ಪ್ರಕೃತಿ ವಿಕೋಪ: ಹಾನಿಯಾಗಿರುವ ರೈತರ ಬೆಳೆಗೆ ಪರಿಹಾರ ನೀಡಿ

| Published : May 09 2024, 01:02 AM IST

ಸಾರಾಂಶ

ಮೊದಲೇ ಬರದಿಂದ ತತ್ತರಿಸಿದ್ದ ರೈತರಿಗೆ ಪ್ರಕೃತಿ ವಿಕೋಪದಿಂದಾಗಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದ್ದು, ಕೂಡಲೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು, ಬರಪರಿಹಾರವನ್ನು ತುರ್ತು ಕೈಗೊಳ್ಳಬೇಕು, ಬೆಳೆ ನಷ್ಟಕ್ಕೆ ವೈಜ್ಞಾನಿಕ ಸರ್ವೆ ನಡೆಸಬೇಕು, ಗೋಶಾಲೆ ಆರಂಭಿಸಿ ಜಾನುವಾರುಗಳನ್ನು ರಕ್ಷಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ತಾಲೂಕು ಕಚೇರಿ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಿದರು.

1 ಎಕರೆಗೆ 1ಲಕ್ಷ ಪರಿಹಾರಕ್ಕೆ ಕಬ್ಬು ಬೆಳೆಗಾರರ ಸಂಘ ಆಗ್ರಹ । ಕ್ರಮ ಕೈಗೊಳ್ಳದಿದ್ದರೇ ಉಗ್ರ ಪ್ರತಿಭಟನೆಯ ಎಚ್ಚರಿಕೆ

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಮೊದಲೇ ಬರದಿಂದ ತತ್ತರಿಸಿದ್ದ ರೈತರಿಗೆ ಪ್ರಕೃತಿ ವಿಕೋಪದಿಂದಾಗಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದ್ದು, ಕೂಡಲೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು, ಬರಪರಿಹಾರವನ್ನು ತುರ್ತು ಕೈಗೊಳ್ಳಬೇಕು, ಬೆಳೆ ನಷ್ಟಕ್ಕೆ ವೈಜ್ಞಾನಿಕ ಸರ್ವೆ ನಡೆಸಬೇಕು, ಗೋಶಾಲೆ ಆರಂಭಿಸಿ ಜಾನುವಾರುಗಳನ್ನು ರಕ್ಷಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ತಾಲೂಕು ಕಚೇರಿ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಿದರು.ಪಟ್ಟಣದ ತಾಲೂಕು ಕಚೇರಿಯ ಮುಂದೆ ಜಮಾಯಿಸಿದ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆ ಭಾಗ್ಯರಾಜ್ ನೇತೃತ್ವದಲ್ಲಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು. ಕಳೆದ ಹಲವು ತಿಂಗಳಿಂದ ರೈತರು ಬರದಿಂದ ತತ್ತರಿಸಿದ್ದು ಸಾಲಮಾಡಿ ಬೆಳೆದ ಬೆಳೆಯೂ ಪ್ರಕೖತಿ ವಿಕೋಪದಿಂದಾಗಿ ಹಾನಿಯಾದರೆ, ರೈತ ಇನ್ನೇನು ಮಾಡಲು ಸಾಧ್ಯ ಎಂಬುದನ್ನ ಸರ್ಕಾರ ಮನಗಾಣಬೇಕು, ಕೂಡಲೆ ಜಿಲ್ಲಾಡಳಿತ, ತಾಲೂಕು ಆಡಳಿತ ಚುನಾವಣಾ ಗುಂಗಿನಿಂದ ಹೊರಬರಬೇಕು, ರೈತರಿಗೆ ವೈಜ್ಞಾನಿಕ ರೀತಿಯಲ್ಲಿ ಬೆಳೆ ನಷ್ಟಕ್ಕೆ ರೈತರ 1 ಎಕರೆ ಬೆಳೆಗೆ 1 ಲಕ್ಷದಂತೆ ಪರಿಹಾರ ನೀಡಬೇಕು, ಸರ್ಕಾರ ಹಾಗೂ ಜಿಲ್ಲಾಡಳಿತ ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದಿದ್ದರೆ. ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.ರೈತರ ಬಳಿಗೆ ಸರ್ಕಾರ ಎಂಬ ಘೋಷಣೆಯನ್ನು ಮಾತ್ರ ನಾವು ಕೇಳಿದ್ದೆವೆಯೇ ಹೊರತು, ಯಾವ ಸರ್ಕಾರಗಳು, ಅಧಿಕಾರಿಗಳು ರೈತರ ಮನೆಗೆ ಬಂದು ಬೆಳೆನಷ್ಟದ ಪರಿಹಾರ ಇಲ್ಲಿತನಕ ನೀಡಿಲ್ಲ, ಇದು ಸರ್ಕಾರದ ನಿರ್ಲಕ್ಷ್ಯ, ರೈತರಿಗೆ ಕಬ್ಬಿನ ಬಾಕಿ, ಬರ ಪರಿಹಾರ ನೀಡಬೇಕು, ಕೃಷಿಗೆ ಸಂಬಂಧಿಸಿದಂತೆ ಸಮರ್ಪಕ ವಿದ್ಯುತ್ ಪೂರೈಸಬೇಕು, ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದರು. ಈವೇಳೆ ಸ್ಥಳಕ್ಕೆ ಆಗಮಿಸಿದ ಎಸಿ ಶಿವಮೂರ್ತಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಕಬ್ಬುಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ಜಿಲ್ಲೆಯ ಹಲವು ತಾಲೂಕುಗಳಲ್ಲಿ ಪ್ರಕೃತಿ ವಿಕೋಪದಿಂದಾಗಿ ಏಳು ನೂರ ಹೆಕ್ಟೇರ್ ಗೂ ಅಧಿಕ ರೈತರು ಬೆಳೆಯಲಾಗಿದ್ದ ಪಪ್ಪಾಯ, ಬಾಳೆ, ತೆಂಗು, ಜೋಳ, ಕಬ್ಬಿನ ಬೆಳೆಗಳು ನಷ್ಟವಾಗಿವೆ. ಇದನ್ನ ಮನಗಂಡು ಸೂಕ್ತ ಪರಿಹಾರ ನೀಡಬೇಕಾದ ಕಂದಾಯ ಇಲಾಖೆ ಈಸಂಬಂಧ ನಿಲ೯ಕ್ಷ್ಯವಹಿಸಿದೆ. ಚುನಾವಣೆ ನೆಪವೊಡ್ಡಿ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ, ಹಾಗಾಗಿ ಇನ್ನಾದರೂ ಸರ್ಕಾರ ಎಚ್ಚೆತ್ತು ಕೃಷಿ ಸಾಲ ಮನ್ನಾ ಮಾಡಲು ಮುಂದಾಗಬೇಕು, ಪಂಪ್ ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಗೆ ಕ್ರಮವಹಿಸಬೇಕು. ಬೆಳೆ ನಷ್ಟದಿಂದ ರೈತರಿಗೆ ಅನ್ಯಾಯವಾಗಿದ್ದು, ಎಕರೆಗೆ 1ಲಕ್ಷದಂತೆ ವೈಜ್ಞಾನಿಕ ರೀತಿಯಲ್ಲಿ ಪರಿಹಾರ ನೀಡಬೇಕು, ಇಲ್ಲದ ಪಕ್ಷದಲ್ಲಿ ಜಿಲ್ಲಾಡಳಿತ ವಿರುದ್ಧ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ.

