ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಸ್ಲಂ ಜನಾಂದೋಲನ ಕರ್ನಾಟಕ ಮತ್ತು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಒತ್ತಾಯದ ಮೇರೆಗೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಉಪವಿಭಾಗ ತುಮಕೂರು ವತಿಯಿಂದ ಜಿಲ್ಲಾ ಮಟ್ಟದ ಸ್ಲಂ ಜನರ ಕುಂದು ಕೊರತೆ ಸಭೆಯನ್ನು ನಗರದ ಶಿರಾಗೇಟ್ ಕಚೇರಿಯಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರ ಅಧ್ಯಕ್ಷತೆಯಲ್ಲಿ ನಡೆಯಿತು.ಸಭೆಯಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಮಾತನಾಡಿ, ಜಿಲ್ಲೆಯ 10 ತಾಲೂಕುಗಳಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಕೈಗೊಂಡಿರುವ 7178 ಮನೆಗಳಲ್ಲಿ ಬಾಕಿ ಇರುವ 4881 ಪೂರ್ಣಗೊಳಿಸಿ ಜಿಲ್ಲೆಯ ವಸತಿ ರಹಿತರ ನೈಜ ಕುಟುಂಬಗಳಿಗೆ ಸೌಲಭ್ಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.ಎಸ್‌ಸಿಎಸ್‌ಪಿ ಯೋಜನೆಯಡಿ ಮೂಲಭೂತ ಸೌಕರ್ಯಗಳಿಗಾಗಿ ಬಿಡುಗಡೆಯಾಗಿರುವ 4 ಕೋಟಿ ಅನುದಾನವನ್ನು ಸ್ಲಂಗಳಿಗೆ ಮಾತ್ರ ಅನುಧಾನ ಬಳಕೆಯಾಗಬೇಕು. ಜಿಲ್ಲೆಯಲ್ಲಿ ಹಕ್ಕುಪತ್ರ ವಂಚಿತ ಕುಟುಂಬಗಳನ್ನು ತುರ್ತು ಸಮೀಕ್ಷೆ ನಡೆಸಿ ಹಕ್ಕುಪತ್ರ ನೊಂದಣಿ ಪ್ರಕ್ರಿಯೆ ಚುರುಕುಗೊಳಿಸಿ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಸಹಯೋಗದಲ್ಲಿ ಇದೇ ಆಗಸ್ಟ್ 15 ರಂದು ಕನಿಷ್ಠ 1 ಸಾವಿರ ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ಸೌಲಭ್ಯ ಒದಗಿಸಿಕೊಡಬೇಕು ಎಂದರು.ಸ್ಲಂ ಸಮಿತಿ ಕಾರ್ಯದರ್ಶಿ ಅರುಣ್ ಮತ್ತು ಶಂಕರಯ್ಯ ಮಾತನಾಡಿ, ತುಮಕೂರು ನಗರದಲ್ಲಿ ಭೀಕರ ಮಳೆ ಬಂದರೆ ಮೊದಲು ಬದುಕನ್ನು ಕಳೆದುಕೊಳ್ಳುವವರು ನಗರದ ಭಾರತಿ ನಗರ ಮತ್ತು ಎಸ್ ಎನ್ ಪಾಳ್ಯ ಸ್ಲಂ ನಿವಾಸಿಗಳು ಇಲ್ಲಿ ವಾಸಿಸುವ ಕುಟುಂಬಗಳ ರಕ್ಷಣೆಗಾಗಿ ತಾತ್ಕಾಲಿಕ ತಡೆಗೋಡೆ, ರಸ್ತೆ, ಚರಂಡಿ ಮಾಡಿಕೊಡಿ, ಇಗಾಗಲೇ ನಗರದಲ್ಲಿ ಸ್ಲಂ ಬೋರ್ಡ್‌ನಿಂದ ನಿರ್ಮಾಣವಾಗಿ ಪೂರ್ಣಗೊಂಡಿರುವ ಮನೆಗಳಿಗೆ ವಿದ್ಯುತ್ ಮತ್ತು ಯುಜಿಡಿ ಸಂಪರ್ಕಕ್ಕಾಗಿ ಸ್ವಾಧೀನ ಪತ್ರ ನೀಡಲು ಮಹಾನಗರ ಪಾಲಿಕೆ ಆಯುಕ್ತರಿಗೆ ಪತ್ರ ಬರೆಯಿರಿ ಎಂದು ಒತ್ತಾಯಿಸಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಸ್ಲಂ ಬೋರ್ಡ್ ಸಹಾಯಕ ಕಾರ್ಯಪಾಲಕ ಅಭಿಯಂತರ ಬಾನುಪ್ರತಾಪ್ ಸಿಂಹ ಕುಂದು ಕೊರತೆಗಳಿಗೆ ಸ್ಪಂದಿಸಿ ಜಿಲ್ಲೆಯ 10 ತಾಲ್ಲೂಕುಗಳಲ್ಲಿ 3ಹಂತಗಳಲ್ಲಿ 7178 ಮನೆಗಳು ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಿರ್ಮಾಣ ಮಾಡಲಾಗುತ್ತಿದೆ, ಇಲ್ಲಿವರೆಗೂ 2297 ಮನೆಗಳನ್ನು ಪೂರ್ಣಗೊಳಿಸಲಾಗಿದೆ, ಬಾಕಿ ಉಳಿದ 4881 ಮನೆಗಳ ಕಾಮಗಾರಿ ಶೀಘ್ರದಲ್ಲೆ ಪೂರ್ಣಗೊಳಿಸಲಾಗುವುದು ಎಂದರು.
ಹಕ್ಕುಪತ್ರ ಸಮೀಕ್ಷೆ ಕೈಗೊಂಡು ಚರುಕುಗೊಳಿಸಿ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಇದೇ ಆಗಸ್ಟ್ 15 ರಂದು 1 ಸಾವಿರ ಕುಟುಂಬಗಳಿಗೆ ಹಕ್ಕುಪತ್ರ ಹಂಚಿಕೆ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ ಎಂದರು.ಸಭೆಯಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧಿಕಾರಿ ಜಗದೀಶ್, ಎಇ ರಕ್ಷಿತ್‌ಕುಮಾರ್, ಯಶಸ್ವಿ, ಹಾಗು ತುಮಕೂರು ಸ್ಲಂ ಸಮಿತಿಯ ಪದಾಧಿಕಾರಿಗಳಾದ ಅರುಣ್, ಶಂಕ್ರಯ್ಯ, ಜಾಬೀರ್‌ಖಾನ್, ಕೆಂಪಣ್ಣ, ಗಂಗಾ, ಕೃಷ್ಣಮೂರ್ತಿ, ಮುಬಾರಕ್, ತಿರುಮಲಯ್ಯ, ಧನಂಜಯ್, ಗುಲ್ನಾಜ್ ಮುಂತಾದವರು ಪಾಲ್ಗೊಂಡಿದ್ದರು.