ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಸೇವೆ ಕಲ್ಪಿಸಿ: ಸಚಿವ ಶರಣಬಸಪ್ಪ ದರ್ಶನಾಪೂರ

| Published : Jan 18 2024, 02:04 AM IST

ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಸೇವೆ ಕಲ್ಪಿಸಿ: ಸಚಿವ ಶರಣಬಸಪ್ಪ ದರ್ಶನಾಪೂರ
Share this Article
  • FB
  • TW
  • Linkdin
  • Email

ಸಾರಾಂಶ

ಯಾದಗಿರಿ ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಕೆಡಿಪಿ ಸಭೆಯು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ಅನಿರೀಕ್ಷತವಾಗಿ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಸೂಚಿಸಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಅತ್ಯುತ್ತಮ ಸೇವೆ ಕಲ್ಪಿಸಲು ಇರುವ ಸಿಬ್ಬಂದಿ ಸಮರ್ಪಕ ಬಳಕೆ ಹಾಗೂ ನಿಗದಿತ ಔಷಧೀಯ ಕೊರತೆಯಾಗದ ಹಾಗೆ ನಿಗಾ ವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪೂರ ಅವರು ಸಂಬಂಧಿಸಿದ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ನಡೆದ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಆರೋಗ್ಯ ವ್ಯವಸ್ಥೆ ಸುಧಾರಿಸಬೇಕು, ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಅವಶ್ಯಕ ಔಷಧೀಯ ಇರುವಂತೆ ಖಾತರಿಪಡಿಸಿಕೊಳ್ಳಬೇಕು. ಇರುವ ಸಿಬ್ಬಂದಿ ಸಮರ್ಪಕ ಬಳಕೆಯಾಗುವಂತೆ ನೋಡಿಕೊಳ್ಳಬೇಕು, ಲಿಖಿತ ರೂಪದಲ್ಲಿ ಅವರ ಕರ್ತವ್ಯ ನಿಗದಿಪಡಿಸಲು ತಿಳಿಸಿದರು.

ಅದರಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ಅನಿರೀಕ್ಷತವಾಗಿ ಭೇಟಿ ನೀಡಿ ಪರಿಶೀಲಿಸಬೇಕು. ಆಯಾ ಆಸ್ಪತ್ರೆಗಳಲ್ಲಿ ಲಭ್ಯವಿರುವ ಔಷಧಿಗಳು ಬಗ್ಗೆ ಡೇಲಿ ಚಾರ್ಟ್ ಅಳವಡಿಸಬೇಕು. ಆಸ್ಪತ್ರೆಗಳಲ್ಲಿ ಸ್ವಚ್ಛತೆ ಕಾಪಾಡಬೇಕು.

ಡಯಾಲಿಸಿಸ್‌ ಘಟಕಗಳ ಬಗ್ಗೆ ಗಮನವಿರಲಿ:

ಡಯಾಲಿಸಿಸ್‌ ಘಟಕಗಳ ಹೆಚ್ಚಳಕ್ಕೆ ಗಮನ ನೀಡಬೇಕು. ವಿಶೇಷವಾಗಿ ಮುಂಬರುವ ಎಪ್ರಿಲ್ ಮಾಹೆಯೊಳಗೆ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಡಯಾಲಿಸಿಸ್ ಯಂತ್ರಗಳು ಟೆಕ್ನಿಶಿಯನ್‌ಗಳು ಹಾಗೂ ಸಿಬ್ಬಂದಿ ನಿಯೋಜಿಸಿ ಸೂಕ್ತ ಕ್ರಮಕೈಗೊಳ್ಳಬೇಕು. ಅವಶ್ಯಕ ಔಷಧಿಗಳ ಮಾಹಿತಿ ಒದಗಿಸುವಂತೆಯೂ ಸೂಚಿಸಿದ ಅವರು ಅವಶ್ಯಕ ಸಿಬ್ಬಂದಿ ಬಳಸಿಕೊಂಡು ಪ್ರಿಸ್ಕಿಕ್ಷನ್ ಹೊರಗೆ ಕಳುಹಿಸದಂತೆ ಎಚ್ಚರಿಕೆ ವಹಿಸಲು ಸಚಿವ ದರ್ಶನಾಪುರ ನಿರ್ದೇಶನ ನೀಡಿದರು.

