ಸಾರಾಂಶ
- ಬಡಾವಣೆಯ ನಾಗರೀಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎಂ.ಆರ್.ರಾಜಯೋಗಿ ಹೆಬ್ಬಾಳ್ ಒತ್ತಾಯ
- - -- ಬಸ್ ಸೌಲಭ್ಯ, ಸಿಸಿಟಿವಿ ಕ್ಯಾಮೆರಾ, ಪೊಲೀಸ್ ಗತ್ತು ನಿಗದಿಗೆ ಮನವಿ
- ರಸ್ತೆ ಬದಿ ಚರಂಡಿಗಳು ಕಸ-ಕಡ್ಡಿ, ಕಳೆಗಿಡಗಳಿಂದ ತುಂಬಿ, ಕೊಳಚೆ ನೀರು ಸಂಗ್ರಹ- 6 ವಿಶಾಲ ಪಾರ್ಕ್‌ಗಳಲ್ಲೂ ಮುಳ್ಳು, ಕಾಡು ಗಿಡಗಳು ಬೆಳೆದು ವಿಷಜಂತುಗಳ ಕಾಟ ಹೆಚ್ಚಳ
- ಆಸ್ಪತ್ರೆ, ಬ್ಯಾಂಕ್, ಎಟಿಎಂ, ಗ್ರಂಥಾಲಯ, ಸಿಟಿ ಬಸ್, ಆಟ ಮೈದಾನದ ವ್ಯವಸ್ಥೆ ಕಲ್ಪಿಸಬೇಕು- - -
ಕನ್ನಡಪ್ರಭ ವಾರ್ತೆ ದಾವಣಗೆರೆನಗರದ ಜೆ.ಎಚ್.ಪಟೇಲ್ ಬಡಾವಣೆ ಸಾಕಷ್ಟು ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ತಕ್ಷಣವೇ ಅಗತ್ಯ ಸೌಲಭ್ಯಗಳ ಕಲ್ಪಿಸುವಂತೆ ಜೆ.ಎಚ್.ಪಟೇಲ್ ಬಡಾವಣೆ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎಂ.ಆರ್.ರಾಜಯೋಗಿ ಹೆಬ್ಬಾಳ್ ಪಾಲಿಕೆಗೆ ಒತ್ತಾಯಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡಾವಣೆಯ ರಸ್ತೆಗಳು ಗುಂಡಿಬಿದ್ದಿವೆ, ಬೀದಿದೀಪಗಳು ಸಂಪೂರ್ಣ ಹಾಳಾಗಿವೆ. ಮಕ್ಕಳು, ಮಹಿಳೆಯರು, ವಿದ್ಯಾರ್ಥಿನಿಯರು, ವೃದ್ಧರು ಕತ್ತಲಿನಲ್ಲೇ ಸಂಚರಿಸುವ ದುಸ್ಥಿತಿ ನಿರ್ಮಾಣವಾಗಿದೆ. ಪಟೇಲ್ ಬಡಾವಣೆಗೆ ನಗರ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಡಳಿತ, ಕೆಎಸ್‌ಆರ್‌ಟಿಸಿಗೆ ಮೊದಲಿನಿಂದಲೂ ಮನವಿ ಮಾಡುತ್ತಿದ್ದೇವೆ. ಆದರೆ, ಸ್ಪಂದನೆ ಇಲ್ಲ ಎಂದು ದೂರಿದರು.ಇಲ್ಲಿನ ನಿವಾಸಿಗಳು ಆಟೋ ರಿಕ್ಷಾಗಳನ್ನೇ ಅವಲಂಬಿಸಬೇಕಾಗಿದೆ. ನಗರ ಸಾರಿಗೆ ಬಸ್‌ಗಳು ಶಾಬನೂರುವರೆಗೆ ಮಾತ್ರ ಬಂದುಹೋಗುತ್ತವೆ. ಅವುಗಳ ಸಂಚಾರ ಪಟೇಲ್ ಬಡಾವಣೆಗೂ ವಿಸ್ತರಿಸಬೇಕು. ಶಾಲೆ, ಕಾಲೇಜು, ಹಾಸ್ಟೆಲ್ ಸಹ ಪಟೇಲ್ ಬಡಾವಣೆಯಲ್ಲಿವೆ. ಆದ್ಯತೆ ಮೇಲೆ ಸಿಟಿ ಬಸ್ ಸೇವೆ ಕಲ್ಪಿಸಬೇಕು ಎಂದರು.
