ಸಾರಾಂಶ
ಶಿರಹಟ್ಟಿ: ಪಟ್ಟಣದ ಎಸ್.ಎಂ. ಡಬಾಲಿ ತಾಲೂಕು ಕ್ರೀಡಾಂಗಣ ವಿಶಾಲವಾದ ಮೈದಾನ ಹೊಂದಿದ್ದು, ಕ್ರೀಡಾ ಚಟುವಟಿಕೆಗಳಿಗೆ ಪೂರಕವಾಗಿ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದೆ ಕ್ರೀಡಾಂಗಣ ಸಂಪೂರ್ಣ ಅವ್ಯವಸ್ಥೆಯ ಆಗರವಾಗಿದ್ದು, ಕೂಡಲೇ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ಪ್ರಜಾಪರ ವೇದಿಕೆ ವತಿಯಿಂದ ತಹಸೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಸಂಘಟನೆಯ ತಾಲೂಕು ಘಟಕದ ಅಧ್ಯಕ್ಷ ಹಸನ್ ತಹಸೀಲ್ದಾರ್ ಮಾತನಾಡಿ, ತಾಲೂಕು ಕ್ರೀಡಾಂಗಣ ಹೆಸರಿಗಷ್ಟೇ ಎಂಬಂತಿದ್ದು, ವಿಪರೀತ ದುರವಸ್ಥೆಯಿಂದ ಕೂಡಿದ್ದರಿಂದ ಅನೇಕ ಕ್ರೀಡಾಪ್ರತಿಭೆಗಳು ಕಮರುತ್ತಿದ್ದು ಕ್ರೀಡಾ ಚಟುವಟಿಕೆಗಳಿಗೆ ಹಿನ್ನಡೆಯುಂಟಾಗುವಂತಾಗಿದೆ ಎಂದು ಆರೋಪಿಸಿದರು.ವಿಸ್ತಾರವಾದ ಹಾಗೂ ತಾಲೂಕು ಕ್ರೀಡಾಂಗಣ ಎಂಬ ಹಣೆ ಪಟ್ಟಿ ಹೊತ್ತ ಈ ಕ್ರೀಡಾಂಗಣ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಆಟದ ಮೈದಾನ ಮುಳ್ಳು-ಕಂಠಿ, ಹುಲ್ಲು ಕಸ ಬೆಳೆದು ಕ್ರೀಡಾಪಟುಗಳು ಮೈದಾನಕ್ಕೆ ಬರಲು ಭಯಪಡುವಂತ ವ್ಯವಸ್ಥೆ ಇದ್ದು ಸಂಬಂದಪಟ್ಟ ಅಧಿಕಾರಿಗಳಾಗಲಿ, ಜನಪ್ರತಿನಿದಿಗಳಾಗಲಿ ಗಮನಿಸಿ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ಜಿಮ್ ವ್ಯವಸ್ಥೆ ಅಗತ್ಯ: ತಾಲೂಕು ಕ್ರೀಡಾಂಗಣದಲ್ಲಿ ಮೊದಲು ಜಿಮ್ ವ್ಯವಸ್ಥೆ ಕಲ್ಪಿಸಬೇಕು. ಇದಕ್ಕೆ ಸುಸಜ್ಜಿತವಾದ ಕಟ್ಟಡ ನಿರ್ಮಿಸಬೇಕು. ಕ್ರೀಡಾಪಟುಗಳಿಗೆ ಕ್ರೀಡಾ ಸಾಮಗ್ರಿಗಳಿಲ್ಲ. ನೀರಿನ ಸಮಸ್ಯೆ ಇದೆ. ನಲ್ಲಿ ವ್ಯವಸ್ಥೆ ಇಲ್ಲ. ಕ್ರೀಡಾ ಪಟುಗಳಿಗೆ ಪ್ರತ್ಯೇಕ ಶೌಚಾಲಯದ ಅಗತ್ಯವಿದ್ದು, ಇದು ಕೂಡ ಇಲ್ಲ. ಮೈದಾನವನ್ನು ಸಂಪೂಣವಾಗಿ ಸಮತಟ್ಟಾಗಿ ಮಾಡಬೇಕು. ೪೦೦ ಮೀಟರ್ ಓಟದ ಟ್ರ್ಯಾಕ್ ಹದಗೆಟ್ಟಿದ್ದು, ವಾಯುವಿಹಾರಿಗಳು ನಿಧಾನವಾಗಿ ಸಂಚರಿಸದಷ್ಟು ಹಾಳಾಗಿದೆ. ತುರ್ತು ಸೌಲಭ್ಯ ಕಲ್ಪಿಸಿಕೊಡುವಂತೆ ಮನವಿ ಮಾಡಿದ್ದಾರೆ.