ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಕುಡಿಯುವ ನೀರಿನ ಪೂರೈಕೆಗಾಗಿ ಕೊರೆಯುವ ಹೊಸ ಕೊಳವೆ ಬಾವಿಗಳಿಗೆ ಅತಿ ತುರ್ತಾಗಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಉನ್ನತ ಶಿಕ್ಷಣ ಸಚಿವರ ಡಾ.ಎಂ.ಸಿ.ಸುಧಾಕರ್ ಬೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ “ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ”ದ ರಾಜ್ಯ ಮಟ್ಟದ ಅಧಿಕಾರಿಗಳೊಂದಿಗೆ “ಬೆಸ್ಕಾಂ ಕುಂದುಕೊರತೆಗಳ ಸಭೆ ನಡೆಸಿ ಅಗತ್ಯ ಸಲಹೆ ನೀಡಿದರು.ಕೊಳವೆ ಬಾವಿಗೆ ವಿದ್ಯುತ್ ಕಲ್ಪಿಸಿ
ಈ ವರ್ಷ ಮಳೆ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಬರಪರಿಸ್ಥಿತಿ ಎದುರಾಗಿದೆ. ಕುಡಿಯುವ ನೀರು ಪೂರೈಕೆಗೆ ಕೊಳವೆ ಬಾವಿ ಕೊರೆಯುವ ಅನಿವಾರ್ಯತೆ ಕೆಲವೆಡೆ ನಿರ್ಮಾಣ ಆಗಿದೆ ಅಂತಹ ನೂತನ ಕೊಳವೆ ಬಾವಿಗಳಿಗೆ ಅತಿ ತುರ್ತಾಗಿ ವಿದ್ಯುತ್ ಸಂಪರ್ಕ ನೀಡುವ ಕಾರ್ಯವನ್ನು ಬೆಸ್ಕಾಂ ಅಧಿಕಾರಿಗಳು, ಸಿಬ್ಬಂದಿ ಆದ್ಯತೆ ಮೇಲೆ ಮಾಡಬೇಕು. ಜಿಲ್ಲೆಯಲ್ಲಿ ವಿದ್ಯುತ್ ಸಂಪರ್ಕ ಕೋರಿ 1,842 ಅರ್ಜಿಗಳು ಪ್ರಸ್ತುತ ಬಂದಿದ್ದು ಆ ಅರ್ಜಿಗಳನ್ನು ಆಧ್ಯತೆ ಮೇಲೆ ವಿಲೆವಾರಿ ಮಾಡಿ ರೈತರಿಗೆ ಅನುಕೂಲ ಮಾಡಬೇಕು ಎಂದರು.ಸುರಕ್ಷತೆ ದೃಷ್ಟಿಯಿಂದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ಎಲ್ಲಾ ಕಬ್ಬಿಣದ ವಿದ್ಯುತ್ ಕಂಬಗಳನ್ನು ತೆರವುಗೊಳಿಸಬೇಕು, ಜಿಲ್ಲೆಯ ಕೃಷಿ ಪಂಪ್ ಸೆಟ್ ಗಳಿಗೆ ಸರ್ಕಾರದ ನಿಗದಿ ಮಾಡಿರುವಂತೆ 3 ಫೇಸ್ ವಿದ್ಯುತ್ ಅನ್ನು ಯಾವುದೇ ಅಡಚಣೆ ಇಲ್ಲದೆ ಸರಬರಾಜು ಮಾಡಬೇಕು. ರೈತರು ಸಾಧ್ಯವಾದಷ್ಟೂ ಅಕ್ರಮ ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಿ ಅಧಿಕೃತ ವಿದ್ಯುತ್ ಸಂಪರ್ಕ ಪಡೆಯಬೇಕು ಎಂದರು.
