ಫಲಾನುಭವಿಗಳಿಗೆ ಸೌಲಭ್ಯಗಳನ್ನು ಸುಲಭವಾಗಿ ಒದಗಿಸಿ: ಬ್ಯಾಂಕ್‌ಗಳಿಗೆ ಸಂಸದ ಕ್ಯಾ. ಬ್ರಿಜೇಶ್‌ ಚೌಟ ನಿರ್ದೇಶನ

| Published : Sep 11 2024, 01:04 AM IST

ಫಲಾನುಭವಿಗಳಿಗೆ ಸೌಲಭ್ಯಗಳನ್ನು ಸುಲಭವಾಗಿ ಒದಗಿಸಿ: ಬ್ಯಾಂಕ್‌ಗಳಿಗೆ ಸಂಸದ ಕ್ಯಾ. ಬ್ರಿಜೇಶ್‌ ಚೌಟ ನಿರ್ದೇಶನ
Share this Article
  • FB
  • TW
  • Linkdin
  • Email

ಸಾರಾಂಶ

ಮುದ್ರಾ ಯೋಜನೆಯಡಿ ಜಿಲ್ಲೆಯ ವಿವಿಧ ಬ್ಯಾಂಕ್‌ಗಳಿಗೆ ಪ್ರಸಕ್ತ ಸಾಲಿಗೆ ಒಟ್ಟು 1,300 ಗುರಿ ನೀಡಲಾಗಿದ್ದರೂ ಈವರೆಗೆ ಕೇವಲ 8 ಅರ್ಜಿಗಳು ಮಾತ್ರ ಸ್ವೀಕೃತವಾಗಿರುವ ಬಗ್ಗೆ ಸಂಸದ ಬ್ರಿಜೇಶ್‌ ಚೌಟ ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು ಸರ್ಕಾರದಿಂದ ಒದಗಿಸಲಾಗುವ ಸಬ್ಸಿಡಿ, ವಿವಿಧ ಯೋಜನೆಗಳು ಫಲಾನುಭವಿಗಳಿಗೆ ಸುಲಭವಾಗಿ ಸಿಗುವಂತಾಗಬೇಕು. ಅದಕ್ಕಾಗಿ ಅವರನ್ನು ಅಲೆದಾಡುವಂತೆ ಮಾಡಬಾರದು ಎಂದು ದ.ಕ. ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಜಿಲ್ಲೆಯ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಿದ್ದಾರೆ.ದ.ಕ. ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಮಂಗಳವಾರ ಅವರು ಜಿಲ್ಲಾ ಬ್ಯಾಂಕ್‌ಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಯೋಜನೆಗಳನ್ನು ಪಡೆಯಲು ಫಲಾನುಭವಿಗಳು ಬ್ಯಾಂಕ್‌ಗೆ ತೆರಳಿದಾಗ ಅವರನ್ನು ಮುಕ್ತ ಮನಸ್ಸಿನಿಂದ ಬರಮಾಡಿಕೊಳ್ಳಬೇಕು. ಸರ್ಕಾರದ ಯೋಜನೆಗಳ ಬಗ್ಗೆ ಮನವರಿಕೆ ಮಾಡುವ ಕಾರ್ಯವನ್ನು ಬ್ಯಾಂಕ್‌ನ ಅಧಿಕಾರಿ, ಸಿಬ್ಬಂದಿ ಮಾಡಬೇಕು. ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗ ಹಾಗೂ ಮಹಿಳೆಯರಿಗೆ ವಿಶೇಷ ಒತ್ತು ನೀಡಿ ಯೋಜನೆಗಳನ್ನು ಫಲಪ್ರದಗೊಳಿಸಲು ಆಸಕ್ತಿ ವಹಿಸಬೇಕು ಎಂದು ಅವರು ಕಿವಿಮಾತು ಹೇಳಿದರು.

ಜೀವನ್‌ಜ್ಯೋತಿ ಬಿಮಾ ಯೋಜನೆ, ಪಿಎಂ ಸ್ವ ನಿಧಿ ಯೋಜನೆ ಬಗ್ಗೆ ಬಗ್ಗೆ ಗ್ರಾಹಕರಿಗೆ ಜಾಗೃತಿ ಮೂಡಿಸಿ ಹೆಚ್ಚಿನ ಸಂಖ್ಯೆಯಲ್ಲಿ ಈ ಯೋಜನೆಯ ಪ್ರಯೋಜನ ಪಡೆಯಲು ಬ್ಯಾಂಕ್‌ಗಳು ಆಸಕ್ತಿ ವಹಿಸಬೇಕು. ಎಂದು ಜಿ.ಪಂ. ಸಿಇಒ ಡಾ. ಆನಂದ್‌ ನಿರ್ದೇಶನ ನೀಡಿದರು.

