ಸರ್‌ ಎಂವಿ ಜನಿಸಿದ ಮುದ್ದೇನಹಳ್ಳಿಗೆ ಸೌಲಭ್ಯ ಕಲ್ಪಿಸಿ

| Published : Sep 14 2025, 01:04 AM IST

ಸರ್‌ ಎಂವಿ ಜನಿಸಿದ ಮುದ್ದೇನಹಳ್ಳಿಗೆ ಸೌಲಭ್ಯ ಕಲ್ಪಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಸರ್‌ ಎಂವಿಯವರು ಹುಟ್ಟಿದ್ದು 1860ರ ಸೆ.15ರಂದು. ಹೀಗಾಗಿ ಪ್ರತಿ ವರ್ಷ ಈ ದಿನವನ್ನು ಎಂಜಿನಿಯರ್ಸ್ ಡೇ ಆಗಿ ಆಚರಿಸಲಾಗುತ್ತಿದೆ. ಇಡೀ ದೇಶಾದ್ಯಂತ ಸರ್‌ ಎಂ.ವಿ. ಅವರ ಗುಣಗಾನ ನಡೆಯುತ್ತದೆ. ಆದರೆ, ಮುದ್ದೇನಹಳ್ಳಿಯಲ್ಲಿ ಹೇಳಿಕೊಳ್ಳುವಂತಹ ಚಟುವಟಿಕೆಗಳು ನಡೆಯುತ್ತಿಲ್ಲ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಜನಿಸಿ ತಮ್ಮ ಜೀವನದುದ್ದಕ್ಕೂ ಕರ್ಮಯೋಗಿಯಂತೆ ಬದುಕಿದ ವಿಶ್ವ ವಿಖ್ಯಾತ ಎಂಜಿನಿಯರ್ ಭಾರತ ರತ್ನ ಸರ್‌ ಎಂ.ವಿಶ್ವೇಶ್ವರಯ್ಯ ಅವರ 165ನೇ ಜನ್ಮ ದಿನ ಸೆ. 15 ರಂದು ಆಚರಿಸಲಾಗುವುದು.

ವಿಪರ್ಯಾಸವೆಂದರೆ ಅವರು ಹುಟ್ಟಿದ ಮುದ್ದೇನಹಳ್ಳಿ ಮಾತ್ರ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಸರ್ ಎಂ.ವಿ ಹುಟ್ಟಿದ ದಿನದಂದು ಮಾತ್ರ ನೆಪ ಮಾತ್ರಕ್ಕೆ ಸರ್ ಎಂವಿ. ಅವರನ್ನು ಸ್ಮರಿಸುವ ಕಾರ್ಯ ಮಾಡಿ ಕೈ ತೊಳೆದುಕೊಳ್ಳಲಾಗುವುತ್ತದೆ.

ಪ್ರವಾಸಿ ತಾಣ ಆಗಲೇ ಇಲ್ಲ ಸೆ. 15ನ್ನು ಎಂಜಿನಿಯರ್‌ಗಳ ದಿನವಾಗಿ ಆಚರಿಸಲಾಗುತ್ತದೆ. ಸರ್‌ ಎಂವಿ ತಮ್ಮ 102 ವರ್ಷಗಳ ಬದುಕಿನಲ್ಲಿ ನಾಡಿಗಾಗಿ ದುಡಿದರು. ಎಂಜಿನಿಯರಿಂಗ್‌ ಕ್ಷೇತ್ರದಲ್ಲಿ ಇಡೀ ಜಗತ್ತೇ ಮೆಚ್ಚುವ ಸಾಧನೆ ಮಾಡಿದ್ದಾರೆ. ಆದರೆ, ಅವರ ಹುಟ್ಟೂರು ತಾಲೂಕಿನ ಮುದ್ದೇನಹಳ್ಳಿಯಲ್ಲಿ ಮಾತ್ರ ಇಂದಿಗೂ ಹೇಳಿಕೊಳ್ಳುವಂತಹ ಯಾವುದೇ ಅಭಿವೃದ್ಧಿ ಕಾರ್ಯ ನಡೆಯದೇ ಪ್ರವಾಸಿಗರಿಂದ ದೂರವೇ ಉಳಿದಿದೆ.