ನಗರದ ಸರ್ಕಾರಿ ವೈದ್ಯಕೀಯ ಕಾಲೇಜದಲ್ಲಿ ಸ್ಥಾಪಿಸಬಹುದಾದ ರಕ್ತನಿಧಿ ಕೇಂದ್ರ ನಿಗದಿತ ಅವಧಿಯೊಳಗೆ ಟೆಂಡರ್ ಕರೆದು ಸ್ಥಾಪಿಸಬೇಕು. ಈಗಾಗಲೇ ರಕ್ತನಿಧಿ ಸಂಗ್ರಹಣಾ ಘಟಕ ಸಮರ್ಪಕ ಕಾರ್ಯನಿರ್ವಹಿಸಿ ತುರ್ತು ರೋಗಿಗಳಿಗೆ ರಕ್ತದ ಕೊರತೆಯಾಗದಂತೆ ನಿಗಾ ವಹಿಸಬೇಕು. ಗ್ರಾಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆರ್.ಎಂ.ಪಿ. ವೈದ್ಯರ ಮಾಹಿತಿ ಒಳಗೊಂಡ ವರದಿ ಸಲ್ಲಿಸಬೇಕು ಎಂದರು.

ಎಕ್ಸರೇ, ಸಿಟಿಸ್ಕ್ಯಾನ್‌ :

ತಾಯಿ, ಮಕ್ಕಳು ಹೆರಿಗೆ ಆಸ್ಪತ್ರೆಗಳಲ್ಲಿ ಸಮರ್ಪಕ ಔಷಧಿ ಇರುವಂತೆ ನೋಡಿಕೊಳ್ಳಲು ತಿಳಿಸಿದರು. ಗುರುಮಠಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಎಕ್ಸರೇ ರೂಂ ಹಾಗೂ ಶಹಾಪೂರ ಆಸ್ಪತ್ರೆಗಳಲ್ಲಿ ಸಿಟಿಸ್ಕ್ಯಾನ್ ನಿರ್ವಹಣಾ ಸಿಬ್ಬಂದಿ ನೇಮಕಾತಿ ಕುರಿತು ಮಾರ್ಗೋಪಾಯಗಳನ್ನು ಹುಡುಕುವಂತೆ ತಿಳಿಸಿದ ಅವರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಜಿಲ್ಲಾ ಆಸ್ಪತ್ರೆ ಸರ್ಜನ್ ಹಾಗೂ ಇತರೆ ಆರೋಗ್ಯಧಿಕಾರಿಗಳು ವಿಶೇಷ ಆಸಕ್ತಿ ವಹಿಸಿ ಜನರಿಗೆ ತೊಂದರೆಯಾಗದಂತೆ ನಿಗಾವಹಿಸಲು ಸೂಚಿಸಿದರು.

ಬೆಳೆಹಾನಿ ಪರಿಹಾರ ಶೀಘ್ರ ವಿತರಣೆಗೆ ಕ್ರಮ:

ರೈತರ ಬೆಳೆಹಾನಿ ಪರಿಹಾರ ಶೀಘ್ರ ವಿತರಣೆಗೆ ಕ್ರಮಕೈಗೊಳ್ಳಬೇಕು. ಜಲಜೀವನ ಮಿಷನ್ ಯೋಜನೆಯಡಿ ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು. ನಾಲ್ಕು ಹಂತಗಳಲ್ಲಿ ಹಂತವಾರು ಮುಕ್ತಾಯಗೊಂಡ ಕಾಮಗಾರಿಗಳ ಮಾಹಿತಿ ಒದಗಿಸಬೇಕು. ರಸ್ತೆ ದುರಸ್ತಿ ಕುರಿತು ಹಾಗೂ ಬಾಕಿ ಕಾಮಗಾರಿಗಳ ವರದಿ ನೀಡಬೇಕು. ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ಥಿ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸೂಚಿಸಿದರು.

ದುರಸ್ತಿಯಿರುವ ಹಾಗೂ ಹಸ್ತಾಂತರಗೊಂಡ ಘಟಕಗಳ ಬಗ್ಗೆ ಮಾಹಿತಿ ಒದಗಿಸಬೇಕು. ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಪಿಡಿಓಗಳು ಹಾಗೂ ಜಿಲ್ಲಾ ಪಂಚಾಯತ್‌ ಉಪ ಕಾರ್ಯದರ್ಶಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ, ಮುಂಬರುವ ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಲು ಸೂಚನೆ ನೀಡಿದರು.

