ಗ್ರಾಮೀಣ ಭಾಗದಲ್ಲಿ ಮಾನವ ದಿನಗಳ ಸೃಜನೆ ಹೆಚ್ಚಿಸಲು ವಿಬಿಜಿ-ರಾಮ್ ಜಿ ಯೋಜನೆಯಡಿ ಕೆಲಸಕ್ಕೆ ಸಿದ್ಧರಿರುವ ಕೂಲಿಕಾರರಿಗೆ ಎರಡು ದಿನಗಳೊಳಗೆ ಉದ್ಯೋಗ ಒದಗಿಸಬೇಕು.
ಕನ್ನಡಪ್ರಭ ವಾರ್ತೆ ಗಜೇಂದ್ರಗಡ
ಗ್ರಾಮೀಣ ಭಾಗದಲ್ಲಿ ಮಾನವ ದಿನಗಳ ಸೃಜನೆ ಹೆಚ್ಚಿಸಲು ವಿಬಿಜಿ-ರಾಮ್ ಜಿ ಯೋಜನೆಯಡಿ ಕೆಲಸಕ್ಕೆ ಸಿದ್ಧರಿರುವ ಕೂಲಿಕಾರರಿಗೆ ಎರಡು ದಿನಗಳೊಳಗೆ ಉದ್ಯೋಗ ಒದಗಿಸಬೇಕು ಎಂದು ಜಿಪಂ ಸಿಇಓ ಮುಕುಲ್ ಜೈನ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ತಾಲೂಕಿನ ಮಾರನಬಸರಿ ಗ್ರಾಮ ಪಂಚಾಯಿತಿಗೆ ಬುಧವಾರ ಭೇಟಿ ನೀಡಿದ ಅವರು, ಮನೆ ಮನೆಗೆ ತೆರಳಿ ಜನರೊಂದಿಗೆ ನೇರವಾಗಿ ಚರ್ಚಿಸಿ ಉದ್ಯೋಗದ ಬೇಡಿಕೆ ಪರಿಶೀಲಿಸಿದರು. ತಕ್ಷಣ ಕೆಲಸಕ್ಕೆ ಬರಲು ಸಿದ್ಧರಿರುವ ಕುಟುಂಬಗಳನ್ನು ಗುರುತಿಸಿ ಸ್ಥಳೀಯವಾಗಿಯೇ ಕೆಲಸ ನೀಡುವಂತೆ ಪಿಡಿಒಗಳಿಗೆ ತಾಕೀತು ಮಾಡಿದರು.
ಇದೇ ವೇಳೆ ಕ್ರಿಯಾ ಯೋಜನೆಯಡಿ ಅನುಮೋದನೆಗೊಂಡ ಅಂಗನವಾಡಿ ಕಾಂಪೌಂಡ್, ಚರಂಡಿ, ಸಿಸಿ ರಸ್ತೆ ಹಾಗೂ ಆಟದ ಮೈದಾನ ನಿರ್ಮಾಣ ಸೇರಿದಂತೆ ಸಮುದಾಯ ಹಾಗೂ ವೈಯಕ್ತಿಕ ಕಾಮಗಾರಿಗಳನ್ನು ವಿಳಂಬವಿಲ್ಲದೆ ಆರಂಭಿಸಲು ಸೂಚಿಸಿದರು. ಉದ್ಯೋಗ ಚೀಟಿ, ಕೂಲಿ ಪಾವತಿ, ಆಸ್ತಿ ತೆರಿಗೆ ನೋಟಿಸ್ ವಿತರಣೆ ಕುರಿತು ಪರಿಶೀಲಿಸಿ, ಎರಡು ದಿನಗಳಲ್ಲಿ ಸಮಗ್ರ ವರದಿ ನೀಡುವಂತೆ ನಿರ್ದೇಶಿಸಿದರು.ಬಳಿಕ ರಾಜೂರು ಗ್ರಾಪಂ ವ್ಯಾಪ್ತಿಯ ದಿಂಡೂರು ಗ್ರಾಮದಲ್ಲಿ ಬೂದು ನೀರು ನಿರ್ವಹಣಾ ಕಾಮಗಾರಿ ಪರಿಶೀಲಿಸಿ, ಸ್ಥಳೀಯರ ಸಮಸ್ಯೆಗಳಿಗೆ ಸ್ಪಂದಿಸಿದರು. ನಂತರ ಪ್ರೌಢಶಾಲೆಗೆ ಭೇಟಿ ನೀಡಿ 10ನೇ ತರಗತಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಶೈಕ್ಷಣಿಕ ಪ್ರಗತಿಯ ಮಾಹಿತಿ ಪಡೆದರು.
ಈ ಸಂದರ್ಭ ಜಿಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಯೋಜನಾ ನಿರ್ದೇಶಕ ಎಂ.ವಿ. ಚಳಿಗೇರಿ, ತಾಪಂ ಇಒ ಚಂದ್ರಶೇಖರ ಬಿ. ಕಂದಕೂರ, ವಿಬಿಜಿ-ರಾಮ್-ಜಿ ಜಿಲ್ಲಾ ಕಾರ್ಯಕ್ರಮ ಸಂಯೋಜಕ ಕಿರಣಕುಮಾರ್ ಎಸ್. ಎಚ್., ಪಿಡಿಒಗಳಾದ ಶರಣಪ್ಪ ನರೇಗಲ್, ವಿಲಾಸ ಲಮಾಣಿ ಹಾಗೂ ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು.ಗ್ರಾಮೀಣ ಭಾಗದ ಜನರಿಗೆ ಸ್ಥಳೀಯವಾಗಿಯೇ ನಿರಂತರ ಕೆಲಸ ನೀಡಿ ಅವರ ಕೈಗೆ ದುಡಿಮೆ ಒದಗಿಸುವುದು ನಮ್ಮ ಮೊದಲ ಆದ್ಯತೆ. ದುಡಿಯುವ ಕೈಗಳಿಗೆ ಸಕಾಲದಲ್ಲಿ ಉದ್ಯೋಗ ಸಿಕ್ಕಾಗ ಮಾತ್ರ ಯೋಜನೆ ಸಾರ್ಥಕವಾಗುತ್ತದೆ. ಹೀಗಾಗಿ, ಕೆಲಸಕ್ಕೆ ಸಿದ್ಧವಿರುವ ಕಾರ್ಮಿಕರನ್ನು ಯಾವುದೇ ಕಾರಣಕ್ಕೂ ಕಾಯಿಸದೇ ತಕ್ಷಣ ಕಾಮಗಾರಿ ಆರಂಭಿಸಿ ಉದ್ಯೋಗ ಕಲ್ಪಿಸಬೇಕು.
ಮುಕುಲ್ ಜೈನ್, ಸಿಇಒ, ಜಿಲ್ಲಾ ಪಂಚಾಯಿತಿ ಗದಗ