ಸಫಾಯಿ ಕರ್ಮಚಾರಿಗಳಿಗಿರುವ ಸೌಲಭ್ಯ ತಲುಪಿಸಿ: ಎಂ. ವೆಂಕಟೇಶನ್

| Published : Jun 14 2024, 01:05 AM IST

ಸಫಾಯಿ ಕರ್ಮಚಾರಿಗಳಿಗಿರುವ ಸೌಲಭ್ಯ ತಲುಪಿಸಿ: ಎಂ. ವೆಂಕಟೇಶನ್
Share this Article
  • FB
  • TW
  • Linkdin
  • Email

ಸಾರಾಂಶ

ಸಫಾಯಿ ಕರ್ಮಚಾರಿಗಳಿಗಿರುವ ಸರ್ಕಾರದ ಸೌಲಭ್ಯಗಳನ್ನು ಸರಿಯಾಗಿ ಇಲಾಖಾ ಅಧಿಕಾರಿಗಳು ತಲುಪಿಸಬೇಕು ಎಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ. ವೆಂಕಟೇಶನ್ ಹೇಳಿದರು.

ಗದಗ: ಸಫಾಯಿ ಕರ್ಮಚಾರಿಗಳಿಗಿರುವ ಸರ್ಕಾರದ ಸೌಲಭ್ಯಗಳನ್ನು ಸರಿಯಾಗಿ ಇಲಾಖಾ ಅಧಿಕಾರಿಗಳು ತಲುಪಿಸಬೇಕು ಎಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ. ವೆಂಕಟೇಶನ್ ಹೇಳಿದರು.

ಅವರು ಗುರುವಾರ ನಗರದ ಡಿ.ಸಿ. ಬಿಲ್ ಹತ್ತಿರದ ಸಫಾಯಿ ಕರ್ಮಚಾರಿ ಕಾಲನಿಗಳಲ್ಲಿನ ಪೌರ ಕಾರ್ಮಿಕರ ಮನೆಗಳಿಗೆ ಭೇಟಿ ನೀಡಿ ಆನಂತರ ಬಾಬು ಜಗಜೀವನರಾಂ ಸಭಾಭವನದಲ್ಲಿ ನಡೆದ ಸಫಾಯಿ ಕರ್ಮಚಾರಿಗಳ ಕುಂದು-ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಫಾಯಿ ಕರ್ಮಚಾರಿಗಳಿಗೆ ಸರ್ಕಾರ ಹಲವಾರು ಸೌಲಭ್ಯಗಳನ್ನು ಹಾಗೂ ನಿಗದಿತ ವೇತನವನ್ನು ಗೊತ್ತು ಪಡಿಸಿದೆ. ಸರ್ಕಾರ ಗೊತ್ತುಪಡಿಸಿದ ಸೌಲಭ್ಯಗಳು ಹಾಗೂ ನಿಗದಿತ ವೇತನ ಸಫಾಯಿ ಕರ್ಮಚಾರಿಗಳಿಗೆ ತಲುಪುತ್ತಿರುವ ಬಗ್ಗೆ ಸಂವಾದ ನಡೆಸುವ ಮೂಲಕ ಪರಿಶೀಲನೆ ನಡೆಸಿದರು. ಸಫಾಯಿ ಕರ್ಮಚಾರಿಗಳಿಗೆ ನಿವೃತ್ತಿ ನಂತರ ದೊರೆಯಬೇಕಾದ ಸೌಲಭ್ಯಗಳು ದೊರಕಿದೆಯೇ ಎಂಬ ಬಗ್ಗೆ ಸ್ವತಃ ತಾವೇ ಸಫಾಯಿ ಕರ್ಮಚಾರಿಗಳೊಂದಿಗೆ ಸಂವಾದ ನಡೆಸುವ ಮೂಲಕ ಖಚಿತ ಪಡಿಸಿಕೊಂಡರು.

ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರು ಹಾಗೂ ಸಫಾಯಿ ಕರ್ಮಚಾರಿಗಳಿಗೆ ಹೊರಗುತ್ತಿಗೆ ಏಜೆನ್ಸಿದಾರರು ಸರಿಯಾದ ಸಮಯಕ್ಕೆ ವೇತನ ಪಾವತಿ ಮಾಡುವ ಬಗ್ಗೆ ಹಾಗೂ ವೇತನದೊಂದಿಗೆ ಇಎಸ್‌ಐ, ಪಿಎಫ್ ಕಡಿತಗೊಳಿಸುವ ಬಗ್ಗೆ ಮಾಹಿತಿ ಪಡೆದ ಅವರು, ಸರಿಯಾಗಿ ವೇತನ ಪಾವತಿ ಮಾಡದ ಏಜೆನ್ಸಿದಾರರ ಮೇಲೆ ಶಿಸ್ತುಕ್ರಮ ಅನಿವಾರ್ಯ ಎಂಬ ಎಚ್ಚರಿಕೆ ನೀಡಿದರು.

ಗುತ್ತಿಗೆ ಸಫಾಯಿ ಕರ್ಮಚಾರಿಗಳಿಗೆ ರಜೆ ಸೌಲಭ್ಯ ನೀಡುತ್ತಿರುವ ಬಗ್ಗೆ ಹಾಗೂ ರಾಷ್ಟ್ರೀಯ ಹಬ್ಬಗಳನ್ನು ಕಾರ್ಯನಿರ್ವಹಿಸುವ ಸಫಾಯಿ ಕರ್ಮಚಾರಿಗಳಿಗೆ ವೇತನ ಪಾವತಿ ಸೌಲಭ್ಯಗಳ ಕುರಿತು ತಿಳಿಸಿಕೊಡುವ ಪ್ರಯತ್ನ ಮಾಡಿದರು.

ಇದೇ ಸಂದರ್ಭದಲ್ಲಿ ಬಾಬು ಜಗಜೀವನರಾಂ ಸಮುದಾಯ ಭವನದ ಹತ್ತಿರವಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಹೂಮಾಲೆ ಹಾಕಿ ಪುಷ್ಪಾರ್ಚನೆ ಸಲ್ಲಿಸಿದರು.

ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಮಾತನಾಡಿ, ಸಫಾಯಿ ಕರ್ಮಚಾರಿಗಳು ಹಾಗೂ ಪೌರಕಾರ್ಮಿಕರಿಗೆ ಸರಿಯಾದ ವೇತನ ಪಾವತಿಸಬೇಕು. ಸಮವಸ್ತ್ರ ಒದಗಿಸಬೇಕು. ಜತೆಗೆ ಇತರ ಸಂರಕ್ಷಣಾ ಪರಿಕರಗಳನ್ನು ಒದಗಿಸಿ ನಿಯಮಿತವಾಗಿ ಆರೋಗ್ಯ ತಪಾಸಣೆ ಕೈಗೊಳ್ಳುವಂತೆ ಇಲಾಖಾಧಿಕಾರಿಗಳಿಗೆ ಹಾಗೂ ಗುತ್ತಿಗೆ ಏಜೆನ್ಸಿದಾರರಿಗೆ ಸೂಚಿಸಿದರು.

ಜಿಪಂ ಸಿಇಒ ಭರತ್ ಎಸ್. ಹಾಗೂ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಅವರು ಸಂವಾದ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರ ಕುಂದು-ಕೊರತೆಗಳನ್ನು ಆಲಿಸುವ ಮೂಲಕ ಆಯೋಗದ ಅಧ್ಯಕ್ಷರಿಗೆ ವಿವರಿಸಿದರು.

ನಗರಸಭೆ ಸದಸ್ಯ ಕೃಷ್ಣಾ ಪರಾಪುರ, ನಗರಸಭೆ ಪೌರಾಯುಕ್ತ ಪ್ರಶಾಂತ ವರಗಪ್ಪನವರ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಾರುತಿ ಬ್ಯಾಕೋಡ್ ಇದ್ದರು.