ಎಸ್‌ಸಿಪಿ ಯೋಜನೆಯಡಿ ಪ್ರೌಢಶಾಲಾ, ಪಿಯುಸಿ ಹಾಗೂ ಪದವಿ ವ್ಯಾಸಂಗ ಮಾಡುತ್ತಿರುವ ತಮಿಳು ಕಾಲೋನಿ ಮಕ್ಕಳಿಗೆ ಉಚಿತವಾಗಿ ಕಂಪ್ಯೂಟರ್ ತರಬೇತಿ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಕನ್ನಡಪ್ರಭ ವಾರ್ತೆ ಮಂಡ್ಯ
ನ್ಯೂ ತಮಿಳು ಕಾಲೋನಿಯಲ್ಲಿ ನಗರಸಭೆ ವತಿಯಿಂದ ಮೂಲ ಸೌಕರ್ಯಗಳನ್ನು ಒದಗಿಸಲು ಕೂಡಲೇ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಕುಮಾರ್ ಅಧಿಕಾರಿಗಳಿಗೆ ಆದೇಶಿಸಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನ್ಯೂ ತಮಿಳು ಕಾಲೋನಿಗೆ ಮೂಲ ಸೌಲಭ್ಯ ಒದಗಿಸುವ ಸಂಬಂಧ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ಕಾಲೋನಿಗೆ ಪ್ರಮುಖವಾಗಿ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಬೀದಿ ದೀಪದ ವ್ಯವಸ್ಥೆ ಶೀಘ್ರ ಕಲ್ಪಿಸಬೇಕು. ಹಂತ ಹಂತವಾಗಿ ರಸ್ತೆ ಕಾಮಗಾರಿ, ಚರಂಡಿ ವ್ಯವಸ್ಥೆಗಳನ್ನು ಪೂರ್ಣಗೊಳಿಸಿ ಎಂದು ಹೇಳಿದರು.
ಎಸ್‌ಸಿಪಿ ಯೋಜನೆಯಡಿ ಪ್ರೌಢಶಾಲಾ, ಪಿಯುಸಿ ಹಾಗೂ ಪದವಿ ವ್ಯಾಸಂಗ ಮಾಡುತ್ತಿರುವ ತಮಿಳು ಕಾಲೋನಿ ಮಕ್ಕಳಿಗೆ ಉಚಿತವಾಗಿ ಕಂಪ್ಯೂಟರ್ ತರಬೇತಿ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.ನ್ಯೂ ತಮಿಳು ಕಾಲೋನಿ ನಿವಾಸಿಗಳ ಇ- ಖಾತಾ ಮಾಡಿಸುವ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಬಾಕಿ ಇರುವ ಇ-ಖಾತೆಗಳನ್ನು ಮನೆ- ಮನೆಗೆ ಹೋಗಿ ಶೀಘ್ರದಲ್ಲೇ ಪೂರ್ಣಗೊಳಿಸಬೇಕು ಹಾಗೂ ನಿವೇಶನ ರಹಿತರಿಗೆ ವಸತಿ ಒದಗಿಸಲು ಸ್ಥಳ ಪರಿಶೀಲಿಸಿ ಎಂದು ಹೇಳಿದರು.
ಕಾಳಪ್ಪ ಬಡಾವಣೆಯ ಹಕ್ಕುಪತ್ರ ಸಮಸ್ಯೆಯನ್ನು ಶೀಘ್ರ ಬಗೆಹರಿಸಬೇಕು. ಮದ್ದೂರು ತಮಿಳು ಕಾಲೋನಿ ನಿವೇಶನ ಹಂಚಿಕೆಯ ಸಮಸ್ಯೆ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.ಸಭೆಯಲ್ಲಿ ತಹಸೀಲ್ದಾರ್ ವಿಶ್ವನಾಥ್, ಉಪವಿಭಾಗಾಧಿಕಾರಿ ಶಿವಮೂರ್ತಿ ಹಾಗೂ ನಗರಾಭಿವೃದ್ಧಿ ಕೋಶ ಜಂಟಿ ನಿರ್ದೇಶಕ ನರಸಿಂಹಮೂರ್ತಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.