ರೈತರಿಗೆ ಅತ್ಯಗತ್ಯವಾಗಿ ಬೇಕಿರುವ ವಿದ್ಯುತ್ ಸಂಪರ್ಕ ಕಲ್ಪಿಸಲು ಈ ಹಿಂದೆ ಇದ್ದ ಅಕ್ರಮ – ಸಕ್ರಮ ಭಾಗ್ಯವನ್ನು ಸರ್ಕಾರ ರಾಜ್ಯದ ರೈತರಿಗೆ ಕಲ್ಪಿಸಿ ಕೊಡಬೇಕು ಎಂದು ತಾಲೂಕಿನ ಯುವ ರೈತ ಮುಖಂಡ ದೊಂಬರನಹಳ್ಳಿ ತೀರ್ಥಕುಮಾರ್ ಮುಖ್ಯಮಂತ್ರಿಗಳಲ್ಲಿ ವಿನಂತಿ ಮಾಡಿದರು.
ಕನ್ನಡಪ್ರಭ ವಾರ್ತೆ ತುರುವೇಕೆರೆ
ರೈತರಿಗೆ ಅತ್ಯಗತ್ಯವಾಗಿ ಬೇಕಿರುವ ವಿದ್ಯುತ್ ಸಂಪರ್ಕ ಕಲ್ಪಿಸಲು ಈ ಹಿಂದೆ ಇದ್ದ ಅಕ್ರಮ – ಸಕ್ರಮ ಭಾಗ್ಯವನ್ನು ಸರ್ಕಾರ ರಾಜ್ಯದ ರೈತರಿಗೆ ಕಲ್ಪಿಸಿ ಕೊಡಬೇಕು ಎಂದು ತಾಲೂಕಿನ ಯುವ ರೈತ ಮುಖಂಡ ದೊಂಬರನಹಳ್ಳಿ ತೀರ್ಥಕುಮಾರ್ ಮುಖ್ಯಮಂತ್ರಿಗಳಲ್ಲಿ ವಿನಂತಿ ಮಾಡಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಹತ್ತು ಹಲವಾರು ಭಾಗ್ಯಗಳನ್ನು ನೀಡಿರುವ ನೀವು ರೈತರ ಜೀವನಾಡಿಯಾಗಿರುವ ನೀರಿನ ಸೌಲಭ್ಯಕ್ಕಾಗಿ ಅಕ್ರಮ ಸಕ್ರಮ ಭಾಗ್ಯವನ್ನು ಜಾರಿಗೊಳಿಸಿ. ಕೂಡಲೇ ಅಕ್ರಮ ಸಕ್ರಮ ಯೋಜನೆಯಡಿ ಎಲ್ಲಾ ಪಂಪ್ ಸೆಟ್ ಗಳನ್ನು ಖಾತ್ರಿಗೊಳಿಸಿ. ರೈತರನ್ನು ಉಳಿಸಿ. ಬೆಸ್ಕಾಂ ಇಲಾಖೆಯ ಅಕ್ರಮ ಸಕ್ರಮ ಯೋಜನೆಯಡಿಯಲ್ಲಿ ರೈತರ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕದ ಜೊತೆಗೆ ಹೊಸ ಟ್ರಾನ್ಸ್ ಫಾರ್ಮರ್ ಗಳನ್ನು ಅಳವಡಿಸಿಕೊಡುವ ಯೋಜನೆಯನ್ನು ಸರ್ಕಾರ ಮತ್ತೆ ಜಾರಿ ಮಾಡಬೇಕು.
