ಕನ್ನಡಪ್ರಭ ವಾರ್ತೆ ತುರುವೇಕೆರೆ

ಜಿಲ್ಲೆಯಲ್ಲಿ ಭೀಕರ ಬರಗಾಲವಿದ್ದು ಇಡೀ ಜಿಲ್ಲೆಯನ್ನು ಬರಗಾಲಪೀಡಿತ ಪ್ರದೇಶವೆಂದು ಘೋಷಿಸಬೇಕು ಮತ್ತು ಪ್ರತಿ ಎಕರೆ ರಾಗಿ ಬೆಳೆಗೆ ಕನಿಷ್ಠ 50 ಸಾವಿರ ರು. ಪರಿಹಾರವಾಗಿ ನೀಡಬೇಕೆಂದು ಶಾಸಕ ಎಂ.ಟಿ.ಕೃಷ್ಣಪ್ಪ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈ ವೇಳೆಗಾಗಲೇ ಸರ್ಕಾರ ರೈತರ ನೆರವಿಗೆ ಧಾವಿಸಬೇಕಿತ್ತು. ಆದರೆ ಇದು ಜಡ್ಡು ಹಿಡಿದಿರುವ ಸರ್ಕಾರವಾಗಿರುವುದರಿಂದ ರೈತರಿಗೆ ಯಾವುದೇ ಉಪಯೋಗವಿಲ್ಲ ಪ್ರತಿ ಕ್ವಿಂಟಾಲ್ ರಾಗಿಗೆ ಸರಿ ಸುಮಾರು 5 ಸಾವಿರದಷ್ಟಿದೆ. ಪ್ರತಿ ಎಕರೆಗೆ ಕನಿಷ್ಠ 10 ಕ್ವಿಂಟಾಲ್ ಬೆಳೆ ಬೆಳೆದರೂ 50 ಸಾವಿರ ರು. ಆಗಲಿದೆ. ಹಾಗಾಗಿ ಪ್ರತಿ ಎಕರೆಗೆ 50 ಸಾವಿರ ರು. ಪರಿಹಾರ ಧನ ಘೋಷಿಸಬೇಕೆಂದು ಶಾಸಕರು ಆಗ್ರಹಿಸಿದರು. ಜೆಡಿಎಸ್ ಮತ್ತು ಬಿಜೆಪಿ ಯ ಎನ್ ಡಿ ಎ ಮಿತ್ರ ಪಕ್ಷಗಳು ಹೇಮಾವತಿ ನೀರಿಗಾಗಿ ಹೋರಾಟದ ಫಲವಾಗಿ ಹೇಮಾವತಿ ನೀರನ್ನು ಕಾಲುವೆಗಳ ಮೂಲಕ ಹರಿಸಲಾಗಿದೆ. ಇದರಿಂದ ತುಮಕೂರು ಜಿಲ್ಲೆಯ ಎಲ್ಲಾ ರೈತರಿಗೆ ಅನುಕೂಲವಾಗಲಿದೆ. ತಾಲೂಕಿನಲ್ಲಿ ಸುಮಾರು 60 ಕ್ಕೂ ಹೆಚ್ಚು ಕೆರೆಗಳಿವೆ. ಅವುಗಳನ್ನೆಲ್ಲಾ ತುಂಬಿಸುವ ಕಾರ್ಯ ಮಾಡಲಾಗುವುದು. ರೈತಾಪಿಗಳು ಸಹನೆಯಿಂದ ಇದ್ದು ಎಲ್ಲಾ ಕೆರಗಳನ್ನು ತುಂಬಿಸಿಕೊಳ್ಳಬೇಕೆಂದು ಶಾಸಕ ಎಂ.ಟಿ.ಕೃಷ್ಣಪ್ಪ ಕರೆ ನೀಡಿದರು. ತಮ್ಮ ಹೋರಾಟಕ್ಕೆ ಬೆಂಬಲ ನೀಡಿದ ಮಾಜಿ ಶಾಸಕರಾದ ಮಸಾಲಾ ಜಯರಾಮ್, ಎಂ.ಡಿ.ಲಕ್ಷ್ಮೀನಾರಾಯಣ್ ಸೇರಿದಂತೆ ಜೆಡಿಎಸ್, ಬಿಜೆಪಿಯ ಎಲ್ಲಾ ಮುಖಂಡರು, ಕಾರ್ಯಕರ್ತರು, ರೈತಾಪಿಗಳಿಗೆ ತಾವು ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ನಾನೆಂದೂ ಕುಣಿಗಲ್ ಮತ್ತು ಮಾಗಡಿಗೆ ನೀರು ಹರಿಸಕೂಡದು ಎಂದು ಹೇಳೇ ಇಲ್ಲ. ಇಂದೂ ಹೇಳಿಲ್ಲ. ನಾಳೆಯೂ ಹೇಳಲ್ಲ. ಆದರೆ ಈಗಾಗಲೇ 3.5 ಟಿಎಂಸಿ ನೀರಿನ ಬದಲಿಗೆ ಕುಣಿಗಲ್ ಗೆ 7.5 ಟಿಎಂಸಿ ನೀರು ಹರಿದಿದೆ. ನಾನೆಂದೂ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿಲ್ಲ. ಆದರೆ ರಾಮನಗರ ಮತ್ತು ಬಿಡದಿಗೆ ನೀರು ತೆಗೆದುಕೊಂಡು ಹೋಗುವ ಹುನ್ನಾರ ನಡೆಯುತ್ತಿದೆ. ಇದಕ್ಕೆ ನಾನೆಂದೆಂದೂ ವಿರೋಧಿಯೇ. ಲಿಂಕ್ ಕೆನಾಲ್ ಮಾಡಲು ಯಾವ ಕಾರಣಕ್ಕೂ ಬಿಡುವುದಿಲ್ಲ. ಲಿಂಕ್ ಕೆನಾಲ್ ಆದರೆ ಜಿಲ್ಲೆಯ ಎಲ್ಲಾ ರೈತರ ಪಾಲಿಗೆ ಮರಣ ಶಾಸನವಾಗುತ್ತದೆ. ಹಾಗಾಗಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ತಡೆದೇ ತೀರುವೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ರಾಜೀವ್, ಜೆಡಿಎಸ್‌ ವಕ್ತಾರ ವೆಂಕಟಾಪುರ ಯೋಗೀಶ್, ಬಡಗರಹಳ್ಳಿ ತ್ಯಾಗರಾಜು, ರಂಜಿತ್, ಮಧು, ಶರತ್, ಮುನಿಯೂರು ರಂಗಸ್ವಾಮಿ ಸೇರಿದಂತೆ ಇತರರು ಇದ್ದರು.