ಸಾರಾಂಶ
ಚಳ್ಳಕೆರೆ ತಾಲೂಕಿನ ಹಿರೇಹಳ್ಳಿ ಗ್ರಾಪಂ ವ್ಯಾಪ್ತಿಯ ನರೇಗಾ ಕಾಮಗಾರಿಯನ್ನು ವೀಕ್ಷಿಸಿದ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಡಾ.ಎಸ್.ಆಕಾಶ್.
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಗ್ರಾಮೀಣ ಭಾಗದ ಕೂಲಿ ಕಾರ್ಮಿಕರಿಗೆ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಉದ್ಯೋಗ ಒದಗಿಸಿ ಅವರ ಬದುಕಿಗೆ ನೆರವಾಗಬೇಕು. ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು ಹಾಗೂ ಯಂತ್ರದ ಬಳಕೆಯನ್ನು ಸಂಪೂರ್ಣವಾಗಿ ನಿಯಂತ್ರಿಸಬೇಕೆಂದು ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಎಸ್.ಆಕಾಶ್ ತಿಳಿಸಿದರು.ತಾಲೂಕಿನ ಹಿರೇಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆಯ ನರೇಗಾದಡಿ ಕೈಗೊಂಡ ಚೆಕ್ ಡ್ಯಾಂ ನಿರ್ಮಾಣ, ಕರೆ ಹೂಳೆತ್ತುವುದು, ಗೊಕಟ್ಟೆ ಮುಂತಾದ ಕಾಮಗಾರಿಗಳು ಅನುಷ್ಠಾನದಲ್ಲಿದ್ದು ಅವುಗಳನ್ನು ವೀಕ್ಷಿಸಿ ಕೂಲಿ ಕಾರ್ಮಿಕರೊಂದಿಗೆ ವಾಸ್ತವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಶಶಿಧರ ಮಾತನಾಡಿ, ಸರ್ಕಾರ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರಿಗೆ ಕೂಲಿ ಜತೆಗೆ ಕೆಲಸವನ್ನು ನೀಡಿ ಅವರ ಬದುಕಿಗೆ ಸಹಕಾರ ನೀಡುತ್ತಲ್ಲದೆ, ಗ್ರಾಮೀಣ ಭಾಗದ ಕೂಲಿಕಾರ್ಮಿಕರು ವಲಸೆ ಹೋಗುವುದನ್ನು ನಿಯಂತ್ರಿಸಲು ಈ ಯೋಜನೆ ಸಹಕಾರಿಯಾಗಿದೆ. ಸರ್ಕಾರದಿಂದ ಬರುವ ಎಲ್ಲಾ ಕಾಮಗಾರಿಗಳನ್ನು ಕೂಲಿ ಕಾರ್ಮಿಕರ ಮೂಲಕ ಕೈಗೊಳ್ಳಲಾಗುತ್ತದೆ ಎಂದರು. ಗ್ರಾಪಂ ಅಧ್ಯಕ್ಷ ರಾಜಣ್ಣ, ಪಿಡಿಒ ನರಸಿಂಹಪ್ಪ, ಸಿಆರ್‌ಪಿ ಎನ್.ಮಾರಣ್ಣ, ಪಂಚಾಯಿತಿ ಕಾರ್ಯದರ್ಶಿ ಉಪಸ್ಥಿತರಿದ್ದರು.