ಬುಡಕಟ್ಟು ಕೊರಗ ಸಮುದಾಯಕ್ಕೆ ಮೂಲ ಸೌಲಭ್ಯ ಕಲ್ಪಿಸಿ

| Published : Dec 21 2024, 01:15 AM IST

ಸಾರಾಂಶ

ಸರ್ಕಾರ ನೀಡುವ ಅನುದಾನದಲ್ಲಿ ಮನೆ ನಿರ್ಮಾಣ ಸಾಧ್ಯವಾಗುತ್ತಿಲ್ಲ ಎಂಬ ಕಾರಣದಿಂದಾಗಿ ಹೆಚ್ಚಿನ ಕೊರಗರ ಮನೆ ನಿರ್ಮಾಣವು ಅಪೂರ್ಣ ಸ್ಥಿತಿಯಲ್ಲಿದೆ. ವಿವಿಧ ಗ್ರಾಮದಲ್ಲಿರುವ ಕೊರಗ ಸಮುದಾಯದ ಪಟ್ಟಿಯನ್ನು ಈಗಾಗಲೇ ಇಲಾಖೆಗೆ ಈಗಾಗಲೇ ಸಲ್ಲಿಸಲಾಗಿದ್ದು, ಇದರಂತೆ ಮನೆ ನಿರ್ಮಾಣದ ಫಲಾನುಭವಿಗಳಿಗೆ ಪಂಚಾಯತ್‌ನಿಂದ ಹೆಚ್ಚಿನ ಅನುದಾನ ಒದಗಿಸುವ ಕೆಲಸವಾಗಬೇಕು ಎಂದು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಪುತ್ತೂರು

ಬುಡಕಟ್ಟು ಕೊರಗ ಸಮುದಾಯದ ಪುನರ್ವಸತಿ ಹೆಸರಿನಲ್ಲಿ ಅವರಿಗೆ ಭೂಮಿಗಳನ್ನು ನೀಡಿದರೂ ಅದರಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳನ್ನು ಸರ್ಕಾರ ಒದಗಿಸಿಲ್ಲ. ಇದರಿಂದಾಗಿ ವಾಸಿಸಲು ತೊಂದರೆಯಾಗಿದೆ ಎಂದು ಕೊರಗ ಸಮುದಾಯದ ಮುಖಂಡರು ಸಭೆಯಲ್ಲಿ ತಮ್ಮ ಸಮಸ್ಯೆಗಳನ್ನು ತೋಡಿಕೊಂಡರು. ಆದಿವಾಸಿ ಕೊರಗ ಜನಾಂಗದ ತಾಲೂಕು ಮಟ್ಟದ ಅಭಿವೃದ್ಧಿ ಸಮಿತಿಗಳ ಸಭೆಯು ಶುಕ್ರವಾರ ಪುತ್ತೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಹಸೀಲ್ದಾರ್ ಪುರಂದರ ಹೆಗ್ಡೆ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಕೊರಗ ಸಮುದಾಯದ ಮುಖಂಡರು ಸರ್ಕಾರ ಒದಗಿಸಿರುವ ಜಮೀನುಗಳಲ್ಲಿ ಜಾಗದ ಗಡಿಗುರುತು ಸೇರಿದಂತೆ ಇತರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿದರು. ಕೊರಗ ಸಮುದಾಯಕ್ಕೆ ಮನೆ ನಿರ್ಮಾಣಕ್ಕೆ ಸರಕಾರ ನೀಡುವ ರೂ. ೩.೫ ಲಕ್ಷ ಅನುದಾನ ಸಾಲುತ್ತಿಲ್ಲ. ಹೀಗಾಗಿ ಗ್ರಾಮ ಪಂಚಾಯತ್ ಅನುದಾನದಿಂದ ಹೆಚ್ಚುವರಿಯಾಗಿ ಹಣ ನೀಡಲು ಕ್ರಮ ಕೈಗೊಳ್ಳುವಂತೆ ಕೊರಗ ಸಮುದಾಯದ ಮುಖಂಡರು ಒತ್ತಾಯಿಸಿದರು.

ಸರ್ಕಾರ ನೀಡುವ ಅನುದಾನದಲ್ಲಿ ಮನೆ ನಿರ್ಮಾಣ ಸಾಧ್ಯವಾಗುತ್ತಿಲ್ಲ ಎಂಬ ಕಾರಣದಿಂದಾಗಿ ಹೆಚ್ಚಿನ ಕೊರಗರ ಮನೆ ನಿರ್ಮಾಣವು ಅಪೂರ್ಣ ಸ್ಥಿತಿಯಲ್ಲಿದೆ. ವಿವಿಧ ಗ್ರಾಮದಲ್ಲಿರುವ ಕೊರಗ ಸಮುದಾಯದ ಪಟ್ಟಿಯನ್ನು ಈಗಾಗಲೇ ಇಲಾಖೆಗೆ ಈಗಾಗಲೇ ಸಲ್ಲಿಸಲಾಗಿದ್ದು, ಇದರಂತೆ ಮನೆ ನಿರ್ಮಾಣದ ಫಲಾನುಭವಿಗಳಿಗೆ ಪಂಚಾಯತ್‌ನಿಂದ ಹೆಚ್ಚಿನ ಅನುದಾನ ಒದಗಿಸುವ ಕೆಲಸವಾಗಬೇಕು ಎಂದು ಆಗ್ರಹಿಸಿದರು. ಕೊರಗ ಅಭಿವೃದ್ಧಿ ಒಕ್ಕೂಟದ ಸಂಯೋಜಕ ಪುತ್ರನ್ ಹೆಬ್ರಿ, ಕೊರಗ ಅಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ತನಿಯ ಕೊರಗ ಒಳತ್ತಡ್ಕ, ಮುಖಂಡ ಸುರೇಶ್ ಕೊರಗ ಮತ್ತಿತರರು ಸಲಹೆ ಸೂಚನೆ ನೀಡಿದರು.

ವೇದಿಕೆಯಲ್ಲಿ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ನವೀನ್ ಭಂಡಾರಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ವಿನಯ ಕುಮಾರಿ ಉಪಸ್ಥಿತರಿದ್ದರು.