ಸಾರಾಂಶ
ಅಧಿಕಾರಿಗಳಿಗೆ ಅಪರ ಕೃಷಿ ನಿರ್ದೇಶಕ । ಪ್ರಗತಿ ಪರಿಶೀಲನಾ ಸಭೆ । ಎಲ್ಲ ಸಿದ್ಧತೆಗೆ ಅಧಿಕಾರಿಗಳಿಗೆ ಸೂಚನೆ
ಕನ್ನಡಪ್ರಭ ವಾರ್ತೆ ಹಾಸನರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು, ರೈತರಿಗೆ ಸಕಾಲದಲ್ಲಿ ಉತ್ತಮ ಗುಣಮಟ್ಟದ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳನ್ನು ಒದಗಿಸಲು ಪೂರ್ವಸಿದ್ಧತೆಯ ಬಗ್ಗೆ ಹಾಸನದ ರಸಗೊಬ್ಬರ ಹಾಗೂ ಬಿತ್ತನೆ ಬೀಜ ಗೋದಾಮುಗಳನ್ನು ಪರಿಶೀಲಿಸಿ ಇಲಾಖೆ ಎಲ್ಲಾ ರೀತಿಯ ಸಿದ್ಧತೆ ಕೈಗೊಳ್ಳುವಂತೆ ಅಪರ ಕೃಷಿ ನಿರ್ದೇಶಕ ಹಾಗೂ ಹಾಸನ ಜಿಲ್ಲಾ ನೋಡಲ್ ಅಧಿಕಾರಿ ಕರುಣಾಕರ ಶೆಟ್ಟಿ ತಿಳಿಸಿದ್ದಾರೆ.
ನಗರದ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಬಳಿಕ ನಗರದ ಕರ್ನಾಟಕ ರಾಜ್ಯ ಬೀಜ ನಿಗಮ, ರಾಷ್ಟ್ರೀಯ ಬೀಜ ನಿಗಮ, ಕರ್ನಾಟಕ ರಾಜ್ಯ ಮಾರಾಟ ಮಹಾ ಮಂಡಳ ಹಾಗೂ ಖಾಸಗಿ ರಸಗೊಬ್ಬರ ಮಾರಾಟಗಾರರ ಮಳಿಗೆಗಳಿಗೆ ಹಾಗೂ ಬೇಲೂರು ತಾಲೂಕಿನ ಹಗರೆ ಮತ್ತು ಕಸಬಾ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಜಿಲ್ಲೆಯಲ್ಲಿ ಒಟ್ಟಾರೆ ರಾಗಿ ೮೨೧೨ ಕ್ವಿಂಟಾಲ್, ಭತ್ತ ೩೧೮೪ ಕ್ವಿಂಟಾಲ್, ತೊಗರಿ-೨೦ ಕ್ವಿಂಟಾಲ್, ಉದ್ದು-೧೯ ಕ್ವಿಂಟಾಲ್, ಸೂರ್ಯಕಾಂತಿ ೩೪ ಕ್ವಿಂಟಾಲ್, ಮುಸುಕಿನ ಜೋಳ-೬೭೫೦ ಕ್ವಿಂಟಾಲ್ ನಷ್ಟು ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ದಾಸ್ತಾನು ಇರುತ್ತದೆ. ಜಿಲ್ಲೆಗೆ ಒಟ್ಟು ಯೂರಿಯಾ ೧೫೬೮೦, ಡಿಎಪಿ ೫೯೨೪, ಎಂಒಪಿ ೨೮೧೯, ಕಾಂಪ್ಲೆಕ್ಸ್ ೧೮೫೪೦, ಒಟ್ಟು ೪೪೨೦೨ ಮೆಟ್ರಿಕ್ ಟನ್ ರಸಗೊಬ್ಬರ ಜೂನ್ ಮಾಹೆಯ ಅಂತ್ಯಕ್ಕೆ ಬೇಡಿಕೆ ಇದ್ದು, ಪ್ರಸ್ತುತ ಜಿಲ್ಲೆಯ ಖಾಸಗಿ ಮಾರಾಟಗಾರರು ಸೇರಿ ಒಟ್ಟಾರೆ ಯೂರಿಯಾ ೨೨೦೧೭ ಮೆಟ್ರಿಕ್ ಟನ್, ಡಿಎಪಿ ೩೨೧೭ ಮೆಟ್ರಿಕ್ ಟನ್, ಎಂಒಪಿ ೨೯೨೨ ಮೆಟ್ರಿಕ್ ಟನ್, ಕಾಂಪ್ಲೆಕ್ಸ್ ೩೪೫೨೨ ಮೆಟ್ರಿಕ್ ಟನ್ ಸೇರಿ ಒಟ್ಟು ೬೩೨೫೯ ಮೆಟ್ರಿಕ್ ಟನ್ ರಸಗೊಬ್ಬರ ಲಭ್ಯವಿರುತ್ತದೆ. ಕೃಷಿ ಇಲಾಖೆಯ ರಸಗೊಬ್ಬರ ಪರಿವೀಕ್ಷಕರು ನಿಯಮಿತವಾಗಿ ರಸಗೊಬ್ಬರ ಮತ್ತು ಬಿತ್ತನೆ ಬೀಜ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲಿಸಲು ಹಾಗೂ ಮಾದರಿ ಸಂಗ್ರಹಿಸಿ ಪರೀಕ್ಷಿಸಲು ಕರುಣಾಕರ ಶೆಟ್ಟಿ ಸೂಚಿಸಿದರು.
ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕಿ ಎಂ.ಎನ್.ರಾಜಸುಲೋಚನಾ, ಉಪ ಕೃಷಿ ನಿರ್ದೇಶಕ ಎ.ಎಸ್.ಕೋಕಿಲ, ಸಹಾಯಕ ಕೃಷಿ ನಿರ್ದೇಶಕ ಮನು ಎಂ.ಡಿ. ಹಾಗೂ ಕೃಷಿ ಅಧಿಕಾರಿಗಳು ಹಾಜರಿದ್ದರು.