ಪೌರಕಾರ್ಮಿಕರಿಗೆ ತ್ವರಿತವಾಗಿ ಸೌಲಭ್ಯ ತಲುಪಿಸಿ: ಜಿಲ್ಲಾಧಿಕಾರಿ ಶಿಲ್ಪಾನಾಗ್

| Published : Sep 03 2024, 01:37 AM IST

ಪೌರಕಾರ್ಮಿಕರಿಗೆ ತ್ವರಿತವಾಗಿ ಸೌಲಭ್ಯ ತಲುಪಿಸಿ: ಜಿಲ್ಲಾಧಿಕಾರಿ ಶಿಲ್ಪಾನಾಗ್
Share this Article
  • FB
  • TW
  • Linkdin
  • Email

ಸಾರಾಂಶ

ಪೌರಕಾರ್ಮಿಕರಿಗೆ ದೊರೆಯುವ ಸೌಲಭ್ಯಗಳನ್ನು ಯಾವುದೇ ವಿಳಂಬಕ್ಕೆ ಅವಕಾಶವಾಗದಂತೆ ತ್ವರಿತವಾಗಿ ತಲುಪಿಸಲು ನಗರ, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು. ಚಾಮರಾಜನಗರದಲ್ಲಿ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಪೌರಕಾರ್ಮಿಕರಿಗೆ ದೊರೆಯುವ ಸೌಲಭ್ಯಗಳನ್ನು ಯಾವುದೇ ವಿಳಂಬಕ್ಕೆ ಅವಕಾಶವಾಗದಂತೆ ತ್ವರಿತವಾಗಿ ತಲುಪಿಸಲು ನಗರ, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಚಾಮರಾಜನಗರ ನಗರಸಭಾ ವ್ಯಾಪ್ತಿಯ ಪೌರಕಾರ್ಮಿಕರ ಸಮಸ್ಯೆ, ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ, ಪೌರಕಾರ್ಮಿಕರಿಂದ ಕುಂದುಕೊರತೆ, ಅಹವಾಲುಗಳನ್ನು ಸ್ವೀಕರಿಸಿದ ಬಳಿಕ ಮಾತನಾಡಿದರು.

ಪೌರಕಾರ್ಮಿಕರು ಪ್ರತಿನಿತ್ಯ ನಗರ ಸ್ವಚ್ಛತಾ ಕಾಯಕದಲ್ಲಿ ನಿರತರಾಗುವವರು, ಅವಶ್ಯ ಸೌಲಭ್ಯ ನೀಡಿಕೆಯಲ್ಲಿ ಅವರನ್ನು ಯಾವುದೇ ಕಾರಣಕ್ಕೂ ಕಡೆಗಣಿಸಬಾರದು. ಪೌರಕಾರ್ಮಿಕರಿಗೆ ಇಎಸ್ಐ ಕಾರ್ಡ್ ಒದಗಿಸಬೇಕು. ವೈದ್ಯಕೀಯ ವೆಚ್ಚ ಮರುಪಾವತಿ ಹಾಗೂ ವಿದ್ಯಾರ್ಥಿವೇತನ ಸೌಲಭ್ಯ ನೀಡಬೇಕು. ಪ್ರತಿ ತಿಂಗಳ ವೇತನದ ಜೊತೆಗೆ ಸಂಕಷ್ಟ ಭತ್ಯೆ ನೀಡಬೇಕು. ನಿಗದಿತ ಕಾಲಮಿತಿಯಲ್ಲಿ ವೇತನ ಪಾವತಿಸದ ಏಜೆನ್ಸಿಯನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಸಮಾನ ಕೆಲಸಕ್ಕೆ ಸಮಾನ ವೇತನದಡಿ ಹೊರಗುತ್ತಿಗೆ ನೇರ ಪಾವತಿ ಕಾರ್ಮಿಕರನ್ನು ಪರಿಗಣಿಸಲು ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸಲು ಬೇಡಿಕೆ ಇದೆ. ಅಲ್ಲದೆ ಗೃಹಭಾಗ್ಯ ಯೋಜನೆಯಡಿ ಸರ್ವೆ ನಂ.65ರಲ್ಲಿ ಪೌರಕಾರ್ಮಿಕರು ಹಾಗೂ ಸಫಾಯಿ ಕರ್ಮಚಾರಿಗಳಿಗೆ ಮನೆ ನಿರ್ಮಾಣಕ್ಕಾಗಿ 2 ಎಕರೆ ಭೂಮಿ ಮಂಜೂರಾಗಿದೆ. ಹಕ್ಕುಪತ್ರಗಳನ್ನು ನೀಡಲಾಗಿದ್ದು, ಮನೆ ನಿರ್ಮಾಣಕ್ಕೆ ಅನುದಾನದ ಅಗತ್ಯವಿದೆ ಎಂದು ತಿಳಿಸಿದರು.

