ವಿದ್ಯಾರ್ಥಿಗಳಲ್ಲಿರುವ ಆತ್ಮವಿಶ್ವಾಸ, ಏಕಾಗ್ರತೆ ಬಗ್ಗೆ ತಿಳಿದು ಅವರಲ್ಲಿ ಸಾಮರ್ಥ್ಯವನ್ನು ಹೆಚ್ಚಿಸಲು ಪಾಲಕರು ಗಮನಹರಿಸಬೇಕು

ಕನ್ನಡಪ್ರಭ ವಾರ್ತೆ ಹೊನ್ನಾವರ

ವಿದ್ಯಾರ್ಥಿಗಳಲ್ಲಿರುವ ಆತ್ಮವಿಶ್ವಾಸ, ಏಕಾಗ್ರತೆ ಬಗ್ಗೆ ತಿಳಿದು ಅವರಲ್ಲಿ ಸಾಮರ್ಥ್ಯವನ್ನು ಹೆಚ್ಚಿಸಲು ಪಾಲಕರು ಗಮನಹರಿಸಬೇಕು ಎಂದು ಎಸ್.ಡಿ.ಎಂ. ಪದವಿ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಡಾ. ಪಿ.ಎಂ. ಹೊನ್ನಾವರ ಹೇಳಿದರು.

ಪಟ್ಟಣದ ಎಂಪಿಇ ಸೊಸೈಟಿಯ ಎಸ್.ಡಿ.ಎಂ. ಪದವಿ ಪೂರ್ವ ಕಾಲೇಜಿನ ದಿ.ಆರ್.ಎಸ್. ಹೆಗಡೆ ಸಭಾಭವನದಲ್ಲಿ ಸೋಮವಾರ ಆಯೋಜಿಸಿದ್ದ ತಾಲೂಕಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ನಡೆಸಿದ್ದ ಕ್ವಿಜ್ನಿ ಪ್ಲಸ್ ಎಂಬ ಶೈಕ್ಷಣಿಕ ಪರೀಕ್ಷೆಯ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಕ್ಕಳಿಗೆ ಕೇವಲ ಅಕಾಡೆಮಿಕ್ ಶಿಕ್ಷಣ ದೊರಕಿದರೆ ಸಾಲದು. ಬೌದ್ದಿಕ ಗುಣಮಟ್ಟ ಹೆಚ್ಚಿಸುವ ಶಿಕ್ಷಣ ದೊರಕಬೇಕು. ಪ್ರತಿ ವರ್ಷ ಬರುವ ಶೈಕ್ಷಣಿಕ ಫಲಿತಾಂಶವನ್ನು ಉತ್ತಮ ರೀತಿಯಲ್ಲಿಯೇ ಕಾಯ್ದುಕೊಂಡು ಹೋಗುವ ಕೆಲಸವನ್ನು ವಿದ್ಯಾರ್ಥಿಗಳು ಮಾಡಬೇಕು. ಮಕ್ಕಳ ಭಾವನೆಯನ್ನು ಪಾಲಕರು ಸಹ ಅರ್ಥ ಮಾಡಿಕೊಳ್ಳಬೇಕು. ಸ್ಪರ್ಧೆಗಳಲ್ಲಿ ಭಾಗವಹಿಸುವ ಗುಣ ಬೆಳೆಸಿಕೊಳ್ಳಿ. ಮಕ್ಕಳನ್ನು ಆಲಸಿಗಳಾಗಲು ಬಿಡಬೇಡಿ. ಸದಾ ಉತ್ಸಾಹ ಮತ್ತು ಚಟುವಟಿಕೆಯಿಂದ ಇರುವಂತೆ ನೋಡಿಕೊಳ್ಳಬೇಕು. ಅವಕಾಶ ಕೈಗೆ ತಾನಾಗಿಯೇ ಬರುವುದಿಲ್ಲ. ಅದನ್ನು ನಾವು ಬೆನ್ನಟ್ಟಿ ಪಡೆಯಬೇಕು ಎಂದರು.

ಎಂಪಿಇ ಸೊಸೈಟಿ ಅಧ್ಯಕ್ಷ ಕೃಷ್ಣಮೂರ್ತಿ ಭಟ್ ಶಿವಾನಿ ಮಾತನಾಡಿ, ಇದು ಸ್ಫರ್ಧಾತ್ಮಕ ಯುಗ. ಕಾಂಪಿಟೇಟಿವ್ ಪರೀಕ್ಷೆಯನ್ನು ಬರೆಯಲು ನೀವು ಸಿದ್ಧರಾಗಿರಬೇಕು. ಇಂತಹ ಪರೀಕ್ಷೆಯನ್ನು ಮಾಡಿದರೆ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದರು.

ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಡಾ. ರಾಜು ಮಾಳಗಿಮನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಪರೀಕ್ಷೆಯಲ್ಲಿ ಭಾಗವಹಿಸಿ ಉತ್ತಮ ಫಲಿತಾಂಶ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು. ತಾಲೂಕಿನ ವಿವಿಧ ಹೈಸ್ಕೂಲ್ ಗಳಿಂದ ಅತಿ ಉತ್ಸಾಹದಿಂದ ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಭಾಗವಹಿಸಿದ್ದರು.ವಿದ್ಯಾರ್ಥಿಗಳಾದ ಸಿಂಚನಾ ಮತ್ತು ಶ್ರಾವಣಿ ಪ್ರಾರ್ಥಿಸಿದರು. ಕೋ-ಆರ್ಡಿನೇಟರ್ ಪ್ರಸಾದ್ ಹೆಗಡೆ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪನ್ಯಾಸಕಿ ಹೇಮಾ ಭಟ್ ವಂದಿಸಿದರು. ಉಪನ್ಯಾಸಕ ಎಂ.ಎನ್. ಅಡಿಗುಂಡಿ ನಿರೂಪಿಸಿದರು.