ಕೃಷಿ ಪಂಪ್‌ಸೆಟ್ ಅಕ್ರಮ ಸಕ್ರಮಜಿಲ್ಲೆಯಲ್ಲಿ ಅಕ್ರಮ ಸಕ್ರಮದಡಿ ಒಟ್ಟು 1,842 ಅರ್ಜಿಗಳು ಬಂದಿದ್ದು, ಈ ಪೈಕಿ 457 ಅರ್ಜಿಗಳನ್ನು ವಿಲೇವಾರಿ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಉಳಿದ ಅರ್ಜಿಗಳನ್ನು ಹಂತ ಹಂತವಾಗಿ ವಿಲೇವಾರಿ ಮಾಡಲು ಕ್ರಮವಹಿಸಬೇಕು. ರೈತರ ಕೃಷಿ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡಲು ಸರ್ಕಾರ ಪ್ರತಿ ವರ್ಷ 4,000 ಕೋಟಿ ರುಪಾಯಿ ಖರ್ಚು ಮಾಡುತ್ತಿದೆ ಎಂದು ತಿಳಿಸಿದರು. ಬೆಸ್ಕಾಂ ಅಧಿಕಾರಿಗಳಿಗೆ ತರಾಟೆ
ಚಿಂತಾಮಣಿ ನಗರದಲ್ಲಿ 2013ರಲ್ಲಿ ಮಂಜೂರಾಗಿದ್ದ ಭೂಮಿಯ ಒಳ ವಿದ್ಯುತ್ ಕೇಬಲ್ ಅಳವಡಿಸುವ ಯೋಜನೆಯ ಹಣ 2015 ರಲ್ಲಿ ಕೇಬಲ್ ಅಳವಡಿಸದೆ ಹಣ ದುರ್ಬಳಕೆ ಆರೋಪ ದ ವಿಷಯಕ್ಕೆ ಬೆಸ್ಕಾಂ ಅಧಿಕಾರಿಗಳನ್ನು ಸಭೆಯಲ್ಲಿಯೇ ಸಚಿವ ಸುಧಾಕರ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಬೆಸ್ಕಾಂ ಇಲಾಖೆಯಲ್ಲಿ ಮೊಟ್ಟಮೊದಲ ಬಾರಿ ಭೂಮಿ ಒಳಗಡೆ ಕೇಬಲ್ ಅಳವಡಿಸಿದ್ದೆ ನಾನು. ನಾನು ಸೋತ ಮೇಲೆ ಕೇಬಲ್ ಮಾಯ ಆಗೋಯ್ತು .ಹಣ ಮಾತ್ರ ಗುತ್ತಿಗೇದಾರರ ಖಾತೆಗೆ ಜಮಾ ಆಗೋಯ್ತು ಎಂದು ಟೀಕಿಸಿದರು. ಕುಸುಮ ಯೋಜನೆಗೆ ಜಮೀನು ನೀಡಿ
ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಂತೇಶ್ ಬೀಳಗಿ ಮಾತನಾಡಿ, ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಕುಸುಮ ಯೋಜನೆಯಡಿ ರೈತರ ಕೃಷಿ ಪಂಪ್ ಸೆಟ್ ಗಳಿಗೆ ಸೌರವಿದ್ಯುತ್ ಮೂಲಕ ವಿದ್ಯುತ್ ಪೂರೈಸಲು ಜಿಲ್ಲೆಯಾದ್ಯಂತ ವಿವಿಧೆಡೆ ಉಪ ಠಾಣೆಗಳನ್ನು ನಿರ್ಮಿಸಲು ಜಮೀನಿನ ಅಗತ್ಯತೆ ಇದ್ದು, ಈ ಕಾರ್ಯಕ್ಕಾಗಿ ಜಮೀನು ಒದಗಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡುವಂತೆ ಸಚಿವರನ್ನು ಕೋರಿದರು.ಸಭೆಯಲ್ಲಿ ಸಂಸದ ಬಿ.ಎನ್.ಬಚ್ಚೇಗೌಡ, ಶಾಸಕರುಗಳಾದ ಎಸ್.ಎನ್.ಸುಬ್ಬಾರೆಡ್ಡಿ, ಕೆ.ಹೆಚ್. ಪುಟ್ಟಸ್ವಾಮಿ ಗೌಡ, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ ಮತ್ತಿತರ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.