ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ವಸತಿ ಶಾಲೆಗಳ ನಿರ್ವಹಣೆ ಕುರಿತು ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿಜಿಪಂ ಸಿಇಒ ಡಾ.ಎಸ್.ಆಕಾಶ್ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯ ಕಲ್ಪಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ಹವಣಾದಿಕಾರಿ ಡಾ.ಎಸ್.ಆಕಾಶ್ ಸೂಚನೆ ನೀಡಿದ್ದಾರೆ.ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗಳ ವಿದ್ಯಾರ್ಥಿನಿಲಯಗಳು ಮತ್ತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯ ವಸತಿ ಶಾಲೆಗಳ ನಿರ್ವಹಣೆ ಕುರಿತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ವಿವಿಧ ವಸತಿ ನಿಲಯಗಳಿಗೆ ಭೇಟಿ ನೀಡಿದಾಗ ಅಲ್ಲಿನ ವಿದ್ಯಾರ್ಥಿಗಳು ಹಾಸ್ಟೆಲ್‍ನಲ್ಲಿ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ ಎಂಬುದಾಗಿ ತಿಳಿಸಿದ್ದು, ತಮ್ಮ ತಮ್ಮ ವಸತಿ ನಿಲಯಗಳ ವಿದ್ಯಾರ್ಥಿಗಳಿಗೆ ಮೊದಲು ಮೂಲ ಸೌಕರ್ಯ ಕಲ್ಪಿಸುವುದು ನಿಮ್ಮಗಳ ಜವಾಬ್ದಾರಿ ಎಂದರು.ವಸತಿನಿಲಯದ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ, ಶೌಚಾಲಯಗಳ ಸ್ವಚ್ಛತೆ, ಹಾಸ್ಟೆಲ್‍ನ ಸುತ್ತ ವಿದ್ಯಾರ್ಥಿಗಳ ಕೊಠಡಿಗಳ ಸ್ವಚ್ಛತೆ, ಅಡುಗೆ ಮನೆಯಲ್ಲಿ ಸ್ವಚ್ಛತೆ ಅದೇ ರೀತಿ ರುಚಿ -ಶುಚಿ ಆಹಾರದ ಬಗ್ಗೆ ಸರಿಯಾಗಿ ಮೇಲ್ವಿಚಾರಣೆ ಮಾಡುವುದು ನಿಮ್ಮಗಳ ಆದ್ಯ ಕರ್ತವ್ಯವಾಗಿದ್ದು, ಈ ಕರ್ತವ್ಯ ನಿರ್ಲಕ್ಷಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.
ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಉತ್ತಮವಾದ ಬೋಧನಾ ವ್ಯವಸ್ಥೆಯನ್ನು ವಸತಿ ನಿಲಯಗಳಲ್ಲಿ ವ್ಯವಸ್ಥೆ ಮಾಡಿಕೊಳ್ಳಬೇಕು. ಸೊಳ್ಳೆಗಳು ವಸತಿ ನಿಲಯಗಳ ಕೊಠಡಿಗಳಿಗೆ ಬಾರದಂತೆ ಮೆಸ್ಸುಗಳನ್ನು ಹಾಕಿಸಬೇಕು. ಮೂಲಭೂತ ಸೌಕರ್ಯಗಳನ್ನು ಒದಗಿಸುವ ಜತೆಗೆ ಅಲ್ಲಿನ ವಿದ್ಯಾರ್ಥಿಗಳಿಗೆ ಉತ್ತಮವಾದ ವಾತಾವರಣ ಕಲ್ಪಿಸಿ ಕೊಡಬೇಕೆಂದು ಸೂಚನೆ ನೀಡಿದರು.ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಡಾ.ಎಸ್.ರಂಗಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪುಷ್ಪಲತಾ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ದಿವಾಕರ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ಜಿಲ್ಲೆಯ ಎಲ್ಲಾ ವಸತಿ ನಿಲಯದ ಮೇಲ್ವಿಚಾರಕರು ಮತ್ತು ಸಿಬ್ಬಂದಿಗಳು ಇದ್ದರು.