ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ ರಾಜ್ಯದಲ್ಲಿಯೇ ಶಿರಾ ತಾಲೂಕಿನಲ್ಲಿ ಅತಿ ಹೆಚ್ಚು ಕುರಿ ಸಾಕಾಣಿಕದಾರರಿದ್ದು, ಸರ್ಕಾರ ಕುರಿ ಸಾಕಾಣಿಕೆದಾರರ ಬೆಂಬಲಕ್ಕೆ ನಿಂತು ಅವರಿಗೆ ಮೂಲಸೌಕರ್ಯ ನೀಡಬೇಕು ಹಾಗೂ ಕುರಿ ಸಾಕಾಣಿಕೆಗೆ ಪೂರಕ ವಾತಾವರಣ ನಿರ್ಮಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ ಗೌಡ ಅವರು ವಿಧಾನಪರಿಷತ್ ಅಧಿವೇಶನದಲ್ಲಿ ಒತ್ತಾಯಿಸಿದ್ದಾರೆ. ಅವರು ವಿಧಾನಪರಿಷತ್ತಿನ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿ ಮಾತನಾಡಿ ಶಿರಾ ತಾಲೂಕಿನಲ್ಲಿ ಕಾಡುಗೊಲ್ಲ ಸಮುದಾಯದ ಪ್ರಮುಖ ವೃತ್ತಿಯಾಗಿದೆ. ಕುರಿ ಸಾಕಾಣಿಕೆಗೆ ಸರಕಾರ ಹೆಚ್ಚು ಒತ್ತು ನೀಡಬೇಕು ಹಾಗೂ ಶಿರಾದಲ್ಲಿ ನಿರ್ಮಾಣವಾಗುತ್ತಿರುವ ವಧಾಗಾರದಲ್ಲಿ ಮಾರಾಟ ಬೆಲೆ ಕನಿಷ್ಟ ಪ್ರತಿ ಕೆಜಿಗೆ ರೂ. ೫೦೦ ರಿಂದ ೬೦೦ ರುಪಾಯಿಗಳನ್ನು ನಿಗದಿಪಡಿಸಬೇಕು ಎಂದು ಅಧಿವೇಶನದಲ್ಲಿ ಸರಕಾರವನ್ನು ಒತ್ತಾಯಿಸಿದರು. ಶಿರಾ ತಾಲೂಕಿನಲ್ಲಿರುವ ಕಾಡುಗೊಲ್ಲ ಸಮುದಾಯವು ಕುಲಕಸುಬು ಎಂಬಂತೆ ಕುರಿ ಸಾಕಾಣಿಕೆಯನ್ನು ಮಾಡುತ್ತಿದೆ. ಕುರಿಗಾಹಿಗಳು ಪ್ರತಿ ವರ್ಷ ನವಂಬರ್ ತಿಂಗಳಿನಿಂದ ಮೇ, ಜೂನ್ ತಿಂಗಳವರೆಗೆ ರಾಜ್ಯದ ನಾನಾ ಭಾಗಗಳಿಗೆ ಕುರಿ ಮೇಯಿಸಲು ಗುಳೆ ಹೋಗುತ್ತಿದ್ದಾರೆ. ಈ ಸಂದರ್ಭದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ವಲಸೆ ಹೋದಂತ ಸಂದರ್ಭದಲ್ಲಿ ಕೆಲವು ಕಡೆ ಕುರಿಗಾಹಿಗಳ ಮೇಲೆ ಪೊಲೀಸ್ ಕೇಸ್ ದಾಖಲಾಗುತ್ತಿವೆ. ಹಾಗೂ ಕಾಡುಗೊಲ್ಲರ ಮೇಲೆ ಹಲ್ಲೆಗಳಾಗುತ್ತಿದ್ದು, ಈ ಬಗ್ಗೆ ಸರಕಾರ ಚಿಂತನೆ ನಡೆಸಿ ಕುರಿಗಾಹಿಗಳಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.