ಅತಿಯಾದ ಮಳೆಯಿಂದಾದ ಹಾನಿಗೆ ಪರಿಹಾರ ನೀಡಿ: ಡಾ. ಬಸವರಾಜ

| Published : Oct 20 2024, 01:49 AM IST

ಸಾರಾಂಶ

ಕೊಪ್ಪಳ ಜಿಲ್ಲೆಯಲ್ಲಿ ಅತಿಯಾದ ಮಳೆಯಿಂದ ಹಾನಿಗೀಡಾದ ಕೋಳೂರು, ಕಾಟ್ರಳ್ಳಿ, ಹಿರೇಸಿಂದೋಗಿ ಮತ್ತಿತರ ಗ್ರಾಮಗಳಿಗೆ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್ ಭೇಟಿ ನೀಡಿ, ಪರಿಶೀಲಿಸಿದರು. ಹಾನಿ ಕುರಿತು ರೈತರಿಂದ ಮಾಹಿತಿ ಪಡೆದರು.

ಕೊಪ್ಪಳ: ಜಿಲ್ಲಾದ್ಯಂತ ಅತಿಯಾದ ಮಳೆಯಿಂದಾಗ ಅಪಾರ ಹಾನಿಯಾಗಿದ್ದು, ರೈತ ಸಮುದಾಯ ಸಂಕಷ್ಟದಲ್ಲಿದೆ. ಕೂಡಲೇ ಪರಿಹಾರ ನೀಡುವಂತೆ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್ ಆಗ್ರಹಿಸಿದ್ದಾರೆ.

ಹಾನಿಯಾಗುವ ಕೋಳೂರು, ಕಾಟ್ರಳ್ಳಿ, ಹಿರೇಸಿಂದೋಗಿ ಸೇರಿದಂತೆ ವಿವಿಧೆಡೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದರು. ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಾನಿಯಾಗಿರುವ ಮೆಕ್ಕೆಜೋಳ, ಹತ್ತಿ, ಉಳ್ಳಾಗಡ್ಡಿ, ಮತ್ತು ಇತರ ಬೆಳೆಗಳ ಹಾನಿ ವೀಕ್ಷಿಸಿ ರೈತರ ಹತ್ತಿರ ಮಾಹಿತಿಯನ್ನು ಪಡೆದರು.

ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಜಿಪಂ ಕ್ಷೇತ್ರದ ವ್ಯಾಪ್ತಿಯಲ್ಲಿ ಹಾಗೂ ಹಿರೇಹಳ್ಳಕ್ಕೆ ಹೊಂದಿಕೊಂಡು ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ರೈತರ ಭೂಮಿಯಲ್ಲಿ ನೀರು ಹೊಕ್ಕು ರೈತರ ಬೆಳೆದ ಮೆಕ್ಕೆಜೋಳ, ಹತ್ತಿ, ಉಳ್ಳಾಗಡ್ಡಿ, ಸಜ್ಜಿ ಸಂಪೂರ್ಣ ನಾಶವಾಗಿದೆ. ಗ್ರಾಮದ ಕೆಲವು ರೈತರ ಹೊಲ, ಜಮೀನುಗಳು ನೀರಿಗೆ ಕೊಚ್ಚಿಕೊಂಡು ಸಂಪೂರ್ಣ ನಾಶವಾಗಿದೆ. ಇದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ಹಾಗಾಗಿ ರೈತರಿಗೆ ಸಾಕಷ್ಟು ನಷ್ಟ ಉಂಟಾಗಿದ್ದರಿಂದ ಕೂಡಲೇ ರೈತರಿಗೆ ಪರಿಹಾರ ಒದಗಿಸಬೇಕು ಹಾಗೂ ಹಿರೇಹಳ್ಳದ ಅಕ್ಕಪಕ್ಕದಲ್ಲಿರುವ ಹೊಲಗಳಲ್ಲಿ ನೀರು ನುಗ್ಗಿ ಬೆಳೆ ಹಾನಿಗೊಳಗಾಗಿದೆ. ಕಟಾವಿಗೆ ಬಂದಿರುವ ಮೆಕ್ಕೆಜೋಳ ಮತ್ತೆ ಪುನಃ ಮೊಳಕೆಯೊಡೆದು ರೈತರು ಬಹಳಷ್ಟು ತೊಂದರೆಗೊಳಗಾಗಿದ್ದಾರೆ.

ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿಯಾಗಿರುವುದರ ಬಗ್ಗೆ ವರದಿಯನ್ನು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಂದ ಪಡೆದು ಸರ್ಕಾರಕ್ಕೆ ರವಾನಿಸಲು ಮತ್ತು ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಈ ತುರ್ತು ಸಂದರ್ಭದಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ನಷ್ಟವಾಗಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸರ್ಕಾರದ ಗಮನಕ್ಕೆ ತರಬೇಕು ಎಂದು ಹೇಳಿದರು.

ಬಿಜೆಪಿ ಮುಖಂಡರಾದ ಅಜಯ್ ಗೌಡರು ಪಾಟೀಲ್ ಮೈನಹಳ್ಳಿ, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಗಣೇಶ್ ಹೊರತಟ್ನಾಳ, ದೇವರಾಜ್ ಹಾಲಸಮುದ್ರ, ಶಿವಪುತ್ರ ಗೌಡ ಕೋಳೂರು, ಅಶೋಕ್ ಗದ್ದಿ, ಮಾರುತಿ ನಾಯಕ್, ಶರಣು ಸಾವರ್ಕರ್, ಮಾಲತೇಶ್ ಕೋಳೂರು, ದೇವೇಂದ್ರ ಈಳಿಗೇರ ಇತರ ಮುಖಂಡರು ಉಪಸ್ಥಿತರಿದ್ದರು.