ಪ್ರಕೃತಿ ವಿಕೋಪದಡಿ ರೈತರಿಗೆ ಸಾಕಷ್ಟು ನೋವುಂಟಾಗಿದೆ. ಇದನ್ನ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು ಚುನಾವಣೆ ನೆಪವೊಡ್ಡಿ ಅಧಿಕಾರಿ ವರ್ಗ ರೈತರಿಗೆ ಅನ್ಯಾಯ ಮಾಡುತ್ತಿದೆ. ಬರದಲ್ಲಿ ತತ್ತರಿಸಿದ್ದ ರೈತರಿಗೆ ನೋವುಂಟು ಮಾಡಲಾಗುತ್ತಿದೆ ಎಂದು ದೂರಿದರು. ಈ ವೇಳೆ ಮಹದೇವ ಪ್ರಸಾದ್, ಲಿಂಗಣಾಪುರ ಬಸವರಾಜು, ಉತ್ತಂಬಳ್ಳಿ ಗಣೇಶ್, ತೇರಂಬಳ್ಳಿ ರವಿ, ಕುಣಗಳ್ಳಿ ರಂಗಸ್ವಾಮಿ,ಧನಗೆರೆ ಗುರುಸ್ವಾಮಿ, ಮುಡಿಗುಂಡ ಶಿವಸ್ವಾಮಿ, ನಾಗೇಶ್ ಕಜ್ಜಿಹುಂಡಿ, ಪ್ರಭುಸ್ವಾಮಿ, ಸಿದ್ದೇಶ್ ಮಧುವನಹಳ್ಳಿ, ಪ್ರಕಾಶ್, ಮದನ್, ಬಸವಣ್ಣ, ಪುಟ್ಟಸ್ವಾಮಿ, ಹಾಡ್ಯರವಿ, ಚಂದ್ರು ನರೀಪುರ ಇನ್ನಿತರರು ಇದ್ದರು.