ಚುನಾವಣೆ ನಡೆದು ವರ್ಷ ಕಳೆದರೂ ಆಡಳಿತ ಮಂಡಳಿ ರಚನೆಯಾಗದಿರುವುದು ಬ್ಯಾಂಕ್‌ನ ಆಡಳಿತ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿದೆ.
ಲಂಚ ಪಡೆಯುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ: ರೈತ ಸಂಘ ಆಗ್ರಹ
ಕನ್ನಡಪ್ರಭ ವಾರ್ತೆ ಕೋಲಾರಪ್ರಾಮಾಣಿಕವಾಗಿ ಕೆಸಿಸಿ (ಕೃಷಿ ಸಾಲ) ಮರುಪಾವತಿ ಮಾಡಿರುವ ರೈತರಿಗೆ ಯಾವುದೇ ಷರತ್ತು ವಿಧಿಸದೆ ಕೂಡಲೇ ಬೆಳೆ ಸಾಲ ವಿತರಿಸಬೇಕು. ಸಾಲ ನೀಡಲು ರೈತರಿಂದ ಲಂಚ ಪಡೆಯುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘದಿಂದ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ ಮಾತನಾಡಿ, ಲಕ್ಷಾಂತರ ರೈತ ಕುಟುಂಬಗಳಿಗೆ ಸ್ವಾಭಿಮಾನದ ಬದುಕು ಕಲ್ಪಿಸಿರುವ ಸಹಕಾರ ಬ್ಯಾಂಕ್‌ಗಳು ರಾಜಕೀಯ ಪ್ರತಿಷ್ಠೆಗೆ ಬಲಿಯಾಗುತ್ತಿವೆ ಎಂದು ಆರೋಪಿಸಿದರು.ಚುನಾವಣೆ ನಡೆದು ವರ್ಷ ಕಳೆದರೂ ಆಡಳಿತ ಮಂಡಳಿ ರಚನೆಯಾಗದಿರುವುದು ಬ್ಯಾಂಕ್‌ನ ಆಡಳಿತ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿದೆ. ಇದರ ಲಾಭ ಪಡೆಯುತ್ತಿರುವ ಅಧಿಕಾರಿಗಳು ರೈತರ ಹೆಸರಿನಲ್ಲಿ ಸರ್ಕಾರದಿಂದ ಬರುವ ಬಡ್ಡಿ ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಆರೋಪಗಳಿವೆ. ಸಾಲ ಮರುಪಾವತಿ ಮಾಡಿರುವ ರೈತರು ಮತ್ತೆ ಬೆಳೆ ಸಾಲ ಕೇಳಿದಾಗ ನಾನಾ ನೆಪ ಹೇಳಿ ವಿಳಂಬ ಮಾಡಲಾಗುತ್ತಿದೆ ಎಂದು ದೂರಿದರು.
ರೈತ ಸಂಘದ ರಾಜ್ಯ ಮುಖಂಡ ಕಮ್ಮದಟ್ಟಿ ಚಲಪತಿ ಮಾತನಾಡಿ, ಪ್ರಭಾವಿ ವ್ಯಕ್ತಿಗಳು ಕೋಟ್ಯಂತರ ರೂಪಾಯಿ ಸಾಲ ಪಡೆದು ಮರುಪಾವತಿ ಮಾಡದಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಆದರೆ ಬಡ ರೈತರಿಗೆ ಸಾಲ ನೀಡುವಾಗ ಹಲವು ಷರತ್ತುಗಳನ್ನು ವಿಧಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮನವಿ ಸ್ವೀಕರಿಸಿದ ವ್ಯವಸ್ಥಾಪಕರು, ರೈತರಿಗೆ ಯಾವುದೇ ಷರತ್ತಿಲ್ಲದೆ ಬೆಳೆ ಸಾಲ ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ಲಂಚ ಕೇಳಿದರೆ ಲಿಖಿತವಾಗಿ ದೂರು ನೀಡುವಂತೆ ತಿಳಿಸಿದರು.
ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ತಾಲೂಕು ಅಧ್ಯಕ್ಷ ಮುದುವಾಡಿ ಚಂದ್ರಪ್ಪ, ವಕ್ಕಲೇರಿ ಹನುಮಯ್ಯ, ಸುಪ್ರೀಂ ಚಲ ಗಿರೀಶ, ತಿಮ್ಮಣ್ಣ, ರಾಜು, ನಾಗರಾಜ್ ಇದ್ದರು.