ಮುದ್ರಾ ಯೋಜನೆಯಡಿ ಜಿಲ್ಲೆಯ ವಿವಿಧ ಬ್ಯಾಂಕ್‌ಗಳಿಗೆ ಪ್ರಸಕ್ತ ಸಾಲಿಗೆ ಒಟ್ಟು 1,300 ಗುರಿ ನೀಡಲಾಗಿದ್ದರೂ ಈವರೆಗೆ ಕೇವಲ 8 ಅರ್ಜಿಗಳು ಮಾತ್ರ ಸ್ವೀಕೃತವಾಗಿರುವ ಬಗ್ಗೆ ಸಂಸದ ಬ್ರಿಜೇಶ್‌ ಚೌಟ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಧಾನ ಮಂತ್ರಿ ಜೀವನ್‌ ಬಿಮಾ ಯೋಜನೆಯಡಿ ಏಪ್ರಿಲ್‌ 2024ರಿಂದ ಜೂನ್‌ 2024ರ ವರೆಗೆ 6,679 ಮಂದಿಯನ್ನು ನೋಂದಣಿ ಮಾಡಲಾಗಿದೆ. ಅಟಲ್‌ ಪಿಂಚಣಿ ಯೋಜನೆಯಡಿ ಈ ಅವಧಿಯಲ್ಲಿ 12,761, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ 18,531 ಮಂದಿಯನ್ನು ನೋಂದಣಿ ಮಾಡಿರುವುದಾಗಿ ದ.ಕ. ಜಿಲ್ಲಾ ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕಿ ಕವಿತಾ ಶೆಟ್ಟಿ ವಿವರ ನೀಡಿದರು.

ಮುದ್ರಾ ಯೋಜನೆಯಡಿ ಈ ಅವಧಿಯಲ್ಲಿ 15,239 ಖಾತೆಗಳಲ್ಲಿ 193.87 ಕೋಟಿ ರು. ಸಾಲ ವಿತರಣೆ ಮಾಡಲಾಗಿದೆ. ಜನಧನ್‌ ಯೋಜನೆಯಡಿ 16,163 ಖಾತೆಗಳನ್ನು ತೆರೆಯಲಾಗಿದೆ. ಪಿಎಂ ಸ್ವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ಆಗಸ್ಟ್‌ 31ರ ವರೆಗೆ ಪ್ರಥಮ ಹಂತದಲ್ಲಿ 12,209, ದ್ವಿತೀಯ ಹಂತದಲ್ಲಿ 3,449 ಹಾಗೂ ತೃತೀಯ ಹಂತದಲ್ಲಿ 1,340 ಮಂದಿಗೆ ಸಾಲ ಮಂಜೂರಾಗಿದೆ ಎಂದು ಅವರು ತಿಳಿಸಿದರು.

ಕೃಷಿ ಕ್ಷೇತ್ರದಲ್ಲಿ ಕಳೆದ ವರ್ಷವೂ ಜಿಲ್ಲೆಯು ತನ್ನ ಗುರಿ ಮೀರಿ ಸಾಧನೆ ಮಾಡಿದೆ ಎಂದು ನಬಾರ್ಡ್‌ ಡಿಜಿಎಂ ಸಂಗೀತ ತಿಳಿಸಿದರು.ಆರ್‌ಬಿಐ ಎಜಿಎಂ ಅರುಣ್‌ ಕುಮಾರ್‌ ಇದ್ದರು.

