ಪ್ರಸ್ತುತ ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ಅತ್ಯಂತ ಅಗತ್ಯವಾಗಿದೆ ಎಂದು ಕರ್ಕಿ ಮಠದ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ದೈವಜ್ಞ ಬ್ರಾಹ್ಮಣ ಮಠಾಧೀಶ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿ ತಿಳಿಸಿದರು.

ಶಿಕಾರಿಪುರ: ಪ್ರಸ್ತುತ ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ಅತ್ಯಂತ ಅಗತ್ಯವಾಗಿದೆ ಎಂದು ಕರ್ಕಿ ಮಠದ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ದೈವಜ್ಞ ಬ್ರಾಹ್ಮಣ ಮಠಾಧೀಶ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿ ತಿಳಿಸಿದರು. ಪಟ್ಟಣದ ಜೈನ ಮಂದಿರದಲ್ಲಿ ತಾ. ದೈವಜ್ಞ ಬ್ರಾಹ್ಮಣ ಸಮಾಜದ ವತಿಯಿಂದ ಆಯೋಜಿಸಲಾಗಿದ್ದ ದೈವಜ್ಞ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವದಿಸಿದರು. ದೈವಜ್ಞ ಸಮುದಾಯ ಅತ್ಯಂತ ಶ್ರೀಮಂತ ಸಂಸ್ಕಾರದ ಹಿನ್ನೆಲೆಯನ್ನು ಹೊಂದಿದ್ದು, ಸನಾತನ ಸಂಸ್ಕೃತಿಯ ಜೀವನ ಶೈಲಿಯನ್ನು ಪರಿಪಾಲಿಸುತ್ತಿರುವ ಸಮಾಜ ಇತರೆ ಸಮುದಾಯಕ್ಕಿಂತ ಭಿನ್ನವಾಗಿದೆ, ಸನಾತನ ಧರ್ಮದ ಶ್ರೇಷ್ಠತೆಗೆ ದೈವಜ್ಞ ಸಮುದಾಯದ ಕೊಡುಗೆ ಬಹು ಮಹತ್ವದ್ದಾಗಿದೆ ಎಂದು ತಿಳಿಸಿದರು. ಆಧುನಿಕತೆಯ ಭರಾಟೆಯಲ್ಲಿ ಧರ್ಮ ಆಚಾರ ವಿಚಾರ ಮರೆಯಾಗುತ್ತಿದೆ. ಸನಾತನ ಧರ್ಮದಲ್ಲಿನ ಆಚಾರ ವಿಚಾರ ಸಂಪ್ರದಾಯಗಳು ವೈಜ್ಞಾನಿಕ ಹಿನ್ನೆಲೆಯನ್ನು ಹೊಂದಿದ್ದು, ಈ ದಿಸೆಯಲ್ಲಿ ಪ್ರತಿಯೊಬ್ಬರೂ ಧರ್ಮ ಆಚಾರ ವಿಚಾರ ಸಂಪ್ರದಾಯಗಳನ್ನು ನಿರ್ಲಕ್ಷಿಸದಂತೆ ಕಡ್ಡಾಯವಾಗಿ ಪರಿಪಾಲಿಸಿ ಧರ್ಮದ ಶ್ರೇಷ್ಠತೆ ಎತ್ತಿಹಿಡಿಯಬೇಕಾಗಿದೆ ಎಂದರು.

