗಳು ಮತ್ತು ತುಮಕೂರು ಮಹಾನಗರ ಪಾಲಿಕೆಯ ಆಯುಕ್ತರಿಗೆ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಲಾಯಿತು.