ರೈತರಿಗೆ ಕೊಡುವ ಪರಿಹಾರದ ಹಣಕ್ಕೆ ಬಡ್ಡಿಗೆ ಬಡ್ಡಿ ಹಾಕಿ ಕೊಡಬೇಕು. ಸರ್ಕಾರ ರೈತರನ್ನು ಬೀದಿಪಾಲು ಮಾಡಬಾರದು. ರೈತರಿಗೆ ಪರಿಹಾರ ಕೊಡುವುದಕ್ಕಿಂತ ಮೊದಲು ಕಾಲುವೆಗಳಿಗೆ ನೀರು ಹರಿಸಬಾರದು. ಒಂದುವೇಳೆ ನೀರು ಹರಿಸಿದರೆ ಉಪವಾಸ ಸತ್ಯಾಗ್ರಹ ಮಾಡುವ ಎಚ್ಚರಿಕೆ ನೀಡಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಈಗಾಗಲೇ ಹೈಕೋರ್ಟ್ ಆದೇಶದಂತೆ ಪರಿಹಾರದ ಹಣ ಕೊಡುವ ಬದಲಾಗಿ ಕೆಬಿಜೆಎನ್‌ಎಲ್ ವ್ಯವಸ್ಥಾಪಕ ನಿರ್ದೇಶಕರನ್ನು ಪಾರ್ಟಿ ಮಾಡಿ (ಹೊಣೆಗಾರರನ್ನಾಗಿಸಿ) ಮತ್ತೊಮ್ಮೆ ಕೇಸ್ ನಡೆಸಿ ಎನ್ನುವುದು ಯಾವ ನ್ಯಾಯ?. ಇದನ್ನು ಗಮನಿಸಿದರೆ ಸಂತ್ರಸ್ತರಿಗೆ ಹಣ ಕೊಡಲು ಆಗದೆ ಸಮಯ ಮುಂದೂಡಿಕೆ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತಿದೆ ಎಂದು ಕೃಷ್ಣಾ ಮೇಲ್ದಂಡೆ ಯೋಜನೆ ಬಾಧಿತ ಪ್ರಕಾಶ ಅಂತರಗೊಂಡ ಹೇಳಿದರು.ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯ ಮುಳವಾಡ ಏತ ನೀರಾವರಿ ಕಾಲುವೆಗಳಿಗೆ 2013ರಲ್ಲಿ ಸುಮಾರು 55 ಸಾವಿರ ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ. ಆ ಭೂಮಿಗೆ ಜನರಲ್ ಅವಾರ್ಡ್ ಎಂದು ₹8 ರಿಂದ ₹13 ಲಕ್ಷ ಪರಿಹಾರ ಘೋಷಿಸಲಾಗಿದೆ. ಅದರೆ ಈ ಪರಿಹಾರ ಒಪ್ಪಿಕೊಳ್ಳದ ರೈತರು ಹೈಕೋರ್ಟ್‌ಗೆ ಹೋದಾಗ 2022 ಸೆ.14ರಂದು ಅವಾರ್ಡ್ ಹಣಕ್ಕೆ ನಾಲ್ಕರಿಂದ ಐದು ಪಟ್ಟು ಕೊಡಬೇಕು ಎಂದು ಆದೇಶಿಸಿದೆ. ಆದರೆ ಸರ್ಕಾರ ಆ ಹಣವನ್ನು ರೈತರಿಗೆ ಕೊಡದೆ ಇದೀಗ ಯುಕೆಪಿ ಎಂಡಿ ಅವರನ್ನು ಪಾರ್ಟಿ ಮಾಡಿಲ್ಲ, ಹಾಗಾಗಿ ಮತ್ತೊಮ್ಮೆ ಕೇಸ್ ನಡೆಸಿ ಎನ್ನುವುದು ಯಾವ ನ್ಯಾಯ ಎಂದರು.
ಸರ್ಕಾರ ಪರಿಹಾರ ಕೊಡಬಾರದು ಎಂದು ಪ್ಲಾನ್ ಮಾಡಿ ಹೀಗೆಲ್ಲ ಮಾಡುತ್ತಿದೆ. ಒಪ್ಪಿತ ಆಧಾರದ ಮೇಲೆ ತೆಗೆದುಕೊಳ್ಳುವ ರೈತರ ಭೂಮಿಗೆ ಭೂ ಸ್ವಾಧೀನವಾದಾಗಿನಿಂದ ಇಲ್ಲಿಯವರೆಗೆ ಬೆಳೆಹಾನಿಯ ಪರಿಹಾರ ಸೇರಿ ಕೊಡಬೇಕು ಎಂದರು. ಈ ಭಾಗದ ಜನಪ್ರತಿನಿಧಿಗಳು ರೈತರಿಗೆ ನ್ಯಾಯ ಕೊಡಿಸುವಲ್ಲಿ ವಿಫಲರಾಗಿದ್ದಾರೆ. ವಿಶೇಷ ಪ್ರಕರಣಗಳಲ್ಲಿ ಶೇ.100ರಷ್ಟು ಪರಿಹಾರವನ್ನು ಏಕ ಕಾಲಕ್ಕೆ ಕೊಡಬೇಕು. ಸಂತ್ರಸ್ತ ರೈತರ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದ ವರೆಗೆ ಶಿಕ್ಷಣದಲ್ಲಿ ಮೀಸಲಾತಿ ಕೊಡಬೇಕು. ರೈತರಿಗೆ ಕೊಡುವ ಪರಿಹಾರದ ಹಣಕ್ಕೆ ಬಡ್ಡಿಗೆ ಬಡ್ಡಿ ಹಾಕಿ ಕೊಡಬೇಕು. ಸರ್ಕಾರ ರೈತರನ್ನು ಬೀದಿಪಾಲು ಮಾಡಬಾರದು. ರೈತರಿಗೆ ಪರಿಹಾರ ಕೊಡುವುದಕ್ಕಿಂತ ಮೊದಲು ಕಾಲುವೆಗಳಿಗೆ ನೀರು ಹರಿಸಬಾರದು. ಒಂದುವೇಳೆ ನೀರು ಹರಿಸಿದರೆ ಉಪವಾಸ ಸತ್ಯಾಗ್ರಹ ಮಾಡುವ ಎಚ್ಚರಿಕೆ ನೀಡಿದರು.ಹಿರಿಯ ಸಾಹಿತಿ ಕೃಷ್ಣ ಕೊಲ್ಹಾರ ಕುಲಕರ್ಣಿ ಮಾತನಾಡಿ, ಕೃಷ್ಣಾ ಭಾಗ್ಯ ಜಲನಿಗಮದಿಂದ ಮೊದಲಿನಿಂದಲೂ ರೈತರಿಗೆ ಅನ್ಯಾಯವಾಗುತ್ತಲೇ ಇದೆ. ಸಾಕಷ್ಟು ಪ್ರಕರಣಗಳಲ್ಲಿ ಸಂತ್ರಸ್ತ ರೈತರಿಗೆ ಹಣ ಕೊಡಬೇಕು ಎಂದು ಆದೇಶಗಳಾಗಿದ್ದರೂ ಪರಿಹಾರಣದ ಹಣ ಕೊಟ್ಟಿಲ್ಲ. ಈಗ ಮತ್ತೆ ಇನ್ನಿಲ್ಲದ ನೆಪಗಳನ್ನು ಒಡ್ಡಿ ರೈತರಿಗೆ ಅನ್ಯಾಯ ಮಾಡುತ್ತಿದೆ. ಈಗಾಗಲೇ ಭೂಸ್ವಾಧೀನಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳನ್ನು ಪಾರ್ಟಿ ಮಾಡಿ ರೈತರು ಪ್ರಕರಣದ ಆದೇಶ ತಂದಿದ್ದಾರೆ. ಕೋರ್ಟ್ ಸೂಚನೆಯಂತೆ ಪರಿಹಾರ ಕೊಡುವ ಬದಲು ಸರ್ಕಾರ ಕೆಬಿಜೆಎನ್ಎಲ್ ಅಧಿಕಾರಿಗಳ ಮೂಲಕ ನಾಟಕೀಯ ಮಾಡುತ್ತಿದೆ. ತಕ್ಷಣ ಸಿಎಂ ಹಾಗೂ ನೀರಾವರಿ ಸಚಿವರು, ಈ ಭಾಗದ ಪ್ರತಿನಿಧಿಗಳು ಕಾಳಜಿ ವಹಿಸಿ ರೈತರಿಗೆ ಬರಬೇಕಿರುವ ಪರಿಹಾರ ಕೊಡಿಸಬೇಕು ಎಂದರು. ರಮೇಶ ದೇಸಾಯಿ, ಸುರೇಶ ಸಾರವಾಡ, ದ್ಯಾಮಣ್ಣ ನಯ್ಯಾದಾರ ಇದ್ದರು.