ಅವರ ಜನ್ಮ ದಿನಾಚರಣೆಯಂದು ಮಾತ್ರ ಇಲ್ಲಿನ ಸರ್ ಎಂವಿ ಸ್ಮಾರಕ ವಿದ್ಯಾ ಸಂಸ್ಥೆ ಮಾತ್ರ ನಗರದಲ್ಲಿ ಅವರ ಭಾವಚಿತ್ರದೊಂದಿಗೆ ದೊಡ್ಡ ಮೆರವಣಿಗೆ ಮಾಡಿ ಮುದ್ದೇನಹಳ್ಳಿಯಲ್ಲಿ ಅವರ ಸಮಾಧಿ ಬಳಿಗೆ ತೆರಳಿ ಪೂಜೆ ನೆರವೇರಿಸುತ್ತಾ ವೇದಿಕೆ ಕಾರ್ಯಕ್ರಮದಲ್ಲಿ ಅವರನ್ನು ಸ್ಮರಣೆ ಮಾಡುವ ಕಾಯಕ ಮಾಡುತ್ತಾ ಬಂದಿದ್ದಾರೆ. ಅದನ್ನ ಹೊರತುಪಡಿಸಿ ಜನಪ್ರತಿನಿಧಿಗಳಿರಲಿ, ಜಿಲ್ಲಾಡಳಿತವಾಗಲಿ, ತಾಲೂಕು ಆಡಳಿತವಾಗಲಿ ಅರ್ಥಪೂರ್ಣ ಕಾರ್ಯಕ್ರಮ ನಡೆಸಿದ್ದೇ ಇಲ್ಲ.

ಕಾಟಾಚಾರಕ್ಕೆ ಕಾರ್ಯಕ್ರಮ

ಸರ್‌ ಎಂವಿಯವರು ಹುಟ್ಟಿದ್ದು 1860ರ ಸೆ.15ರಂದು. ಹೀಗಾಗಿ ಪ್ರತಿ ವರ್ಷ ಈ ದಿನವನ್ನು ಎಂಜಿನಿಯರ್ಸ್ ಡೇ ಆಗಿ ಆಚರಿಸಲಾಗುತ್ತಿದೆ. ಇಡೀ ದೇಶಾದ್ಯಂತ ಸರ್‌ ಎಂ.ವಿ. ಅವರ ಗುಣಗಾನ ನಡೆಯುತ್ತದೆ. ಆದರೆ, ಮುದ್ದೇನಹಳ್ಳಿಯಲ್ಲಿ ಹೇಳಿಕೊಳ್ಳುವಂತಹ ಚಟುವಟಿಕೆಗಳು ನಡೆಯುವುದಿಲ್ಲ ಚಿಕ್ಕಬಳ್ಳಾಪುರದ ಖಾಸಗಿ ವಿದ್ಯಾ ಸಂಸ್ಥೆ, ಸರ್‌. ಎಂ.ವಿಯವರ ಕುಟುಂಬಸ್ಥರು ಸರ್‌ಎಂವಿಯವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿ ಹೋಗುವುದು ಬಿಟ್ಟರೆ ಬೇರೆ ಅವರ ನೆನಪಿನಾರ್ಥವಾಗಿ ಸ್ಮರಣೀಯ ಕಾರ್ಯಕ್ರಮಗಳು ನಡದಿದ್ದೆ ಇಲ್ಲಾ. ಆಸ್ತಿ ರಕ್ಷಣೆಗೆ ಪ್ರತ್ಯೇಕ ಟ್ರಸ್ಟ್‌