ವಿವಿಧ ವಸತಿನಿಲಗಯಳ ಸುವ್ಯವಸ್ಥೆಗೆ ಗಮನ ಕೋಡಿ ಅಂಗನವಾಡಿ ಕೇಂದ್ರಗಳಿಗೆ 2022-23 ರಲ್ಲಿ ಕೆಕೆಆರ್‌ಡಿಬಿ ಅನುದಾನ ಹೆಚ್ಚು ನೀಡಿದೆ ಸದ್ಬಳಕೆಯಾಗಬೇಕು, ಶಾಲಾಕಟ್ಟಡ ಅಂಗನವಾಡಿ ಕೇಂದ್ರಗಳ ಕಾಮಗಾರಿ ಆದ್ಯತೆ ಮೇಲೆ ಪೂರ್ಣಗೊಳಿಸಲು ತಿಳಿಸಿದರು. ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ನಿರ್ದಾಕ್ಷಿಣ್ಯವಾಗಿ ಪ್ರಕರಣ ದಾಖಲಿಸಿಕೊಳ್ಳವಂತೆ ಸಚಿವರು ಸೂಚಿಸಿದರು.

ಸುರಪುರ ಶಾಸಕರಾದ ರಾಜಾ ವೆಂಕಟಪ್ಪ ನಾಯಕ, ಯಾದಗಿರಿ ಶಾಸಕರಾದ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು, ಗುರುಮಠಕಲ್ ಶಾಸಕರಾದ ಶರಣಗೌಡ ಕಂದಕೂರು, ವಿಧಾನ ಪರಿಷತ್ ಸದಸ್ಯಛಲವಾದಿ ಟಿ. ನಾರಾಯಣಸ್ವಾಮಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಹಜ್ ವಕ್ಫ್ ಸರ್ಕಾರದ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಜೈನ್, ಜಿಲ್ಲಾಧಿಕಾರಿ ಡಾ. ಬಿ. ಸುಶೀಲಾ ಬಿ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಕಾಜೋಲ್ ಪಾಟೀಲ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರಣೇಶ ಎಸ್.ಪಿ. ಸೇರಿದಂತೆ ಇತರರಿದ್ದರು

ಡಿಎಚ್ಓ ವಿರುದ್ಧ ಶಾಸಕ ಕಂದಕೂರು ಗರಂ:

ಕೆಡಿಪಿ ಸಭೆಯಲ್ಲಿ ಆರೋಗ್ಯ ಅಧಿಕಾರಿಗಳ ವಿರುದ್ಧ ಗುರುಮಠಕಲ್‌ ಶಾಸಕ ಶರಣಗೌಡ ಕಂದಕೂರ ಗರಂ ಆದ ಪ್ರಸಂಗ ಎದುರಾಗಿತ್ತು. ನನ್ನ ಕ್ಷೇತ್ರದಲ್ಲಿ ಆರೋಗ್ಯ, ಶಿಕ್ಷಣದಲ್ಲಿ ಭ್ರಷ್ಟಾಚಾರ ನಡೆದರೆ ನಾನು ಶಾಸಕ ಎಂಬುವುದನ್ನೂ ಮರೆಯಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ಗುರುಮಠಕಲ್‌ನಲ್ಲಿ ಸಿಬ್ಬಂದಿ ಇಲ್ಲ ಎಂದು ಎಕ್ಸ್‌ರೇ ಕೋಣೆಗೆ ಬೀಗ ಹಾಕಲಾಗಿದೆ. ಹಾಗಿದ್ದರೆ ರೋಗಿಗಳು ಎಲ್ಲಿಗೆ ಹೋಗಬೇಕು? ಸಿಬ್ಬಂದಿ ಯಾವಾಗ ಬರ್ತಾರೆ ಎಂದು ಶಾಸಕ ಕಂದಕೂರು ಶರಣಗೌಡ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಗುರಮಠಕಲ್‌ನಲ್ಲಿ ಎಕ್ಸ್‌ರೇ ಸ್ಟಾಫ್‌ ಇಲ್ಲ ಸರ್ ಎಂದ ಡಿಎಚ್ಓ ವಿರುದ್ಧ ಕೋಪಗೊಂಡ ಶಾಸಕ ಕಂದಕೂರು, ಹಾಗಾದರೆ ಟೆಕ್ನಿಷಿಯನ್ಸ್ ಇಲ್ಲಾಂದ್ರೆ ಮೆಷಿನ್ ಏಕೆ ಇಟ್ಟಿದ್ರಿ? ಉತ್ತರ ಬೇಡ, ನನಗೆ ಪರಿಹಾರ ಬೇಕು ಎಂದು ಸೂಚಿಸಿದರು.

ಏಪ್ರಿಲ್‌ನಿಂದ ಡಯಾಲಿಸಿಸ್ ಘಟಕ ಹೆಚ್ಚಿಸುವಂತೆ ಅಧಿಕಾರಿಗಳಿಗೆ ಸಚಿವ ದರ್ಶನಾಪೂರ ಸೂಚನೆ ನೀಡಿದರು.