ಜಿಲ್ಲೆಯ ಎಲ್ಲ ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪೌರಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಿ ಮಾದರಿ ಕಾಲೋನಿ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು. ಆಗಬೇಕಾಗಿರುವ ಕೆಲಸಗಳನ್ನು ಮೇಲಾಧಿಕಾರಿಗಳ ಜೊತೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ಮಾಹಿತಿಗಳನ್ನು ಕ್ರೋಢೀಕರಿಸಿ ಪ್ರಸ್ತಾವನೆ ಸಲ್ಲಿಸಬೇಕು. ಪ್ರತಿ ಬಾರಿ ಇದೇ ಸಮಸ್ಯೆಗಳು ಮರುಕಳಿಸಬಾರದು. ಕೌನ್ಸಿಲ್ ಸಭೆ ನಡೆಯುವ ಮೊದಲೇ ಪೌರಕಾರ್ಮಿಕರ ಕುಂದುಕೊರತೆ ಪರಿಹಾರಕ್ಕೆ ಕ್ರಿಯಾಯೋಜನೆ ತಯಾರಿಸಿ ಮಂಡಿಸಬೇಕೆಂದು ಜಿಲ್ಲಾ ನಗರಾಭಿವೃದ್ಧಿ ಕೋಶ ಹಾಗೂ ನಗರಸಭೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಚಾಮರಾಜನಗರ ನಗರಸಭಾ ವ್ಯಾಪ್ತಿಯಲ್ಲಿ 138 ಪೌರಕಾರ್ಮಿಕರಿದ್ದು, ಈಗಾಗಲೇ 66 ಮಂದಿಗೆ ಆರೋಗ್ಯ ತಪಾಸಣೆ ಮಾಡಲಾಗಿದೆ. ಉಳಿದ ಎಲ್ಲಾ ಕಾರ್ಮಿಕರಿಗೂ ಮಾಸ್ಟರ್ ಚೆಕಪ್ ಮಾಡಿಸಲು ಶೇ.50ರ ರಿಯಾಯಿತಿ ದರದಲ್ಲಿ ಮೈಸೂರಿನ ಅಪೋಲೊ ಆಸ್ಪತ್ರೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಪೌರಕಾರ್ಮಿಕರಲ್ಲಿ ಕಂಡುಬರುವ ಕಣ್ಣಿನ ತೊಂದರೆ, ಅಲರ್ಜಿ, ಮಹಿಳೆಯರಿಗೆ ಗರ್ಭಕೋಶದ ತೊಂದರೆ ಸೇರಿದಂತೆ ಇನ್ನಿತರೆ ಆರೋಗ್ಯ ಸಮಸ್ಯೆಗಳನ್ನು ಮೂರು ಹಂತಗಳಲ್ಲಿ ತಪಾಸಣೆ ಮಾಡಿ ಚಿಕಿತ್ಸೆ ಕೊಡಿಸಲಾಗುವುದು ಎಂದು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆಯು ಪ್ರತಿ ಮೂರು ತಿಂಗಳಿಗೊಮ್ಮೆ ಪರಿಶಿಷ್ಟ ಜಾತಿ ದೌರ್ಜನ್ಯ ನಿಯಂತ್ರಣ ಸಮಿತಿ ಸಭೆ ನಡೆಸಲಿದ್ದು, ಪೌರಕಾರ್ಮಿಕರ ಸಮಸ್ಯೆಗಳನ್ನು ನಿವಾರಿಸಲು ಚಾಮರಾಜನಗರ ಹಾಗೂ ಕೊಳ್ಳೆಗಾಲ ನಗರಸಭೆ, ಯಳಂದೂರು ಹಾಗೂ ಹನೂರು ಪಟ್ಟಣ ಪಂಚಾಯಿತಿ ಹಾಗೂ ಗುಂಡ್ಲುಪೇಟೆ ಪುರಸಭೆ ಸೇರಿದಂತೆ ಒಟ್ಟು 5 ಮಂದಿ ಪೌರಕಾರ್ಮಿಕ ಪ್ರತಿನಿಧಿಗಳನ್ನು ಸಭೆಗೆ ಆಹ್ವಾನಿಸುವಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪೌರಕಾರ್ಮಿಕರಿಗೆ ಉತ್ತಮ ಗುಣಮಟ್ಟದ ಗ್ಲೌಸ್, ಬೂಟುಗಳು ಸೇರಿದಂತೆ ರಕ್ಷಣಾ ಪರಿಕರಗಳನ್ನು ಒದಗಿಸಬೇಕು. ಅವರಿಗೆ ತುರ್ತು ಸಂದರ್ಭದಲ್ಲಿ ನೆರವು ನೀಡಲು ಮೆಡಿಕಲ್ ಸೆಲ್ ತೆರೆಯಬೇಕು. ನಗರಸಭೆಯ ಸಕ್ಕಿಂಗ್ ಯಂತ್ರ ಚಾಲನೆ ಮಾಡುವವರಿಗೆ ಅವಶ್ಯ ತರಬೇತಿ ನೀಡಬೇಕು ಎಂದ ಅವರು, ಪೌರಕಾರ್ಮಿಕರ ಮಕ್ಕಳ ಶೈಕ್ಷಣಿಕ ಹಾಗೂ ಭೌದ್ಧಿಕ ಪ್ರಗತಿಗಾಗಿ ಡಿಜಿಟಲ್ ಲೈಬ್ರರಿಗಳನ್ನು ತೆರೆಯಬೇಕು ಎಂದು ಹೇಳಿದರು.

ಇದೇ ವೇಳೆ ನಗರಸಭೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರನ್ನು ಸನ್ಮಾನಿಸಲಾಯಿತು. ಜಿಲ್ಲಾ ನಗರಾಭಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಎಂ.ವಿ.ಸುಧಾ, ನಗರಸಭೆ ಪೌರಾಯುಕ್ತ ಎಸ್.ವಿ.ರಾಮದಾಸ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮುನಿರಾಜು, ನಗರಸಭೆ ಯೋಜನಾಧಿಕಾರಿ ವೆಂಕಟನಾಯಕ್, ಕಂದಾಯ ಅಧಿಕಾರಿ ಶರವಣ, ಹಿರಿಯ ಆರೋಗ್ಯ ನಿರೀಕ್ಷಕರಾದ ಮಂಜುನಾಥ್, ನಾರಾಯಣ್, ಸುಷ್ಮಾ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.