ಕೈಗಾರಿಕಾ ಸಾಲದ ಸಬ್ಸಿಡಿ ವಿಳಂಬಪ್ರಧಾನ ಮಂತ್ರಿಯವರ ಉದ್ಯೋಗ ಸೃಷ್ಟಿ ಕಾರ್ಯಕ್ರಮ (ಪಿಎಂಇಜಿಪಿ) ದಡಿ ಕಿರು ಮತ್ತು ಮಧ್ಯಮ ಕೈಗಾರಿಕಾ ಚಟುವಟಿಕೆಗಳಿಗೆ ಸಾಲ ಪಡೆದು ಮರುಪಾವತಿಸಿದ್ದರೂ ನೂರಾರು ಉದ್ದಿಮೆದಾರರಿಗೆ ಸಿಗಬೇಕಾಗಿರುವ ಸಬ್ಸಿಡಿ ಹಲವು ವರ್ಷಗಳಿಂದ ದೊರೆತಿಲ್ಲ ಎಂಬ ಮಾಹಿತಿ ಬಗ್ಗೆ ಸಂಸದ ಬ್ರಿಜೇಶ್‌ ಚೌಟ ಕಳವಳ ವ್ಯಕ್ತಪಡಿಸಿದರು.2019ರಿಂದ ಈಚೆಗೆ ಪಿಎಂಇಜಿಪಿಯಡಿ ಸಾಲ ಪಡೆದವರು ಮರುಪಾವತಿ ಮಾಡಿದರೂ ಸಬ್ಸಿಡಿ ದೊರಕಿಲ್ಲ. ಇದರಿಂದಾಗಿ ಈ ಉದ್ದಿಮೆದಾರರು ಬೇರೆ ಯಾವುದೇ ರೀತಿಯ ಸಾಲ ಪಡೆಯಲು ಸಾಧ್ಯವಾಗದೆ ಉದ್ಯಮವನ್ನೇ ಮುಚ್ಚುವ ಸ್ಥಿತಿ ಎದುರಾಗಿದೆ ಎಂದು ಪ್ರಸ್ತಾಪಿಸಿದರು.

ಸಾಲ ಪಡೆಯುವ ಉದ್ದಿಮೆದಾರರಿಗೆ ಅವರ ಖಾತೆಗೆ ಸಬ್ಸಿಡಿ ಹಣವನ್ನು ವರ್ಗಾಯಿಸಲಾಗುತ್ತದೆ. ಆದರೆ ಸಾಲ ಮರುಪಾವತಿ ಬಳಿಕ ಥರ್ಡ್‌ ಪಾರ್ಟಿಯ ಪರಿಶೀಲನೆ ಆಗಬೇಕಾಗುತ್ತದೆ. ಹಿಂದೆ ಜೆನೆಸಿಸ್‌ ಸಂಸ್ಥೆ ನಡೆಸುತ್ತಿದ್ದ ಪರಿಶೀಲನೆಯನ್ನು ಈಗ ಕೇಂದ್ರ ಸರ್ಕಾರ ಪೋಸ್ಟಲ್‌ ಇಲಾಖೆಗೆ ವರ್ಗಾಯಿಸಿದೆ. ಎಲ್ಲ ರಾಜ್ಯಗಳಲ್ಲೂ ಈ ಬಗ್ಗೆ ಪ್ರಕ್ರಿಯೆಗಳು ನಡೆಯುತ್ತಿದ್ದು ಇದರಿಂದಾಗಿ ಸಬ್ಸಿಡಿ ವಿತರಣೆ ವಿಳಂಬವಾಗಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರಗಳ ಸಹಾಯಕ ವ್ಯವಸ್ಥಾಪಕ ಅನಿಲ್‌ ಕುಮಾರ್‌ ಮಾಹಿತಿ ನೀಡಿದರು.ಕಳೆದ ಒಂದೂವರೆ ವರ್ಷದಿಂದ ಈ ಸಮಸ್ಯೆಯಾಗುತ್ತಿದ್ದರೂ ಇದನ್ನು ಸಂಬಂಧಪಟ್ಟವರ ಗಮನಕ್ಕೆ ತಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಂಸದ ಬ್ರಿಜೇಶ್‌ ಚೌಟ, ಇಂತಹ ಸಮಸ್ಯೆಗಳ ಕುರಿತಂತೆ ಅಧಿಕಾರಿಗಳು ಸೂಕ್ತ ಸಮಯದಲ್ಲಿ ಸಂಬಂಧಪಟ್ಟವರಿಗೆ ಮಾಹಿತಿ ನೀಡಿ ಬಗೆಹರಿಸಲು ಸಹಕರಿಸಬೇಕು ಎಂದು ತಾಕೀತು ಮಾಡಿದರು.