ರೈತರಿಗೆ ಇಸ್ರೇಲ್ ಮಾದರಿ ಕೃಷಿಗೆ ಪೂರಕ ಸೌಲಭ್ಯ ಒದಗಿಸಿ: ಶಾಸಕ ಶರತ್‌ ಬಚ್ಚೇಗೌಡ

| Published : Apr 18 2025, 12:33 AM IST

ರೈತರಿಗೆ ಇಸ್ರೇಲ್ ಮಾದರಿ ಕೃಷಿಗೆ ಪೂರಕ ಸೌಲಭ್ಯ ಒದಗಿಸಿ: ಶಾಸಕ ಶರತ್‌ ಬಚ್ಚೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ರೈತರ ಅಭ್ಯುದಯದ ದೃಷ್ಟಿಯಿಂದ ಹಲವಾರು ಆಯಾಮಗಳಲ್ಲಿ ಕೆಲಸ ಮಾಡುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರೈತರಿಗೆ ಇಸ್ರೇಲ್ ಮಾದರಿ ಕೃಷಿಗೆ ಪೂರಕ ಸೌಲಭ್ಯಗಳನ್ನು ಒದಗಿಸುವುದು ಉತ್ತಮ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹೊಸಕೋಟೆ

ರೈತರ ಅಭ್ಯುದಯದ ದೃಷ್ಟಿಯಿಂದ ಹಲವಾರು ಆಯಾಮಗಳಲ್ಲಿ ಕೆಲಸ ಮಾಡುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರೈತರಿಗೆ ಇಸ್ರೇಲ್ ಮಾದರಿ ಕೃಷಿಗೆ ಪೂರಕ ಸೌಲಭ್ಯಗಳನ್ನು ಒದಗಿಸುವುದು ಉತ್ತಮ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ತಾಲೂಕಿನ ಇಟ್ಟಸಂದ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಮ್ಮಿಕೊಂಡಿದ್ದ ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಅಂತರ್ಜಲ ವೃದ್ಧಿಸಿ ಜಲ ಸಂಪನ್ಮೂಲ ವೃದ್ಧಿಸುವ ಕೆಲಸವನ್ನು ಕೆರೆ ಹೂಳೆತ್ತುವ ಮೂಲಕ ಮಾಡುತ್ತಿದೆ. ಪ್ರಮುಖವಾಗಿ ಹೊಸಕೋಟೆಯಲ್ಲಿ ನೀರಾವರಿಗೆ ಯಾವುದೇ ರೀತಿಯ ಜಲಮೂಲಗಳಿಲ್ಲ. ಈ ನಡುವೆ ತಾಲೂಕಿಗೆ ವರ್ಷಕ್ಕೆ 2.4 ಟಿಎಂಸಿ ಮಳೆಯಾಗುತ್ತೆ. ಇದರಲ್ಲಿ 1.7 ಟಿಎಂಸಿ ನೀರನ್ನು ಭೂಮಿ ಹೀರಿಕೊಂಡು ಅಂತರ್ಜಲಕ್ಕೆ ಹೋಗುತ್ತದೆ. ಆದರೆ ನಾವು ವರ್ಷಕ್ಕೆ ಕೊಳವೆ ಬಾವಿ ಮೂಲಕ 3 ಟಿಎಂಸಿ ನೀರನ್ನು ತೆಗೆದು ಬಳಕೆ ಮಾಡುತ್ತಿದ್ದೇವೆ. ಅಂತರ್ಜಲ ಕುಸಿತದ ಪರಿಣಾಮವಾಗಿಯೇ 1.5 ಸಾವಿರ ಅಡಿ ಕೊಳವೆಬಾವಿ ಕೊರೆಯುವ ಸನ್ನಿವೇಶ ಎದುರಾಗಿದೆ ಎಂದರು. ಅನುಗೊಂಡನಹಳ್ಳಿ, ಜಡಿಗೇನಹಳ್ಳಿ ಹೋಬಳಿಯಲ್ಲಿ ಏತನೀರಾವರಿ ಯೋಜನೆ ಮೂಲಕ 38 ಕೆರೆಗಳಿಗೆ 43 ಎಂಎಲ್‌ಡಿ ನೀರು ತರಲಾಗಿದೆ. ಉಳಿದಂತೆ ನಂದಗುಡಿ-ಸೂಲಿಬೆಲೆ ಹೋಬಳಿಗೆ ಯಾವುದೇ ಏತ ನೀರಾವರಿ ಯೋಜನೆ ತಂದಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ೫೫ ಕೆರೆಗೆಳಿಗೆ ಎಚ್‌ಎನ್ ವ್ಯಾಲಿ ಏತ ನೀರಾವರಿ ಮೂಲಕ ಕೆರೆ ತುಂಬಿಸುತ್ತೇನೆ. ಇದರಿಂದ ಅಂತರ್ಜಲ ವೃದ್ಧಿ ಸಾಧ್ಯ. ಗ್ರಾಮಾಭಿವೃದ್ಧಿ ಸಂಸ್ಥೆ ಕೆರೆ ಹೂಳೆತ್ತುವ ಮೂಲಕ ಅಂತರ್ಜಲ ವೃದ್ಧಿಸುತ್ತಿದೆ. ತಾಲೂಕಿನಲ್ಲಿ ಕಡಿಮೆ ನೀರು ಬಳಸಿ ಇಸ್ರೇಲ್ ಮಾದರಿ ಕೃಷಿಗೆ ಪೂರಕ ಸಲಕರಣೆ, ತರಬೇತಿ ಒದಗಿಸಬೇಕು ಎಂದರು.