ಮುದ್ದೇನಹಳ್ಳಿಯಲ್ಲಿ ಸರ್‌ಎಂವಿಯವರ ಆಸ್ತಿ ನಿರ್ವಹಣೆಗಾಗಿಯೇ ಪ್ರತ್ಯೇಕ ಟ್ರಸ್ಟ್‌ ರಚಿಸಲಾಗಿದ್ದು, ಅದರ ನಿಗಾದಲ್ಲೇ ನಡೆಯುತ್ತಿದೆ. ಈಗಲೂ ಸರ್ಕಾರದ ಯಾವುದೇ ಪಾತ್ರ ಇಲ್ಲಿ ಇಲ್ಲ. ಇಲ್ಲಿರುವ ಸರ್‌. ಎಂ.ವಿಯವರ ಸಮಾಧಿಯನ್ನು ಮುದ್ದೇನಹಳ್ಳಿ ಸ್ಥಾಪನೆಯಾಗಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ನೋಡಿಕೊಳ್ಳುತ್ತಿದೆ. ಉದ್ಯಾನವನ್ನು ತೋಟಗಾರಿಕೆ ಇಲಾಖೆ ನಿರ್ವಹಣೆಗೆ ನೀಡಲಾಗಿದೆ ಆದರೂ ಇಲ್ಲಿರುವ ಉದ್ಯಾನವನ ನಿರ್ವಹಣೆ ಹೇಳಿಕೊಳ್ಳುವಂತಿಲ್ಲ.

ಸರ್‌ ಎಂ.ವಿ ಅವರ ಕೊನೆಯಾಸೆಯಂತೆ ಅವರ ಅಂತ್ಯಸಂಸ್ಕಾರವನ್ನು ಹುಟ್ಟೂರಲ್ಲೇ ನೆರವೇರಿಸಲಾಗಿದೆ. 1990 ರಲ್ಲಿ ಎಸ್ ಜೆ ಸಿ. ಐ.ಟಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾಗಿದ್ದ ಡಾ.ಎಚ್‌.ಎಸ್ ನಿಂಗಪ್ಪ ಸೇರಿದಂತೆ ಹಲವರು ಸೇರಿ ಸರ್‌. ಎಂ.ವಿ ಫೌಂಡೇಶನ್‌ ಸ್ಥಾಪಿಸಿ ಆ ಮೂಲಕ ಸರ್‌ಎಂವಿ ಸಮಾಧಿಯನ್ನು ಮಾಡಿ ಸುತ್ತಲೂ ಉದ್ಯಾನವನ್ನು ನಿರ್ಮಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಸರ್‌ ಎಂವಿ ಹೆಸರಲ್ಲಿ ವಿಟಿಯು

ಈ ಹಿಂದೆ ಚಿಕ್ಕಬಳ್ಳಾಪುರ ಸಂಸದರಾಗಿದ್ದ ವೀರಪ್ಪ ಮೊಯ್ಲಿಯವರ ಕಾಲಾವಧಿಯಲ್ಲಿ ಅವರ ಆಸೆಯಂತೆ ಇಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯವೇನೋ ಆಗಿದೆ. ಆಗ ಒಂದಷ್ಟು ವರ್ಷಗಳ ಕಾಲ ಸಮಾಧಿ ನಿರ್ವಹಣೆಯನ್ನು ವಿಟಿಯು ನೋಡಿಕೊಳ್ಳುತಿತ್ತು. ಆದರೂ ನಿರೀಕ್ಷಿತ ಅಭಿವೃದ್ಧಿ ಆಗುತ್ತಿಲ್ಲ. ಸರ್ಕಾರದ ನಿರ್ಲಕ್ಷ್ಯದಿಂದಾಗಿ ಸರ್‌ಎಂವಿಯವರ ತವರು ಇನ್ನೂ ಅಭಿವೃದ್ಧಿ ಆಗದೆ ಉಳಿದಿರುವುದು ವಿಪರ್ಯಾಸವೇ ಸರಿ.