ಈ ಹಿಂದಿನ ಸರ್ಕಾರದಲ್ಲಿ ಅಕ್ರಮ ಸಕ್ರಮ ಯೋಜನೆಯಡಿ ರೈತರು ತಮ್ಮ ಕೊಳವೆ ಬಾವಿಗಳಿಗೆ ಸ್ವಂತವಾಗಿ ಟ್ರಾನ್ಸ್ ಫಾರ್ಮರ್ ಗಳನ್ನು ಅಳವಡಿಸಿಕೊಳ್ಳವ ಮೂಲಕ ವಿದ್ಯುತ್ ಸಂಪರ್ಕ ಪಡೆಯುವ ಯೋಜನೆ ಜಾರಿ ಇತ್ತು. ಆಸಕ್ತ ರೈತರು ಬೆಸ್ಕಾಂ ಇಲಾಖೆಗೆ ಸುಮಾರು 30 ಸಾವಿರ ರುಗಳನ್ನು ಕಟ್ಟಿ ತಮ್ಮ ಬೋರ್ ವೆಲ್ ಗೆ ಟಿ.ಸಿ ಗಳನ್ನು ಪಡೆಯುತ್ತಿದ್ದರು. ಆದರೆ ಪ್ರಸ್ತುತ ಸರ್ಕಾರ ರೈತರಿಗೆ ಅಕ್ರಮ ಸಕ್ರಮ ಯೋಜನೆಯಲ್ಲಿ ಟಿ.ಸಿ.ಗಳನ್ನು ಪಡೆಯುವ ಯೋಜನೆ ರದ್ದು ಮಾಡಿದೆ. ಇದರಿಂದ ಲಕ್ಷಾಂತರ ರೂಪಾಯಿ ವ್ಯಯಿಸಿ ಬೋರ್ ವೆಲ್ ಮತ್ತು ಟಿಸಿ ಪಡೆಯಲು ರೈತ ಅಸಹಾಯಕನಾಗಿದ್ದಾನೆ. ಸಮರ್ಪಕ ವಿದ್ಯುತ್ ಸಿಗದೇ ರೈತರು ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ಬಹಳ ಕಷ್ಟ ಪಡುವಂತಾಗಿದೆ. ಬಹುಪಾಲು ರೈತರು ಹೈನುಗಾರಿಕೆ ಅವಲಂಬಿತರಾಗಿದ್ದಾರೆ. ತಮ್ಮ ರಾಸುಗಳಿಗೆ ಮೇವು ಬೆಳೆದುಕೊಳ್ಳಲೂ ಸಹ ನೀರಿನ ಕೊರತೆ ಕಾಡುತ್ತಿದೆ. ಆದ್ದರಿಂದ ಬೆಸ್ಕಾಂ ಇಲಾಖೆ ರೈತರಿಗೆ ಸಮರ್ಪಕ ವಿದ್ಯುತ್ ನೀಡಬೇಕು. ಅಕ್ರಮ ಸಕ್ರಮ ಯೋಜನೆಯನ್ನು ಸರ್ಕಾರ ಮುಂದುವರೆಸಬೇಕು ಎಂದರು. ಈ ಹಿಂದೆ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ರವರ ಹಾವಳಿ ಅತಿಯಾಗಿದ್ದ ವೇಳೆ ಸರ್ಕಾರ ಸಾಕಷ್ಟು ಎಚ್ಚರಿಕೆ ನೀಡಿದ್ದರ ಫಲವಾಗಿ ಸ್ವಲ್ಪ ದಿನಗಳ ಕಾಲ ಮೈಕ್ರೋ ಫೈನಾನ್ಸ್ ರವರ ಕಾಟ ಕಡಿಮೆಯಾಗಿತ್ತು. ಆದರೆ ಈಗ ಮೈಕ್ರೋ ಫೈನಾನ್ಸ್ ರವರು ಈ ಹಿಂದೆ ರೈತರಿಂದ ಪಡೆದಿದ್ದ ಬ್ಲಾಂಕ್ ಚೆಕ್ ಗಳನ್ನು ನ್ಯಾಯಾಲಯಕ್ಕೆ ಹಾಕುವ ಮೂಲಕ ಬೆದರಿಕೆ ಒಡ್ಡಿ ಹಣ ವಸೂಲಾತಿಗೆ ನಿಂತಿದ್ದಾರೆ. ಇದೊಂದು ರೀತಿ ಬ್ಲಾಕ್ ಮೇಲ್ ತಂತ್ರ. ಇತ್ತ ಸರಿಯಾಗಿ ವಿದ್ಯುತ್ ಇಲ್ಲದೇ ಬೆಳೆ ಬೆಳೆಯಲಾರದೇ ರೈತ ಸಂಕಷ್ಠದಲ್ಲಿದ್ದಾನೆ. ಈ ಸಂದರ್ಭದಲ್ಲಿ ಮೈಕ್ರೋ ಫೈನಾನ್ಸ್ ರವರ ಹಣವನ್ನು ಕೊಡುವುದಾದರೂ ಹೇಗೆ ಎಂಬ ಚಿಂತೆ ರೈತರಲ್ಲಿ ಕಾಡುತ್ತಿದೆ. ಮೈಕ್ರೋ ಫೈನಾನ್ಸ್ ರವರು ನ್ಯಾಯಾಲಯದಲ್ಲಿ ದಾವೆ ಹೂಡಿ ರೈತರನ್ನು ನ್ಯಾಯಾಲಯಕ್ಕೆ ಅಲೆಯುವಂತೆ ಮಾಡಿದ್ದಾರೆಂದು ತೀರ್ಥಕುಮಾರ್ ದೂರಿದರು. ಗೋಷ್ಟಿಯಲ್ಲಿ ಸೋಮೇನಹಳ್ಳಿ ರವಿ, ಶಿವಕುಮಾರ್, ನವೀನ್ ಕುಮಾರ್, ತಿಮ್ಮೇಗೌಡ ಇದ್ದರು.