ಸಾರಾಂಶ
ಶಿಕಾರಿಪುರದ ತಾಪಂ ಸಭಾಂಗಣದಲ್ಲಿ ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್ ವಿತರಿಸಿದರು.
ಕನ್ನಡಪ್ರಭ ವಾರ್ತೆ ಶಿಕಾರಿಪುರ
ಸರ್ಕಾರದಿಂದ ದೊರೆಯುವ ಎಲ್ಲ ಸೌಲಭ್ಯ ಬಳಸಿಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ,ನೈತಿಕ ಮೌಲ್ಯ ಬೆಳೆಸಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.ಪಟ್ಟಣದ ತಾಪಂ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್ ವಿತರಿಸಿ ಮಾತನಾಡಿ, ಮಕ್ಕಳ ಅಭಿವೃದ್ಧಿಗೆ ಕೇಂದ್ರ, ರಾಜ್ಯ ಸರಕಾರ ಸಾಕಷ್ಟು ಯೋಜನೆ ನೀಡಿದೆ. ಅವುಗಳ ಮೂಲಕ ಮಕ್ಕಳಿಗೆ ಉತ್ತಮ ಮೌಲ್ಯಯುತ ಶಿಕ್ಷಣ ಸಿಗುವಂತೆ ಮಾಡಬೇಕು. ಅಲ್ಲದೆ ಉತ್ತಮ ಪೌಷ್ಠಿಕ ಆಹಾರ ನೀಡಿದರೆ ಅವರು ಉತ್ತಮ ಆರೋಗ್ಯ ಪಡೆಯುವ ಜತೆ ದೇಶಕ್ಕೂ ಉತ್ತಮ ಪ್ರಜೆಯಾಗಿ ರೂಪಗೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಗಮನ ನೀಡಬೇಕು ಎಂದರು.
ರಾಜ್ಯಾದ್ಯಂತ ಹೊಸದಾಗಿ ಅಂಗನವಾಡಿ ಸಹಾಯಕಿಯರ, ಶಿಕ್ಷಕಿಯರ ನೇಮಕವಾಗಿಲ್ಲ. ಆದ್ದರಿಂದ ಮಕ್ಕಳಿಗೂ ತೀವ್ರ ತೊಂದರೆ ಆಗುವ ಜತೆ ಒಬ್ಬರೇ ಮಕ್ಕಳಿಗೆ ಪಾಠ, ಅಡುಗೆ, ಸ್ವಚ್ಛತೆ, ಚುನಾವಣೆ ಕಾರ್ಯ, ವಿವಿಧ ರೀತಿ ಸಮೀಕ್ಷೆ ಹೀಗೆ ಹಲವು ಕಾರ್ಯ ಮಾಡುವ ಒತ್ತಡದಲ್ಲಿ ಅಂಗನವಾಡಿ ಶಿಕ್ಷಕಿಯರು ಇದ್ದಾರೆ. ಅದಕ್ಕಾಗಿ ಕೂಡಲೆ ನೇಮಕಾತಿ ಮಾಡುವಂತೆ ಸರ್ಕಾರವನ್ನು ಒತ್ತಾಯಿಸುವುದಾಗಿ ಹೇಳಿದರು.ಕಾರ್ಯಕ್ರಮದಲ್ಲಿ ತಾಲೂಕಿನ 325 ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್ ವಿತರಿಸಲಾಯಿತು.
ಪ್ರಭಾರ ಸಿಪಿಪಿಒ ರತ್ನಮ್ಮ, ಹಿರಿಯ ಮೇಲ್ವಿಚಾರಕರಾದ ಸುನಿತಾ ಮೂಡೇರ್, ವಾಣಿ, ಶೋಭಾ, ನಂಜಾಕ್ಷಿ, ಗೀತಾ, ಮಂಜುಳಾ, ಶೋಭಾ ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಎಲ್ ಬಸವರಾಜ್, ಪುರಸಭಾ ಸದಸ್ಯ ಮಹೇಶ್ ಹುಲ್ಮಾರ್, ಟಿಎಪಿಸಿಎಂಎಸ್ ಅಧ್ಯಕ್ಷ ಸುಧೀರ್ ಮಾರವಳ್ಳಿ, ಲೋಕೇಶ್ ಅರಶಿಣಗೆರೆ, ರಘು ಅಂಗನವಾಡಿ ಶಿಕ್ಷಕಿಯರು ಉಪಸ್ಥಿತರಿದ್ದರು.