ಪೋಷಕರು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಮಾತ್ರ ಹೆಚ್ಚಿನ ಆದ್ಯತೆ ನೀಡದೆ ಪೂರಕವಾಗಿ ಸಂಸ್ಕಾರವನ್ನು ನೀಡಬೇಕಾಗಿದೆ. ಸಂಸ್ಕಾರಯುತ ಪೀಳಿಗೆ ನಿರ್ಮಾಣದಿಂದ ಮಾತ್ರ ಸಮಾಜ ಸದೃಢವಾಗಲಿದೆ ಎಂದು ತಿಳಿಸಿದರು. ಸಂಸ್ಕಾರಯುತ ಶಿಕ್ಷಣ ನೀಡುವ ಬಗ್ಗೆ ಪ್ರತಿಯೊಬ್ಬ ಪೋಷಕರು ಹೆಚ್ಚಿನ ನಿಗಾವಹಿಸಬೇಕಾಗಿದೆ. ಈಗಾಗಲೇ ಶ್ರೀ ಮಠದಲ್ಲಿ ವೇದ ಶಿಕ್ಷಣ ನೀಡಲಾಗುತ್ತಿದ್ದು, ಸದುಪಯೋಗ ಪಡೆದುಕೊಳ್ಳುವಂತೆ ಅವರು ತಿಳಿಸಿದರು. ಸಂಸದ ರಾಘವೇಂದ್ರ ಮಾತನಾಡಿ, ಧರ್ಮ ಕಾರ್ಯದಲ್ಲಿ ದೈವಜ್ಞ ಸಮಾಜ ಮುಂಚೂಣಿಯಲ್ಲಿದ್ದು, ಈ ದಿಸೆಯಲ್ಲಿ ಶ್ರೀಗುರುಗಳ ಪಾತ್ರ ಅಮೂಲ್ಯವಾಗಿದೆ. ಧರ್ಮ ಕಾರ್ಯದಿಂದ ಮಾತ್ರ ಮನುಷ್ಯನಿಗೆ ನೆಮ್ಮದಿ ಶಾಂತಿ ದೊರೆಯಲಿದೆ ಎಂದರು.

ಸದೃಢ ಸಮಾಜಕ್ಕೆ ದೈವಜ್ಞ ಸಮಾಜದ ಕೊಡುಗೆ ಬಹು ಮಹತ್ವದ್ದಾಗಿದ್ದು, ಕುಶಲತೆಯಲ್ಲಿ ದೈವಜ್ಞ ಸಮುದಾಯ ಮೀರಿಸಲು ಸಾದ್ಯವಿಲ್ಲ ಎಂದರು.

ಸುಜ್ಞಾನೇಶ್ವರ ಭಾರತಿ ಸ್ವಾಮೀಜಿ ದಿವ್ಯ ಸಾನಿದ್ಯ ವಹಿಸಿದ್ದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಎಂಎಡಿಬಿ ಮಾಜಿ ಅಧ್ಯಕ್ಷ ಗುರುಮೂರ್ತಿ, ಸಮಾಜದ ಮುಖಂಡ ಪಾಂಡುರಂಗ ರಾಯ್ಕರ್, ಶಿವಾನಂದ ಸಾನು, ರಾಘವೇಂದ್ರ ಸಾನು, ಶ್ರೀಧರ್‌ ಕರ್ಕಿ, ಸದಾನಂದ ರಾಯ್ಕರ್, ರಮೇಶ್, ಗೋಪಿ, ಪದ್ಮಾ ಗಜೇಂದ್ರ, ಸುಭಾಕರ ರಾಯ್ಕರ್, ಲತಾ ನಾಗರಾಜ್, ಶ್ರವಣ, ರಾಘವೇಂದ್ರ ರಾಯ್ಕರ್, ಪ್ರಕಾಶ್‌ ಶೇಟ್ ಸಹಿತ ಹಲವು ಮುಖಂಡರು ಭಾಗವಹಿಸಿ ಶ್ರೀಗಳ ಆಶೀರ್ವಾದ ಪಡೆದರು.

ಕಾರ್ಯಕ್ರಮದ ಆರಂಭದಲ್ಲಿ ಉಭಯ ಶ್ರೀಗಳನ್ನು ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮೂಲಕ ಪೂರ್ಣ ಕುಂಭ ಸ್ವಾಗತವನ್ನು ಏರ್ಪಡಿಸಿ ಜೈನ ಮಂದಿರಕ್ಕೆ ಕರೆತರಲಾಯಿತು. ಪಾದ ಪೂಜೆ ನಡೆಸಿದ ನಂತರ ಆಶೀರ್ವಚನ ಕಾರ್ಯಕ್ರಮ ನಡೆಯಿತು.