ತಾಲೂಕಾಡಳಿತದ ವತಿಯಿಂದ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ, ಕರ್ನಾಟಕ ರಾಜ್ಯೋತ್ಸವ ವಿಜೃಂಭಣೆಯಿಂದ ಜರುಗುತ್ತಿವೆ. ಈ ಎಲ್ಲ ಕಾರ್ಯಕ್ರಮಗಳು ಅವತ್ತಿಗೆ ಮಾತ್ರ ಸೀಮಿತವಾಗಿದ್ದು, ತಾಲೂಕು ಮಟ್ಟದ ಎಲ್ಲ ಇಲಾಖೆ ಅಧಿಕಾರಿಗಳು ಹಾಜರಾಗುತ್ತಾರೆ. ಆದರೆ ಕ್ರೀಡಾಂಗಣದ ಸೌಲಭ್ಯ ಕುರಿತು ಗಮನಿಸದಿರುವುದು ಕ್ರೀಡಾಪಟುಗಳಲ್ಲಿ ಬೇಸರ ತರಿಸುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಈ ಎಲ್ಲ ಕಾರ್ಯಕ್ರಮಗಳಲ್ಲಿ ಅನಿವಾರ್ಯವಾಗಿ ಭಾಗವಹಿಸಬೇಕಾದ ಶಾಲಾ-ಕಾಲೇಜ ವಿದ್ಯಾರ್ಥಿಗಳು ಮೈದಾನದ ಅವ್ಯವಸ್ಥೆಯಿಂದ ಪರದಾಡುವಂತಾಗಿದೆ. ಕೂಡಲೆ ಈ ತಾಲೂಕು ಕ್ರೀಡಾಂಗಣಕ್ಕೆ ಸೂಕ್ತ ಕಾಯಕಲ್ಪ ನೀಡಬೇಕೆಂದು ಹಸನ್ ತಹಸೀಲ್ದಾರ ಒತ್ತಾಯಿಸಿದ್ದಾರೆ.ಕ್ರೀಡಾಂಗಣದಲ್ಲಿ ಅಧಿಕಾರಿಗಳಿಗೆ ಹಾಗೂ ಮುಖ್ಯ ಅತಿಥಿಗಳಿಗೆ ಮಾತ್ರ ಶೌಚಾಲಯ, ಶುದ್ದ ಕುಡಿಯುವ ನೀರಿನ ವ್ಯವಸ್ಥೆಯಿದ್ದು, ಪುರುಷರಿಗೆ ಮತ್ತು ಸ್ತ್ರೀಯರಿಗೆ ಪ್ರತ್ಯೇಕವಾದ ಸುವ್ಯವಸ್ಥಿತ ಶೌಚಾಲಯ, ಪ್ರೇಕ್ಷಕರ ಗ್ಯಾಲರಿ ಕಲ್ಪಸಬೇಕು. ಕನಿಷ್ಠ ಈ ಸೌಲಭ್ಯ ಕಲ್ಪಿಸುವತ್ತ ಸಂಬಂಧಪಟ್ಟವರು ಗಮನಹರಿಸಬೇಕೆಂಬುದು ಸಂಘಟನೆಯ ಆಗ್ರಹವಾಗಿದೆ ಎಂದಿದ್ದಾರೆ.
ನಂತರ ತಹಸೀಲ್ದಾರ ಅನೀಲ ಬಡಿಗೇರ ಮನವಿ ಸ್ವೀಕರಿಸಿದರು. ಈ ವೇಳೆ ಶರೀಫ್ ಗುಡಿಮನಿ, ಹಾಲಪ್ಪ ಬಡೆಣ್ಣವರ, ವಿರೇಶ ಭೋರಶೆಟ್ಟರ, ಬಸವರಾಜ ಗುಡಿಮನಿ, ಕಳಕಪ್ಪ ಬಿಸನಳ್ಳಿ, ಗಾಳೆಪ್ಪ ಮರ್ಚಣ್ಣವರ ಸೇರಿ ಅನೇಕರು ಇದ್ದರು.