ಕೆಪಿಸಿಸಿ ಕಾರ್ಯದರ್ಶಿ ಇಟ್ಟಸಂದ್ರ ಬಿ.ಗೋಪಾಲ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸರ್ಕಾರಕ್ಕೆ ಪರ್ಯಾಯವಾಗಿ ಅಭಿವೃದ್ಧಿಗೆ ಪೂರಕವಾದ ಹತ್ತಾರು ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡುತ್ತಿದೆ. ಗ್ರಾಮಗಳನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಮುನ್ನೆಲೆಗೆ ತರುತ್ತಿರುವುದು ಪ್ರಶಂಸನೀಯ ಎಂದರು.

ಜಿಲ್ಲಾ ನಿರ್ದೇಶಕ ಉಮರಬ್ಬ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆಯಿಂದ ಕೆರೆಗಳ ಅಭಿವೃದ್ಧಿಗಾಗಿ 2016-17ರಲ್ಲಿ ನಮ್ಮೂರ ನಮ್ಮ ಕೆರೆ ಹೆಸರಿನಲ್ಲಿ ಹೂಳೆತ್ತುವ ಕಾರ್ಯ ಪ್ರಾರಂಭಮಾಡಿದ್ದು ಇದುವರೆಗೆ ತಾಲೂಕಿನಲ್ಲಿ 8 ಕೆರೆಗಳನ್ನು 1.9ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗಿದೆ ಎಂದು ಹೇಳಿದರು.

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಬಿವಿ.ರಾಜಶೇಖರ್‌ಗೌಡ, ತಾಪಂ ಇಒ ಡಾ.ಸಿ.ಎನ್.ನಾರಾಯಣಸ್ವಾಮಿ, ಎಸ್‌ಕೆಡಿಆರ್‌ಪಿ ತಾಲೂಕು ಯೋಜನಾಧಿಕಾರಿ ಹರೀಶ್, ಗ್ರಾಪಂ ಅಧ್ಯಕ್ಷೆ ರೂಪ ಚನ್ನಕೇಶವ, ಕೆರೆ ಸಮಿತಿ ಅಧ್ಯಕ್ಷ ರಮೇಶ್, ಮಾಜಿ ಅಧ್ಯಕ್ಷ ಬಿಂದು ದೇವೇಗೌಡ, ಪಿಡಿಒ ಪುಷ್ಪಲತಾ, ಮುಖಂಡರಾದ ಮುನಿಶಾಮಯ್ಯ, ಕೊಂಡ್ರಹಳ್ಳಿ ಧರ್ಮೇಶ್ ಇತರರು ಹಾಜರಿದ್ದರು.