ಬಡಾವಣೆಯ ರಸ್ತೆಗಳ ಬದಿಯ ಚರಂಡಿಗಳು ಕಸ- ಕಡ್ಡಿಗಳು, ಗಿಡಗಳಿಂದ ತುಂಬಿಕೊಂಡಿವೆ. ಕೊಳಚೆ ನೀರು ತುಂಬಿದೆ. ಸ್ವಚ್ಛಗೊಳಿಸಬೇಕು. ಪಟೇಲ್ ಬಡಾವಣೆಯನ್ನು ದೂಡಾ ನಗರ ಪಾಲಿಕೆಗೆ ವರ್ಗಾಯಿಸಿದೆ. ಸ್ಥಳದಲ್ಲೇ ಇ-ಸ್ವತ್ತು ಆಂದೋಲನ ಸಹ ಮಾಡಲಾಗಿದೆ. ಅಭಿವೃದ್ಧಿ ಮಾತ್ರ ನನೆಗುದಿಗೆ ಬಿದ್ದಿದೆ ಎಂದು ತಿಳಿಸಿದರು.ಅಭಿವೃದ್ಧಿ ನಿಧಿ ಶುಲ್ಕವೆಂದು ₹8050 ಕಟ್ಟಿಸಿಕೊಳ್ಳಲಾಗಿದೆ. ಇ-ಸ್ವತ್ತು ಸೇವೆ ಮಂದಗತಿಯಲ್ಲಿದೆ. ಸಾರ್ವಜನಿಕರು ಕಚೇರಿಯಿಂದ ಕಚೇರಿಗಳಿಗೆ ಅಲೆಯುವಂತಹ ಪರಿಸ್ಥಿತಿ ಬಂದಿದೆ. ಇ-ಸ್ವತ್ತು ಆಂದೋಲನವನ್ನು ಪಟೇಲ್ ಬಡಾವಣೆಯಲ್ಲೇ ಮಾಡಿ, ಸ್ಥಳದಲ್ಲೇ ಇ-ಸ್ವತ್ತು ನೀಡಲು ಪಾಲಿಕೆ ಆಯುಕ್ತರು ಕ್ರಮ ಕೈಗೊಳ್ಳಬೇಕು. ಬೀದಿದೀಪಗಳ ವ್ಯವಸ್ಥೆ ಸರಿಪಡಿಸಿ, ಮೂಲ ಸೌಕರ್ಯಗಳನ್ನು ಕಲ್ಪಿಸುವ ಕೆಲಸ ಪಾಲಿಕೆ ಮಾಡಬೇಕು ಎಂದು ಆಗ್ರಹಿಸಿದರು.
ಪಟೇಲ್ ಬಡಾವಣೆಯಲ್ಲಿ 6 ವಿಶಾಲ ಪಾರ್ಕ್ ಇವೆ. ಆದರೆ, ಮುಳ್ಳು ಗಿಡಗಳು, ಕಾಡು ಗಿಡಗಳು ಬೆಳೆದು, ಪಾರ್ಕ್‌ಗಳು ಹಾಳಾಗುತ್ತಿವೆ. ವಿಷಜಂತುಗಳು ಪಾರ್ಕ್‌ಗಳಲ್ಲಿ, ಬಡಾವಣೆಯಲ್ಲಿ ಕಾಣಿಸಿಕೊಳ್ಳುತ್ತಿವೆ. ಪಾರ್ಕ್‌ಗಳ ನಿರ್ವಹಣೆಯನ್ನು ಸಂಘ-ಸಂಸ್ಥೆಗಳು, ಸ್ಥಳೀಯ ನಾಗರೀಕರಿಗಾದರೂ ಪಾಲಿಕೆ ವಹಿಸಲಿ ಎಂದು ಸಲಹೆ ನೀಡಿದರು.ಪಟೇಲ್ ಬಡಾವಣೆ ನಗರ ವ್ಯಾಪ್ತಿಗೊಳಪಟ್ಟಿದೆ. ಆದರೂ, ಇಂದಿಗೂ ಗ್ರಾಮೀಣ ವಿದ್ಯುತ್ ಸಂಪರ್ಕವಿರುವ ಕಾರಣಕ್ಕೆ ನಿರಂತರ ವಿದ್ಯುತ್ ಕಣ್ಣಾಮುಚ್ಚಾಲೆ ಆಡುತ್ತದೆ. ಆಸ್ಪತ್ರೆ, ಬ್ಯಾಂಕ್, ಎಟಿಎಂ, ಗ್ರಂಥಾಲಯ, ಸಿಟಿ ಬಸ್, ಆಟ ಮೈದಾನದ ವ್ಯವಸ್ಥೆ ಕಲ್ಪಿಸಬೇಕು. ಸರಗಳ್ಳರು, ಮನೆಗಳ್ಳರ ಹಾವಳಿ ಕಾಣಿಸಿಕೊಳ್ಳುತ್ತಿದೆ. ಆದ್ದರಿಂದ ಸೂಕ್ತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು, ಪೊಲೀಸ್ ಬೀಟ್ ಸಿಸ್ಟಂ ಹೆಚ್ಚಿಸಬೇಕು. ಚರಂಡಿ, ಒಳಚರಂಡಿ ವ್ಯವಸ್ಥೆ ಸರಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಎಂ.ಆರ್.ರಾಜಯೋಗಿ ಹೆಬ್ಬಾಳ್ ಮನವಿ ಮಾಡಿದರು.
ಸಮಿತಿ ಉಪಾಧ್ಯಕ್ಷ ಕೆ.ಎಚ್.ಹನುಮಂತಪ್ಪ, ಪ್ರಧಾನ ಕಾರ್ಯದರ್ಶಿ ವಿ.ಗಣೇಶ ಕೇರಂ, ಟಿ.ಗುರುಮೂರ್ತಿ, ಜಗದೀಶ, ವಸಂತಕುಮಾರ, ಮಲ್ಲಿಕಾರ್ಜುನ ಹಲಸಂಗಿ ಇತರರು ಇದ್ದರು.- - - -2ಕೆಡಿವಿಜಿ3.ಜೆಪಿಜಿ:
ದಾವಣಗೆರೆಯಲ್ಲಿ ಸೋಮವಾರ ಜೆ.ಎಚ್.ಪಟೇಲ್ ಬಡಾವಣೆ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎಂ.ಆರ್. ರಾಜಯೋಗಿ ಹೆಬ್ಬಾಳ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.